ಎಟಿಪಿ ರ್ಯಾಂಕಿಂಗ್: ದ್ವಿತೀಯ ಸ್ಥಾನಕ್ಕೇರಿದ ಜೊಕೊವಿಕ್

Update: 2018-10-15 18:54 GMT

ಪ್ಯಾರಿಸ್, ಅ.15: ಶಾಂೈನಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದ ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್ ಸೋಮವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಎರಡನೇ ಸ್ಥಾನದಲ್ಲಿದ್ದ ರೋಜರ್ ಫೆಡರರ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಪೇನ್ ಆಟಗಾರ ರಫೆಲ್ ನಡಾಲ್ ಯುಎಸ್ ಓಪನ್ ಬಳಿಕ ಎಲ್ಲ ಟೂರ್ನಿಗಳಿಂದ ಹೊರಗುಳಿದಿದ್ದರೂ ನಂ.1 ಆಟಗಾರನಾಗಿ ಮುಂದುವರಿದ್ದಾರೆ. 7445 ಅಂಕ ಗಳಿಸಿರುವ ಜೊಕೊವಿಕ್ ನಂ.1 ಆಟಗಾರ ನಡಾಲ್‌ಗಿಂತ ಕೇವಲ 215 ಅಂಕದಿಂದ ಹಿಂದಿದ್ದಾರೆ. ವರ್ಷಾರಂಭದಲ್ಲಿ 20ನೇ ರ್ಯಾಂಕಿನಲ್ಲಿದ್ದ ಜೊಕೊವಿಕ್ ಈಗಾಗಲೇ ವಿಂಬಲ್ಡನ್ ಹಾಗೂ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದು ವರ್ಷಾಂತ್ಯಕ್ಕೆ ಅಗ್ರ ಸ್ಥಾನಕ್ಕೇರುವ ಸಾಧ್ಯತೆಯಿದೆ.

ಸಿಮೊನಾ ನಂ.1 ಆಟಗಾರ್ತಿ

ರೊಮಾನಿಯ ಆಟಗಾರ್ತಿ ಸಿಮೊನಾ ಹಾಲೆಪ್ ಸತತ ಎರಡನೇ ವರ್ಷ ನಂ.1 ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಈ ವರ್ಷ ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದಹಾಲೆಪ್ ವರ್ಷಾಂತ್ಯದ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಇದೀಗ ಬೆನ್ನುನೋವಿನಿಂದ ಬಳಲುತ್ತಿರುವ ಹಾಲೆಪ್ ಮುಂಬರುವ ಕ್ರೆಮ್ಲಿನ್ ಕಪ್ ಹಾಗೂ ಡಬ್ಲುಟಿಎ ಫೈನಲ್ಸ್‌ನಿಂದ ಹೊರಗುಳಿದಿದ್ದಾರೆ.

27ರ ಹರೆಯದ ಹಾಲೆಪ್‌ಗೆ 2018 ಯಶಸ್ವಿ ವರ್ಷವಾಗಿತ್ತು. ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದ ಹಾಲೆಪ್ ಕೆಲವೇ ತಿಂಗಳ ಬಳಿಕ ಪ್ಯಾರಿಸ್‌ನಲ್ಲಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಚೀನಾ ಓಪನ್‌ನ ಮೊದಲ ಸುತ್ತಿನಲ್ಲಿ ಗಾಯಗೊಂಡು ನಿವೃತ್ತಿಯಾಗಿದ್ದ ಸಿಮೊನಾ ಎಂಆರ್‌ಐ ಸ್ಕಾನಿಂಗ್‌ಗೆ ಒಳಗಾಗಿದ್ದರು. ಅದರಲ್ಲಿ ಅವರಿಗೆ ಡಿಸ್ಕ್ ಸಮಸ್ಯೆ ಕಂಡುಬಂದಿತ್ತು.

 ಹಾಲೆಪ್ 2018ರಲ್ಲಿ ಒಟ್ಟು 15 ಟೂರ್ನಮೆಂಟ್‌ಗಳನ್ನು ಆಡಿದ್ದಾರೆ. ಪ್ಯಾರಿಸ್‌ನಲ್ಲಿ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಬಳಿಕ ಹಾಲೆಪ್ ವಿಂಬಲ್ಡನ್ ಟೂರ್ನಿಯಲ್ಲಿ 3ನೇ ಸುತ್ತಿನಲ್ಲಿ ಸೋತಿದ್ದರು. ಯು.ಎಸ್. ಓಪನ್‌ನ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದರು. ಹಾಲೆಪ್ ಸ್ಥಿರ ಪ್ರದರ್ಶನ ನೀಡಲು ವಿಫಲರಾದರೂ ವರ್ಷವಿಡೀ ನಂ.1 ಸ್ಥಾನ ಕಾಯ್ದುಕೊಳ್ಳಲು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News