ಕೊಲೆ ಪ್ರಕರಣ: ಸ್ವಯಂಘೋಷಿತ ದೇವಮಾನವ ರಾಂಪಾಲ್ ಗೆ ಜೀವಾವಧಿ

Update: 2018-10-16 18:14 GMT

ಚಂಡಿಗಢ, ಅ. 16: ಬರ್ವಾಲಾದ ಸತ್‌ಲೋಕ್ ಆಶ್ರಮದಲ್ಲಿ 2014ರಲ್ಲಿ ನಾಲ್ವರು ಮಹಿಳೆ ಹಾಗೂ ಮಗುವನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಸ್ವಘೋಷಿತ ದೇವ ಮಾನವ ರಾಮ್‌ಪಾಲ್ ಹಾಗೂ ಇತರ 14 ಮಂದಿಗೆ ಹಿಸ್ಸಾರ್‌ನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆ ಘೋಷಿಸಿದ ನ್ಯಾಯಾಧೀಶ ಡಾ. ಚಾಲಿಯಾ ಅವರು, ರಾಮ್‌ಪಾಲ್ ತಮ್ಮ ಜೀವನ ಪರ್ಯಂತ ಜೈಲಿನಲ್ಲಿ ಕಳೆಯಬೇಕು. ಪ್ರತಿ ಅಪರಾಧಿ ತಲಾ 2.05 ಲಕ್ಷ ರೂ. ದಂಡ ಪಾವತಿಸಬೇಕು ಎಂದು ಹೇಳಿದರು. ಹಿಸ್ಸಾರ್‌ನ ಹಿಸ್ಸಾರ್-ತೊಹನಾ ರಸ್ತೆಯಲ್ಲಿರುವ ಬರ್ವಾಲಾ ಪಟ್ಟಣದಿಂದ 3 ಕಿ. ಮೀ. ದೂರದಲ್ಲಿರುವ ರಾಮ್‌ಪಾಲ್ ಅವರ 12 ಎಕರೆ ವ್ಯಾಪಿಸಿಕೊಂಡಿರುವ ಸತ್‌ಲೋಕ್ ಆಶ್ರಮದಲ್ಲಿ 2014 ನವೆಂಬರ್ 19ರಂದು ನಾಲ್ವರು ಮಹಿಳೆಯರು ಹಾಗೂ ಮಗು ಶವವಾಗಿ ಪತ್ತೆಯಾದ ಬಳಿಕ ರಾಮ್‌ಪಾಲ್ ಹಾಗೂ ಅವರ ಅನುಯಾಯಿಗಳ ವಿರುದ್ಧ ಕೊಲೆ ಹಾಗೂ ಅಕ್ರಮ ಬಂಧನ ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಅವರ ಆಶ್ರಮದಲ್ಲಿ ಮಹಿಳೆಯ ಸಾವಿಗೆ ಸಂಬಂಧಿಸಿದ ಇತರ ಪ್ರಕರಣಗಳ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಅಕ್ಟೋಬರ್ 17ರಂದು ಘೋಷಿಸಲಿದೆ. ಎರಡೂ ಪ್ರಕರಣಗಳಲ್ಲಿ ರಾಮಪಾಲ್ ವಿರುದ್ಧ ಕೊಲೆ ಹಾಗೂ ಕ್ರಿಮಿನಲ್ ಸಂಚಿನ ಆರೋಪ ಹೊರಿಸಲಾಗಿದೆ. ಅಕ್ಟೋಬರ್ 12ರಂದು ನಡೆದ ಈ ಎರಡು ಕೊಲೆ ಪ್ರಕರಣದಲ್ಲಿ ಸತ್‌ಲೋಕ್ ಆಶ್ರಮದ ಮುಖ್ಯಸ್ಥ ದೋಷಿ ಎಂದು ನ್ಯಾಯಾಲಯ ಪರಿಗಣಿಸಿದೆ. ಹಿಸ್ಸಾರ್ ಕೇಂದ್ರ ಕಾರಾಗೃಹದ ಆವರಣದಲ್ಲಿ ರೂಪಿಸಲಾದ ತಾತ್ಕಾಲಿಕ ನ್ಯಾಯಾಲಯದಲ್ಲಿ ಎರಡೂ ಪ್ರಕರಣಗಳ ವಿಚಾರಣೆಗೆ ನಡೆಸಲಾಯಿತು ಹಾಗೂ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಯಿತು.

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ 2014ರಲ್ಲಿ ಹರ್ಯಾಣ ಪೊಲೀಸರು ಸತ್‌ಲೋಕ್ ಆಶ್ರಮಕ್ಕೆ ದಾಳಿ ನಡೆಸಿ ರಾಮ್‌ಪಾಲ್ ಅವರನ್ನು ಬಂಧಿಸಿದ್ದರು. ಆಶ್ರಮದ ಒಳಗಡೆ ರಾಮ್‌ಪಾಲ್‌ನ ಸಾವಿರಾರು ಅನುಯಾಯಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭ ಘರ್ಷಣೆ ನಡೆದಿತ್ತು. ಅನಂತರ ಪೊಲೀಸರು ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಿ ರಾಮ್‌ಪಾಲ್ ಹೊರ ಬರುವಂತೆ ಮಾಡಿದ್ದರು. ಕೊಲೆ, ಕೊಲೆಗೆ ಯತ್ನ, ಪಿತೂರಿ, ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಹಾಗೂ ಆತ್ಮಹತ್ಯೆಗೆ ಉತ್ತೇಜನದ ಆರೋಪದಲ್ಲಿ 2014 ನವೆಂಬರ್ 19ರಂದು ಅವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News