ಬೆಂಗಳೂರು : ನೇಣು ಬಿಗಿದು ವೈದ್ಯೆ ಆತ್ಮಹತ್ಯೆ

Update: 2018-10-16 15:25 GMT

ಬೆಂಗಳೂರು, ಅ.16: ನೇಣು ಬಿಗಿದುಕೊಂಡು ವೈದ್ಯೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ನಂದಿನಿ ಲೇಔಟ್ ಸಾಕಮ್ಮ ಬಡಾವಣೆಯಲ್ಲಿ ವಾಸವಾಗಿದ್ದ ಅಶ್ವಿನಿ(32) ಆತ್ಮಹತ್ಯೆಗೆ ಶರಣಾದ ವೈದ್ಯೆ ಎಂದು ಪೊಲೀಸರು ಗುರುತಿಸಿದ್ದಾರೆ.

ನಂದಿನಿ ಲೇಔಟ್ ಕೃಷ್ಣಾನಂದ ನಗರದಲ್ಲಿರುವ ಬಿಬಿಎಂಪಿ ಆಸ್ಪತ್ರೆಯಲ್ಲಿ ಅಶ್ವಿನಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
 
ಸೋಮವಾರ ರಾತ್ರಿ ಮನೆಯ ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಮಂಗಳವಾರ ಕೊಠಡಿಯನ್ನು ಪರೀಕ್ಷಿಸಿದಾಗ ಅಶ್ವಿನಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

3 ವರ್ಷದ ಹಿಂದೆ ಡಾ.ಲೋಹಿತ್ ಎಂಬಾತನೊಂದಿಗೆ ಅಶ್ವಿನಿ ವಿವಾಹವಾಗಿದ್ದರು. ನಮ್ಮ ಜೊತೆಯಲ್ಲೇ ವಾಸವಾಗಿದ್ದು ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಶ್ವಿನಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News