ಪಾಕ್: 7 ವರ್ಷದ ಬಾಲಕಿಯ ಅತ್ಯಾಚಾರಿಗೆ ಗಲ್ಲು

Update: 2018-10-17 14:54 GMT

ಲಾಹೋರ್, ಅ. 17: ಎಂಟು ಮಕ್ಕಳನ್ನು ಕೊಂದ ವ್ಯಕ್ತಿಯನ್ನು ಪಾಕಿಸ್ತಾನದ ಜೈಲೊಂದರಲ್ಲಿ ಬುಧವಾರ ಗಲ್ಲಿಗೇರಿಸಲಾಯಿತು. ಆತನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಕೋರುವ ಅರ್ಜಿಯನ್ನು ದೇಶದ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬಳಿಕ ಮುಹಮ್ಮದ್ ಇಮ್ರಾನ್‌ನನ್ನು ಲಾಹೋರ್‌ನಲ್ಲಿ ನೇಣಿಗೆ ಹಾಕಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಅವನು ಜನವರಿಯಲ್ಲಿ 7 ವರ್ಷದ ಝೈನಾಬ್ ಅನ್ಸಾರಿ ಎಂಬ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದನು. ಈ ಘಟನೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಪಂಜಾಬ್ ಪ್ರಾಂತದ ಕಸೂರ್ ನಗರದಲ್ಲಿರುವ ಕಸದ ತೊಟ್ಟಿಯಲ್ಲಿ ಅವನು ಬಾಲಕಿಯ ಶವವನ್ನು ಎಸೆದಿದ್ದನು. ಎರಡು ವಾರಗಳ ಬಳಿಕ ಅವನನ್ನು ಬಂಧಿಸಲಾಗಿತ್ತು. ತಾನು ಇತರ ಏಳು ಮಂದಿಯನ್ನು ಕೊಂದಿರುವುದಾಗಿ ಆತ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದನು.  ಬಾಲಕಿ ಝೈನಾಬ್ ತಂದೆ ಮುಹಮ್ಮದ್ ಅಮೀನ್ ಅನ್ಸಾರಿಯ ಸಮ್ಮುಖದಲ್ಲಿ ಹಂತಕನನ್ನು ಗಲ್ಲಿಗೇರಿಸಲಾಯಿತು.

ಇಂಥ ಹೀನ ಕೃತ್ಯವನ್ನು ಇತರರು ಮಾಡುವುದನ್ನು ತಡೆಯಲು ಅತ್ಯಾಚಾರಿ-ಹಂತಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಅನ್ಸಾರಿ ವಾದಿಸಿದ್ದರು. ಆದರೆ, ನ್ಯಾಯಾಲಯಗಳು ಇದಕ್ಕೆ ಅವಕಾಶ ನೀಡಲಿಲ್ಲ. ‘‘ನನ್ನ ಮಗಳು ಇನ್ನು ವಾಪಸ್ ಬರಲಾರಳು. ಆದರೆ, ನಮಗೆ ನ್ಯಾಯ ದೊರಕಿದ ತೃಪ್ತಿಯಿದೆ’’ ಎಂದು ಅನ್ಸಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News