ಪ್ರಧಾನ ಮಂತ್ರಿ ಆವಾಸ್ ಯೋಜನೆ: ನಗರ ಭಾರತದ ವಸತಿ ಸಮಸ್ಯೆಯನ್ನು ನಿಜವಾಗಿಯೂ ಪರಿಹರಿಸಬಲ್ಲದೇ?

Update: 2018-10-15 18:32 GMT

ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರಕಾರವು 2020ರ ವೇಳೆಗೆ ‘ಎಲ್ಲರಿಗೂ ಮನೆ’ ಎಂಬ ಆಶ್ವಾಸನೆಯನ್ನು ವೈಭವೀಕರಿಸುತ್ತಾ ಬಂದಿದೆ. 2019ರ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಾಗ ಅದು ‘ಪ್ರಧಾನಮಂತ್ರಿ ಆವಾಸ್ ಯೋಜನೆ’ ಎಂದು ಕರೆಯಲ್ಪಡುವ ತನ್ನ ಯೋಜನೆಯ ಯಶಸ್ಸಿನ ಬಗ್ಗೆ ಇನ್ನಷ್ಟು ಜೋರಾಗಿ ಕೂಗಿ ಹೇಳುತ್ತಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ತನ್ನ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘‘ಈಗಾಗಲೇ ಒಂದು ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿ ಹಳ್ಳಿಗಳಲ್ಲಿ ಫಲಾನುಭವಿಗಳಿಗೆ ವಿತರಿಸಲಾಗಿದೆ ಮತ್ತು ನಗರಗಳಲ್ಲಿ 54 ಲಕ್ಷ ಮನೆಗಳ ನಿರ್ಮಾಣಕ್ಕೆ ಅಂಗೀಕಾರ ನೀಡಲಾಗಿದೆ’’ ಎಂದು ಪುನಃ ಪುನಃ ಹೇಳುತ್ತಿದ್ದಾರೆ. ಆದರೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ದತ್ತಾಂಶಗಳ ಪ್ರಕಾರ ಆಗಸ್ಟ್ ತಿಂಗಳವರೆಗೆ 53.7 ಲಕ್ಷ ಮನೆಗಳನ್ನು ನಗರ ಪ್ರದೇಶಗಳಿಗೆ ಮಂಜೂರು ಮಾಡಲಾಗಿದೆ. ಇವುಗಳಲ್ಲಿ 8.3 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಸರಕಾರವು ನಗರ ವಸತಿಗಳನ್ನು ನಿರ್ಮಿಸಲು ರಾಜ್ಯಗಳಿಗೆ ರೂ.78,000 ಕೋಟಿಗಿಂತ ಹೆಚ್ಚು ಮೊತ್ತವನ್ನು ನೀಡಿದೆ. ಆದರೆ ರಿಯಲ್ ಎಸ್ಟೇಟ್ ಬೆಲೆ ಭಾರೀ ದುಬಾರಿಯಾಗಿರುವ ಮುಂಬೈಯಂತಹ ನಗರಗಳಲ್ಲಿ, ನಗರದಿಂದ ತುಂಬ ದೂರದಲ್ಲಿರುವ ಹೊರವಲಯಗಳಲ್ಲಿ ಮತ್ತು ಸ್ಯಾಟಲೈಟ್ ಪಟ್ಟಣಗಳಲ್ಲಷ್ಟೇ ಈ ಯೋಜನೆ ಅನುಷ್ಠಾನ ಸಾಧ್ಯವಾಗಿರುವುದರಿಂದ, ಇಂತಹ ದೂರದ ಪ್ರದೇಶಗಳಿಗೆ ಯೋಜನೆ ಸೀಮಿತಗೊಳ್ಳಬೇಕಾಗಿದೆ. ಹಾಗಾದರೆ ಈ ಯೋಜನೆಯು ಭಾರತದ ನಗರಗಳಲ್ಲಿ ಕೈಗೆಟಕುವ ಬೆಲೆಗೆ ಮನೆಗಳು ಸಿಗದಿರುವ ಸಮಸ್ಯೆಗೆ ಪರಿಹಾರವಾಗಲು ಸಾಧ್ಯವೇ?

ರಿಯಲ್ ಎಸ್ಟೇಟ್ ಡೆವಲಪರ್‌ಗಳು ಈ ನಿಟ್ಟಿನಲ್ಲಿ ಆಶಾವಾದಿಗಳಾಗಿದ್ದರೂ, ಕೆಲವರ ಪ್ರಕಾರ ನಗರಗಳ ಶ್ರಮಶಕ್ತಿ, ದುಡಿಮೆಗಾರರು ತಮ್ಮ ಕೆಲಸದ/ನೌಕರಿಯ ಸ್ಥಳಗಳಿಂದ ತುಂಬಾ ದೂರಕ್ಕೆ ತಳ್ಳಲ್ಪಡುತ್ತಾರೆ. ಪರಿಣಾಮವಾಗಿ ಅವರಿಗೆ ಈ ಯೋಜನೆ ಉಪಯೋಗವಾಗುವುದಿಲ್ಲ.

ನಾಲ್ಕು ಅಂಶಗಳು
1980ರ ದಶಕದಲ್ಲಿ ಕಾಂಗ್ರೆಸ್ ಸರಕಾರ ಹಮ್ಮಿಕೊಂಡಿದ್ದ, ‘ಇಂದಿರಾ ಆವಾಸ್ ಯೋಜನೆ’ಯ ಮನೆಗಳನ್ನು ನಿರ್ಮಿಸಿಕೊಳ್ಳಲು ಗ್ರಾಮೀಣ ಬಡಜನತೆಗೆ ಸರಕಾರ ರೂ. 70,000 ನಗದು ಪ್ರೋತ್ಸಾಹ ಧನ ನೀಡುತ್ತಿತ್ತು. ಹೊಸ ಯೋಜನೆಯು ಗ್ರಾಮೀಣ ಮನೆಗಳ ನಿರ್ಮಾಣಕ್ಕೆ ರೂ. 1.2 ಲಕ್ಷದಿಂದ 1.3 ಲಕ್ಷದವರೆಗೆ ಮತ್ತು ನಗರ ಮನೆಗಳಿಗೆ 1.3 ಲಕ್ಷದಿಂದ ರೂಪಾಯಿ 2.6 ಲಕ್ಷದವರೆಗೆ ಹಣಕಾಸು ನೆರವು ನೀಡುತ್ತದೆ. ಇದು ಸ್ವಂತ ಮನೆಯಿಲ್ಲದ ಕೆಳ ಆದಾಯ ಮತ್ತು ಮಧ್ಯಮ ಆದಾಯದ ಜನರಿಗಾಗಿರುವ ಯೋಜನೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ನಗರ ಘಟಕದಲ್ಲಿ ನಾಲ್ಕು ಅಂಶಗಳಿವೆ. ಖಾಸಗಿ ಬಿಲ್ಡರ್‌ಗಳಿಗೆ ಕೊಳಚೆ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ‘ಕೊಳಚೆ ಪುನರ್ವಸತಿ ಯೋಜನೆ’ ಮೊದಲ ಅಂಶ. ಎರಡನೆಯ ಅಂಶ, ಖಾಸಗಿ ಜಮೀನಿನಲ್ಲಿ ತಮ್ಮದೇ ಆದ ಮನೆಗಳನ್ನು ಕಟ್ಟಿಕೊಳ್ಳಲು ಕುಟುಂಬಗಳಿಗೆ ಸಹಾಯಧನ ನೀಡುವ ಯೋಜನೆ.

ಸಾಲಕ್ಕೆ ಜೋಡಿಸಲ್ಪಡುವ ಆರ್ಥಿಕ ನೆರವು ನೀಡಿಕೆ ಮೂರನೆಯ ಅಂಶ. ವಾರ್ಷಿಕ 18 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಮತ್ತು ಮೊದಲ ಬಾರಿಗೆ ಮನೆಯನ್ನು ಖರೀದಿಸುವ ವ್ಯಕ್ತಿಗೆ ಗೃಹ ಸಾಲ ಸಬ್ಸಿಡಿ ನೀಡಲಾಗುತ್ತದೆ. ಅರ್ಹ ಗೃಹ ಖರೀದಿದಾರರ ಗೃಹ ಸಾಲದ ಅರ್ಜಿ ಮಂಜೂರು ಆಯಿತೆಂದರೆ ಆಗ ಸರಕಾರವು ಸಬ್ಸಿಡಿ ಮೊತ್ತವನ್ನು ನೇರವಾಗಿ ಆತನ ಸಾಲದ ಬ್ಯಾಂಕ್ ಖಾತೆಗೆ ರವಾನಿಸುತ್ತದೆ. ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿಯ ಓರ್ವ ಹಿರಿಯ ಅಧಿಕಾರಿ ಹೇಳುವ ಪ್ರಕಾರ ಈ ಸಾಲಕ್ಕೆ ಜೋಡಿಸಲಾಗುವ ಸಬ್ಸಿಡಿಗಳು ಆವಾಸ್ ಯೋಜನೆಯ ಅತ್ಯಂತ ಜನಪ್ರಿಯ ಭಾಗವಾಗಿದೆ. ಮಧ್ಯಮ ಆದಾಯದ ಜನರು ಈ ಯೋಜನೆಯ ಅತ್ಯಂತ ಹೆಚ್ಚು ಫಲಾನುಭವಿಗಳಾಗಿದ್ದಾರೆ.

ಕೈಗೆಟಕುವ ಮನೆಯ ಕನಸು

ಸರಕಾರವು ತನ್ನದೇ ಆದ ನಿವೇಶನದಲ್ಲಿ ಅಥವಾ ಸ್ಥಳೀಯ ನಗರಾಡಳಿತಗಳ ಮಾಲಕತ್ವದ ಜಮೀನಿನಲ್ಲಿ ಕೈಗೆಟುಕುವ ಬೆಲೆಗೆ ಮನೆಗಳನ್ನು ನಿರ್ಮಿಸಿಕೊಡುವುದು ಆವಾಸ್ ಯೋಜನೆಯ ನಾಲ್ಕನೇ ಅಂಶವಾಗಿದೆ. ಇದು ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯ ಯೋಜನೆಯಾಗಿದ್ದು ಈಗಾಗಲೇ 2.4 ಲಕ್ಷ ಹೌಸಿಂಗ್ ಯೂನಿಟ್‌ಗಳ ನಿರ್ಮಾಣಕ್ಕೆ ಅಂಗೀಕಾರ ನೀಡಲಾಗಿದೆ ಆದರೆ ಯಾವುದೇ ಯೋಜನೆ ಇದುವರೆಗೆ ಸಂಪೂರ್ಣವಾಗಿಲ್ಲ. ಸಬ್ಸಿಡಿಯ ಮೊತ್ತದಲ್ಲೂ ಬಹಳಷ್ಟು ವಿತರಣೆ ಆಗಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆ ಯಶಸ್ವಿಯಾದೀತೇ?

 ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಗ್ಗೆ ಡೆವಲಪರ್‌ಗಳು ತುಂಬಾ ಉತ್ಸಾಹಿಗಳಾಗಿದ್ದರೂ, ಅವರು ಯೋಜನೆಯ ಎರಡು ಮುಖ್ಯ ದೋಷಗಳನ್ನು ಗುರುತಿಸಿದ್ದಾರೆ. ಒಂದು: ವಸತಿ ಯೋಜನೆಗಳನ್ನು ಮಂಜೂರು ಮಾಡಿಸಲು ತೆಗೆದುಕೊಳ್ಳುವ ತುಂಬ ದೀರ್ಘ ಸಮಯ. ಎರಡು: ಬೃಹತ್ ನಗರಗಳಲ್ಲಿ ಜನರ ಕೈಗೆಟಕುವ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುವುದು ನಗರಗಳ ಹೊರಭಾಗಗಳಲ್ಲಿ, ಅವರು ಕೆಲಸ ಮಾಡುವ ಸ್ಥಳದಿಂದ ಬಹಳ ದೂರದ ಸ್ಥಳಗಳಲ್ಲಿ ಮಾತ್ರ ಸಾಧ್ಯ. ಈ ಎರಡೂ ಕೊರತೆಗಳು ಚೌಕಟ್ಟಿಗೆ ಸಂಬಂಧಿಸಿದ ನ್ಯೂನತೆ (ಸ್ಟ್ರಕ್ಚರಲ್ ಡಿಫಿಷಿಯನ್ಸಿ)ಗಳು; ಇವುಗಳನ್ನು ಪರಿಹರಿಸಿದರೆ ಯೋಜನೆ ಇನ್ನಷ್ಟು ಯಶಸ್ವಿಯಾಗಬಹುದು. ಆದರೆ ಮುಂಬೈಯ ಓರ್ವ ನಗರ ಯೋಜಕರಾದ ಪಿ.ಕೆ. ದಾಸ್ ಅವರ ಪ್ರಕಾರ ನಗರ ಪ್ರದೇಶಗಳಲ್ಲಿ ಈ ಯೋಜನೆ ಅಷ್ಟೊಂದು ಯಶಸ್ವಿಯಾಗಲಾರದು. ಯಾಕೆಂದರೆ ಸಾರ್ವಜನಿಕ-ಖಾಸಗಿ ಸಹಯೋಗದಲ್ಲಿ ಗೃಹ ನಿರ್ಮಾಣವೆಂದರೆ ಅಂತಿಮವಾಗಿ ಹಲವನ್ನು ‘ಉಚಿತವಾಗಿ’ ಬಿಲ್ಡರ್‌ಗಳಿಗೆ ನೀಡುವುದೇ ಆಗಿಬಿಡುತ್ತದೆ. ‘‘ಬಿಲ್ಡರ್‌ಗಳು ಪನ್ವೇಲ್ನಂತಹ ದೂರದ ಸ್ಥಳಗಳಲ್ಲಿ ಕಡಿಮೆ ದರದಲ್ಲಿ ಜಮೀನನ್ನು ಖರೀದಿಸಿ, ಸರಕಾರದಿಂದ ನಗದು ಸಬ್ಸಿಡಿ ಮತ್ತು ಇತರ ರಿಯಾಯಿತಿಗಳನ್ನು ಬಾಚಿಕೊಳ್ಳುತ್ತಾರೆ. ನಗರದಲ್ಲಿ ನೌಕರಿ ಮಾಡುವವರು ಅಷ್ಟೊಂದು ದೂರದಲ್ಲಿ ಮನೆ ಖರೀದಿಸುವುದಿಲ್ಲ. ಆದ್ದರಿಂದ ಈ ಯೋಜನೆ ಸರಕಾರದ ಪಾಲಿಗೆ ಊಹಾತ್ಮಕ ಬಂಡವಾಳ ಹೂಡುವಿಕೆಯಾಗಿದೆ.’’

ಕೃಪೆ: scroll.in

Writer - ಆರೀಫಾ ಜೊಹರಿ

contributor

Editor - ಆರೀಫಾ ಜೊಹರಿ

contributor

Similar News