ಆಸ್ಟ್ರೇಲಿಯ ಪ್ರವಾಸ: ಭಾರತಕ್ಕೆ ಆಯ್ಕೆಯ ಚಿಂತೆ

Update: 2018-10-16 05:22 GMT

ಹೈದರಾಬಾದ್, ಅ.15: ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸಕ್ಕೆ ಭಾರತದ ಟೆಸ್ಟ್ ತಂಡವನ್ನು ಅಂತಿಮಗೊಳಿಸುವ ಮೊದಲು ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿಯು ಕೆಲವು ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕಾಗಿದೆ. ಅದರಲ್ಲಿ ಮುಖ್ಯವಾಗಿ ಮೂರನೇ ಆರಂಭಿಕ ಆಟಗಾರ ಹಾಗೂ ಎರಡನೇ ವಿಕೆಟ್‌ಕೀಪರ್ ಆಯ್ಕೆಯು ಕಗ್ಗಂಟಾಗಿ ಪರಿಣಿಮಿಸಿದೆ.

ರವಿವಾರ ಕೊನೆಗೊಂಡ ವೆಸ್ಟ್‌ಇಂಡೀಸ್ ವಿರುದ್ಧದ ಏಕಪಕ್ಷೀಯ ಟೆಸ್ಟ್ ಸರಣಿಯ ವೇಳೆ ಉತ್ತಮ ಪ್ರದರ್ಶನ ನೀಡಿದ್ದ ಯುವ ಆಟಗಾರರಾದ ಪೃಥ್ವಿ ಶಾ ಹಾಗೂ ರಿಷಭ್ ಪಂತ್ ಡಿ.6 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಅಂತಿಮ-11ರ ಬಳಗದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವುದು ನಿಶ್ಚಿತವೆನಿಸಿದೆ.

17 ಇನಿಂಗ್ಸ್‌ಗಳಲ್ಲಿ 14 ಬಾರಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿರುವ ಕೆಎಲ್ ರಾಹುಲ್‌ರನ್ನು ಟೀಮ್ ಮ್ಯಾನೇಜ್‌ಮೆಂಟ್ ವಿದೇಶಿ ಸರಣಿಯ ವೇಳೆ ಮೀಸಲು ಆರಂಭಿಕ ಆಟಗಾರನಾಗಿ ಉಳಿಸಿಕೊಳ್ಳಲು ಬಯಸಿದೆ.

ಆಸ್ಟ್ರೇಲಿಯ ಪ್ರವಾಸಕ್ಕೆ 17 ಸದಸ್ಯರ ತಂಡವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದ್ದು, ವೆಸ್ಟ್‌ಇಂಡೀಸ್ ವಿರುದ್ಧದ ಸರಣಿ ವೇಳೆ ಮೂರನೇ ಆರಂಭಿಕ ಆಟಗಾರನಾಗಿ ಆಯ್ಕೆಯಾಗಿದ್ದ ಮಯಾಂಕ್ ಅಗರ್ವಾಲ್ ಪ್ರಬಲ ಸ್ಪರ್ಧೆಯೊಡ್ಡುತ್ತಿದ್ದಾರೆ.

ಕಡಿಮೆ ಅನುಭವ ಹೊಂದಿರುವ ಅಗರ್ವಾಲ್, ಶಾ ಹಾಗೂ ರಾಹುಲ್‌ರನ್ನು ಆಸೀಸ್ ವಿರುದ್ಧ ಟೆಸ್ಟ್ ಸರಣಿಗೆ ಸ್ಪೆಷಲಿಸ್ಟ್ ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಲು ಆಯ್ಕೆ ಸಮಿತಿ ಹಿಂದೇಟು ಹಾಕುತ್ತಿದೆ. ರಾಹುಲ್ ಅವರ ಕಳಪೆ ಫಾರ್ಮ್ ಈ ಇಬ್ಬರು ಯುವ ಆಟಗಾರರ ಮೇಲೆ ಒತ್ತಡ ಉಂಟು ಮಾಡುವ ಸಾಧ್ಯತೆಯಿದೆ.

ಇಂತಹ ಪರಿಸ್ಥಿತಿಯಲ್ಲಿ ಅಗರ್ವಾಲ್ ಬದಲಿಗೆ ಕರುಣ್ ನಾಯರ್‌ಗೆಅವಕಾಶ ಸಿಗುವ ನಿರೀಕ್ಷೆಯಿದೆ. ಹಿರಿಯ ಆಟಗಾರ ಮುರಳಿ ವಿಜಯ್ ತಾಂತ್ರಿಕವಾಗಿ ಉತ್ತಮ ಆರಂಭಿಕ ಆಟಗಾರನಾಗಿದ್ದಾರೆ.

ದಕ್ಷಿಣ ಆಫ್ರಿಕ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಫಲ್ಯ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ವಿರುದ್ಧ ಬಹಿರಂಗವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ವಿಜಯ್‌ಗೆ ಆಸ್ಟ್ರೇಲಿಯ ಟಿಕೆಟ್ ಲಭಿಸುವುದು ಅನುಮಾನ.

ಶಿಖರ್ ಧವನ್ ಕೂಡ ಆರಂಭಿಕ ಆಟಗಾರನ ರೇಸ್‌ನಲ್ಲಿದ್ದಾರೆ. ಆದರೆ ಅವರು ಇತ್ತೀಚೆಗೆ ದೇಶಿಯ ಪಂದ್ಯಗಳಲ್ಲಿ ಆಡಿಲ್ಲ. ವಿದೇಶದಲ್ಲಿ ವೇಗಿಗಳ ಸ್ನೇಹಿ ಪಿಚ್‌ನಲ್ಲಿ ಸತತವಾಗಿ ವೈಫಲ್ಯ ಕಾಣುತ್ತಿರುವ ಧವನ್ ಆಸ್ಟ್ರೇಲಿಯ ಪ್ರವಾಸಕ್ಕೆ ಆಯ್ಕೆಯಾಗುವರೇ ಎಂಬ ಪ್ರಶ್ನೆ ಕಾಡುತ್ತಿದೆ. ವಿಕೆಟ್‌ಕೀಪರ್‌ಗಳ ಪೈಕಿ ವೃದ್ಧಿಮಾನ್ ಸಹಾ ಇನ್ನಷ್ಟೇ ಸಂಪೂರ್ಣ ಫಿಟ್‌ನೆಸ್ ಪಡೆಯಬೇಕಾಗಿದ್ದು, ಆಸ್ಟ್ರೇಲಿಯ ಟೆಸ್ಟ್ ಪ್ರವಾಸಕ್ಕೆ ಆಯ್ಕೆಯಾಗುವ ಸಾಧ್ಯತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News