ಶಬರಿಮಲೆ ತೀರ್ಪು ವಿರೋಧಿಸಿ ಪ್ರತಿಭಟನೆ: ದೇವಳಕ್ಕೆ ಭೇಟಿ ನೀಡುವ ಮಹಿಳೆಯರನ್ನು ತಡೆಯುವುದಾಗಿ ಎಚ್ಚರಿಕೆ

Update: 2018-10-15 11:16 GMT

ತಿರುವನಂತಪುರಂ, ಅ. 15: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶಾವಕಾಶ ನೀಡಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶವನ್ನು ವಿರೋಧಿಸಿ ಮಹಿಳೆಯರೂ ಮಕ್ಕಳೂ ಸೇರಿದಂತೆ ಸಾವಿರಾರು ಮಂದಿ ತಿರುವನಂತಪುರಂನಲ್ಲಿ ಇಂದು ಪ್ರತಿಭಟನೆ ನಡೆಸಿದ್ದಾರೆ.

ತಿಂಗಳ ಪೂಜೆಗೆ ಬುಧವಾರ ದೇವಸ್ಥಾನ ತೆರೆದುಕೊಳ್ಳಲಿದ್ದು ಈ ಸಂದರ್ಭ ಅಲ್ಲಿಗೆ ಮಹಿಳೆಯರಿಗೆ  ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರಲ್ಲದೆ ಅಗತ್ಯ ಬಿದ್ದರೆ ದೇವಳಕ್ಕೆ ತೆರಳುವ ಹಾದಿಗಳಲ್ಲಿ ತಾವು ಅಡ್ಡ ಮಲಗುವುದಾಗಿ ಹೇಳಿದ್ದಾರೆ.

ಸೋಮವಾರದ ಪ್ರತಿಭಟನೆಯನ್ನು ಬಿಜೆಪಿ ನೇತೃತ್ವದ ಎನ್‍ಡಿಎ ಸಂಘಟಿಸಿತ್ತು. ಅಯ್ಯಪ್ಪ ದೇವರ ಚಿತ್ರಗಳನ್ನು ಹಿಡಿದುಕೊಂಡಿದ್ದ ಭಕ್ತರು ಘೋಷಣೆಗಳನ್ನು ಕೂಗಿದರೆ ನೂರಾರು ಮಂದಿ ಬಿಜೆಪಿಯ ಧ್ವಜಗಳನ್ನೂ ಹಿಡಿದಿದ್ದರು.

ನ. 17ರಂದು ಆರಂಭಗೊಳ್ಳಲಿರುವ ಶಬರಿಮಲೆಯ ಮೂರು ತಿಂಗಳ ವಾರ್ಷಿಕ ಮಂಡಲಂ-ಮಕರವಿಳಕ್ಕು ಋತುವಿಗೆ ಏರ್ಪಾಟು ಮಾಡುವ ಕುರಿತು ಚರ್ಚಿಸಲು ಮಂಗಳವಾರ ದೇವಳದ ಆಡಳಿತ ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಯು ತಂತ್ರಿ ಕುಟುಂಬ, ಪಂಡಲಂ ರಾಜವಂಶದ ಸದಸ್ಯರು ಹಾಗೂ ಅಯ್ಯಪ್ಪ ಸೇವಾ ಸಂಗಮ್ ಜತೆ ಚರ್ಚಿಸಲಿದೆ.

''ಅವರು ಬಂದು ಚರ್ಚಿಸಲಿ ನಾವೊಂದು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ'' ಎಂದು ಮಂಡಳಿಯ ಅಧ್ಯಕ್ಷ ಎ ಪದ್ಮಕುಮಾರ್ ಹೇಳಿದ್ದಾರೆ. ಬುಧವಾರ ತಿಂಗಳ ಪೂಜೆಗೆ ದೇವಳ ತೆರೆದುಕೊಳ್ಳುವ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಆದರೆ ಮಹಿಳಾ ಭಕ್ತರಿಗೆ ಯಾವುದೇ ವಿಶೇಷ ಏರ್ಪಾಟುಗಳನ್ನು ಮಾಡಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸರಕಾರ ಸೂಕ್ತ ತೀರ್ಮಾನವನ್ನು 24 ಗಂಟೆಗಳೊಳಗೆ ಕೈಗೊಳ್ಳದೇ ಇದ್ದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಶ್ರೀಧರನ್ ಪಿಳ್ಳೈ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News