ಮುಂದಿನ ವರ್ಷ ವಿಶ್ವಸಂಸ್ಥೆಯ ಪೂರ್ಣ ಸದಸ್ಯನಾಗಿ ಫೆಲೆಸ್ತೀನ್: ಮಹಾಧಿವೇಶನದ ನಿರ್ಣಯ

Update: 2018-10-17 15:17 GMT

ವಿಶ್ವಸಂಸ್ಥೆ, ಅ. 17: 2019ರಲ್ಲಿ ಫೆಲೆಸ್ತೀನ್ 77 ಅಭಿವೃದ್ಧಿಶೀಲ ದೇಶಗಳ ಗುಂಪಿನ ಅಧ್ಯಕ್ಷತೆ ವಹಿಸಲಿದ್ದು, ಆಗ ವಿಶ್ವಸಂಸ್ಥೆಯ ಪೂರ್ಣಪ್ರಮಾಣದ ಸದಸ್ಯನಾಗಿ ಕಾರ್ಯನಿರ್ವಹಿಸಲು 193 ಸದಸ್ಯ ಬಲದ ವಿಶ್ವಸಂಸ್ಥೆಯ ಮಹಾಧಿವೇಶನ ಮಂಗಳವಾರ ಅದಕ್ಕೆ ಅವಕಾಶ ನೀಡಿದೆ.

ವಿಶ್ವಸಂಸ್ಥೆಯ ಈ ನಿರ್ಣಯದ ಪರವಾಗಿ 146 ಮತಗಳು ಚಲಾವಣೆಯಾದವು. ಅಮೆರಿಕ, ಇಸ್ರೇಲ್ ಮತ್ತು ಆಸ್ಟ್ರೇಲಿಯ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದವು. 15 ದೇಶಗಳು ಗೈರುಹಾಜರಾದರೆ, 29 ದೇಶಗಳು ಮತದಾನದಲ್ಲಿ ಭಾಗವಹಿಸಲಿಲ್ಲ.

ಪಶ್ಚಿಮ ದಂಡೆ, ಗಾಝಾ ಪಟ್ಟಿ ಮತ್ತು ಪೂರ್ವ ಜೆರುಸಲೇಮ್ ಪ್ರದೇಶಗಳನ್ನು ಒಟ್ಟುಗೂಡಿಸಿ ದೇಶವೊಂದನ್ನು ಸ್ಥಾಪಿಸುವ ಉದ್ದೇಶವನ್ನು ಫೆಲೆಸ್ತೀನಿಯರು ಹೊಂದಿದ್ದಾರೆ.

2012ರಲ್ಲೇ ವಸ್ತುಶಃ ಮಾನ್ಯತೆ

ಸಾರ್ವಭೌಮ ಫೆಲೆಸ್ತೀನ್ ದೇಶಕ್ಕೆ ವಸ್ತುಶಃ ಮಾನ್ಯತೆಯನ್ನು ವಿಶ್ವಸಂಸ್ಥೆಯ ಮಹಾಧಿವೇಶನ 2012ರಲ್ಲೇ ನೀಡಿತ್ತು. ವಿಶ್ವಸಂಸ್ಥೆಯು ಅಂದು ಫೆಲೆಸ್ತೀನ್ ಪ್ರಾಧಿಕಾರದ ‘ವಿಶ್ವಸಂಸ್ಥೆ ವೀಕ್ಷಕ’ ಸ್ಥಾನಮಾನವನ್ನು ಸದಸ್ಯೇತರ ದೇಶದ ಮಟ್ಟಕ್ಕೆ ಏರಿಸಿತ್ತು. ಈ ಸ್ಥಾನಮಾನವನ್ನು ವ್ಯಾಟಿಕನ್ ಹೊಂದಿದೆ.

ನೂತನ ಸ್ಥಾನಮಾನದ ಹಿನ್ನೆಲೆಯಲ್ಲಿ ಫೆಲೆಸ್ತೀನ್ ಮಹಾಧಿವೇಶನದ ಕೆಲವು ಮತದಾನಗಳಲ್ಲಿ ಭಾಗವಹಿಸಬಹುದಾಗಿದೆ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸೇರ್ಪಡೆಯಾಗಬಹುದಾಗಿದೆ. ಆದಾಗ್ಯೂ, ಸದಸ್ಯೇತರ ದೇಶವಾಗಿ ಫೆಲೆಸ್ತೀನ್ ಈ ಸಭೆಗಳಲ್ಲಿ ಸದಸ್ಯ ದೇಶಗಳು ಮಾತನಾಡುವ ಮೊದಲು ಮಾತನಾಡುವಂತಿಲ್ಲ.

ನೇರ ಮಾತುಕತೆ ಮುಖ್ಯ: ಅಮೆರಿಕ

‘‘ನೇರ ಮಾತುಕತೆಗಳಿಗೆ ಹೊರತಾಗಿ, ಬೇರೆ ವಿಧಾನಗಳಲ್ಲಿ ತಮ್ಮ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳುವ ಫೆಲೆಸ್ತೀನಿಯರ ಪ್ರಯತ್ನಗಳಿಗೆ ನಾವು ಬೆಂಬಲ ನೀಡುವುದಿಲ್ಲ. ಫೆಲೆಸ್ತೀನ್ ಎನ್ನುವ ದೇಶ ಇದೆ ಎನ್ನುವುದನ್ನು ಅಮೆರಿಕ ಮಾನ್ಯ ಮಾಡುವುದಿಲ್ಲ’’ ಎಂದು ವಿಶ್ವಸಂಸ್ಥೆಗೆ ಅಮೆರಿಕದ ಉಪ ರಾಯಭಾರಿ ಜೊನಾಥನ್ ಕೋಹನ್ ಮಹಾಧಿವೇಶನದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News