ಯೂತ್ ಒಲಿಂಪಿಕ್ಸ್: ಕೃಷಿ ಕಾರ್ಮಿಕನ ಮಗ ಪ್ರವೀಣ್‌ಗೆ ಕಂಚು

Update: 2018-10-17 15:02 GMT

 ಬ್ಯುನಸ್‌ಐರಿಸ್,ಅ.17: ತಮಿಳುನಾಡಿನ ಕೃಷಿ ಕಾರ್ಮಿಕನ ಮಗ ಪ್ರವೀಣ್ ಚಿತ್ರವೇಲ್ ಅರ್ಜೆಂಟೀನದಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್‌ನ ಪುರುಷರ ತ್ರಿಪಲ್ ಜಂಪ್‌ನಲ್ಲಿ ಕಂಚು ಜಯಿಸಿದ್ದಾರೆ. ಈ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಗೆದ್ದುಕೊಟ್ಟಿದ್ದಾರೆ.

 ಮಂಗಳವಾರ ರಾತ್ರಿ ನಡೆದ ಸ್ಟೇಜ್-2 ಸ್ಪರ್ಧೆಯಲ್ಲಿ 15.68 ಮೀ. ದೂರಕ್ಕೆ ಜಿಗಿದ 17ರ ಹರೆಯದ ಪ್ರವೀಣ್ ಐದನೇ ಸ್ಥಾನ ಪಡೆದರು. ಸ್ಟೇಜ್-1ರಲ್ಲಿ 15.84 ಮೀ. ದೂರಕ್ಕೆ ಜಿಗಿದು ಉತ್ತಮ ಪ್ರದರ್ಶನ ನೀಡಿ ಮೂರನೇ ಸ್ಥಾನ ಪಡೆದಿದ್ದ ಪ್ರವೀಣ್ ಒಟ್ಟು 31.52 ಮೀ. ಸಾಧನೆಯೊಂದಿಗೆ ಕಂಚು ಜಯಿಸಿದರು.

ಹೊಸ ಮಾದರಿಯ ಪ್ರಕಾರ ಯೂತ್ ಒಲಿಂಪಿಕ್ಸ್‌ನ ಟ್ರಾಕ್ ಆ್ಯಂಡ್ ಫೀಲ್ಡ್‌ನಲ್ಲಿ ಫೈನಲ್ ಪಂದ್ಯವಿಲ್ಲ. ಪ್ರತಿ ಸ್ಪರ್ಧೆಯನ್ನು ಎರಡು ಬಾರಿ ನಡೆಸಲಾಗುತ್ತದೆ. ಅಂತಿಮವಾಗಿ ಎರಡು ಸುತ್ತಿನ ಫಲಿತಾಂಶವನ್ನು ಲೆಕ್ಕಹಾಕಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಕ್ಯೂಬಾದ ಅಲೆಜಾಂಡ್ರೊ ಡಿಯಾಝ್ ಸಂಘಟಿತ ಪ್ರಯತ್ನದಿಂದ 34.18 ಮೀ.(17.14+17.04)ದೂರಕ್ಕೆ ಜಿಗಿದು ಚಿನ್ನ ತನ್ನದಾಗಿಸಿಕೊಂಡರು. ನೈಜೀರಿಯದ ಇಮ್ಯಾನುಯೆಲ್ ಒರಿಟ್‌ಸೆಮೆಯಿವಾ(16.34+15.51)ಬೆಳ್ಳಿ ಗೆದ್ದುಕೊಂಡರು.

ಈಗ ನಡೆಯುತ್ತಿರುವ ಗೇಮ್ಸ್‌ನಲ್ಲಿ ಭಾರತ ಅಥ್ಲೆಟಿಕ್ಸ್ ವಿಭಾಗದಲ್ಲಿ ಎರಡನೇ ಪದಕ ಜಯಿಸಿದೆ. ಸೋಮವಾರ ಸೂರಜ್ ಪಾನ್ವರ್ ಪುರುಷರ 5,000 ಮೀ. ರೇಸ್‌ವಾಕ್ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದ್ದರು.

ಭಾರತ ಗೇಮ್ಸ್‌ನಲ್ಲಿ 12ನೇ ಪದಕ ಜಯಿಸಿದ್ದು, ಇದು ಮೊದಲ ಕಂಚಿನ ಪದಕವಾಗಿದೆ. ಭಾರತೀಯ ಅಥ್ಲೀಟ್‌ಗಳು ಈಗಾಗಲೇ ಮೂರು ಚಿನ್ನ ಹಾಗೂ 8 ಬೆಳ್ಳಿ ಪದಕ ಜಯಿಸಿದ್ದಾರೆ.

ಈ ವರ್ಷ ನಡೆದ ಮೊದಲ ಆವೃತ್ತಿಯ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಪ್ರವೀಣ್ ತಮಿಳುನಾಡಿನ ತಂಜಾವೂರು ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದವರು. ತಂದೆ ದಿನಗೂಲಿ ಕೃಷಿ ಕಾರ್ಮಿಕನಾಗಿದ್ದಾರೆ. ಚೆನ್ನೈನ ಸಾಯ್ ಕೇಂದ್ರದ ಉದ್ಯೋಗಿ ಇಂದಿರಾ ಸುರೇಶ್ ಅವರು ಪ್ರವೀಣ್ ಅವರ ಕೋಚ್ ಆಗಿದ್ದಾರೆ. ಪ್ರವೀಣ್ ಅವರು ಈಗಲೂ ಇಂದಿರಾ ಅವರೊಂದಿಗೆ ನಾಗರಕೊಯಿಲ್‌ನಲ್ಲಿ ತರಬೇತಿ ಪಡೆಯುತ್ತಿದ್ದರೂ ಮಂಗಳೂರಿನ ಕಾಲೇಜಿನಲ್ಲಿ ಕ್ರೀಡಾ ಕೋಟಾದಡಿ ಮೊದಲ ವರ್ಷ ಬಿಎ ಓದುತ್ತಿದ್ದಾರೆ.

 ‘‘ಪ್ರವೀಣ್ ಪರೀಕ್ಷೆಗೆ ಹಾಜರಾಗಲು ಮಂಗಳೂರಿಗೆ ಹೋಗುತ್ತಾರೆ. ನಾಗರಕೊಯಿಲ್‌ನಲ್ಲಿ ತರಬೇತಿ ನಡೆಸಲು ಕಾಲೇಜು ವಿನಾಯಿತಿ ನೀಡಿದೆ. ಈ ವರ್ಷ ಕೊಯಮತ್ತೂರಿನಲ್ಲಿ ನಡೆದ ಜೂನಿಯರ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಪ್ರವೀಣ್ ಏಶ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಒಲಿಂಪಿಕ್ಸ್‌ನಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ’’ ಎಂದು ಇಂದಿರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News