ಬೆರಳುಗಳನ್ನು ಕತ್ತರಿಸಿದ ಬಳಿಕ ತಲೆ ಕಡಿದರು: ಟರ್ಕಿ ಪತ್ರಿಕೆ ವರದಿ

Update: 2018-10-17 15:26 GMT

ಅಂಕಾರ, ಅ. 17: ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕಾನ್ಸುಲೇಟ್ ಕಚೇರಿಯಲ್ಲಿ ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಗೆ ಚಿತ್ರಹಿಂಸೆ ನೀಡಿದ ಬಳಿಕ ಅವರ ತಲೆಕಡಿಯಲಾಯಿತು ಟರ್ಕಿ ಪತ್ರಿಕೆ ‘ಯೆನಿ ಸಫಕ್’ ಬುಧವಾರ ವರದಿ ಮಾಡಿದೆ.

ಇದನ್ನು ಸಾಬೀತುಪಡಿಸುವ ಧ್ವನಿಮುದ್ರಿಕೆಗಳನ್ನು ತಾನು ಕೇಳಿದ್ದೇನೆ ಎಂದು ಪತ್ರಿಕೆ ಹೇಳಿದೆ. ಖಶೋಗಿಯ ಹಂತಕರು ವಿಚಾರಣೆಯ ವೇಳೆ ಅವರ ಬೆರಳುಗಳನ್ನು ಕತ್ತರಿಸಿ ಚಿತ್ರಹಿಂಸೆ ನೀಡಿದ್ದರು ಎಂದು ಪತ್ರಿಕೆ ಹೇಳಿದೆ.

ಬಳಿಕ ಅವರ ತಲೆಕಡಿಯಲಾಯಿತು ಎಂದಿದೆ. ಖಶೋಗಿಯ ವಿಚಾರಣೆ, ಚಿತ್ರಹಿಂಸೆ ಮತ್ತು ಹತ್ಯೆಯನ್ನು ಅವರು ಧರಿಸಿದ್ದ ಆ್ಯಪಲ್ ಸ್ಮಾರ್ಟ್ ವಾಚ್ ಸೆರೆಹಿಡಿದಿದೆ ಎಂಬುದಾಗಿ ಟರ್ಕಿಯ ಇನ್ನೊಂದು ಪತ್ರಿಕೆ ‘ಸಬಾ’ ಕಳೆದ ವಾರ ವರದಿ ಮಾಡಿತ್ತು.

ವಿವಾಹ ವಿಚ್ಛೇದನದ ದಾಖಲೆಗಳನ್ನು ಪಡೆದುಕೊಳ್ಳಲು ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕಾನ್ಸುಲೇಟ್ ಕಚೇರಿ ಪ್ರವೇಶಿಸಿದ್ದ ಜಮಾಲ್ ಈವರೆಗೆ ಹೊರಬಂದಿಲ್ಲ.

ಅವರನ್ನು ಮದುವೆಯಾಗಬೇಕಾಗಿದ್ದ ಟರ್ಕಿಯ ಮಹಿಳೆಯೊಬ್ಬರು ಅವರಿಗಾಗಿ ಕಾನ್ಸುಲೇಟ್ ಕಚೇರಿಯ ಹೊರಗೆ ಗಂಟೆಗಟ್ಟಳೆ ಕಾದು ಕುಳಿತಿದ್ದರು.

ಪತ್ರಕರ್ತ ಜಮಾಲ್ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ತೀವ್ರ ಟೀಕಾಕಾರರಾಗಿದ್ದರು. ಇದೇ ಕಾರಣಕ್ಕಾಗಿ ಅವರು ಒಂದು ವರ್ಷದ ಹಿಂದೆ ಸೌದಿ ತ್ಯಜಿಸಿ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಅವರು ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಗೆ ಅಂಕಣಗಳನ್ನು ಬರೆಯುತ್ತಿದ್ದರು.

ಇದನ್ನು ಹೊರಗೆ ಮಾಡಿ ಎಂದಿದ್ದ ಸೌದಿ ಕಾನ್ಸುಲ್ ಅಧಿಕಾರಿ

‘‘ಇದನ್ನು ಹೊರಗೆ ಮಾಡಿ. ನೀವು ನನ್ನನ್ನು ತೊಂದರೆಯಲ್ಲಿ ಸಿಲುಕಿಸುತ್ತಿದ್ದೀರಿ’’ ಎಂಬುದಾಗಿ ಇಸ್ತಾಂಬುಲ್‌ಗೆ ಸೌದಿ ಅರೇಬಿಯದ ಕಾನ್ಸುಲ್ ಜನರಲ್ ಮುಹಮ್ಮದ್ ಅಲ್-ಒತೈಬಿ ಚಿತ್ರಹಿಂಸೆಯ ವೇಳೆ ಹೇಳುವುದನ್ನು ಒಂದು ಟೇಪ್‌ನಲ್ಲಿ ಕೇಳಬಹುದಾಗಿದೆ ಎಂದು ‘ಯೆನಿ ಸಫಕ್’ ವರದಿ ಮಾಡಿದೆ.

‘‘ಸೌದಿ ಅರೇಬಿಯಕ್ಕೆ ಬರುವಾಗ ನೀನು ಬದುಕಬೇಕಿದ್ದರೆ, ಸುಮ್ಮನಿರು’’ ಎಂಬುದಾಗಿ ಅಜ್ಞಾತ ವ್ಯಕ್ತಿಯೊಬ್ಬ ಹೇಳುವುದು ಇನ್ನೊಂದು ಟೇಪ್‌ನಲ್ಲಿ ದಾಖಲಾಗಿದೆ ಎಂದು ಪತ್ರಿಕೆ ಹೇಳಿದೆ.

ಸೌದಿ ಕಾನ್ಸುಲ್ ಜನರಲ್ ವಾಪಸ್

ಜಮಾಲ್ ಖಶೋಗಿ ನಿಗೂಢ ನಾಪತ್ತೆ ಬಗ್ಗೆ ಟರ್ಕಿ ನಡೆಸುತ್ತಿರುವ ಅಧಿಕೃತ ತನಿಖೆಯ ಭಾಗವಾಗಿ ತನ್ನ ನಿವಾಸವನ್ನು ಪೊಲೀಸರು ಶೋಧಿಸುವ ಮುನ್ನ ಸೌದಿ ಕಾನ್ಸುಲ್ ಜನರಲ್ ಮುಹಮ್ಮದ್ ಅಲ್-ಒತೈಬಿ ಮಂಗಳವಾರ ರಿಯಾದ್‌ಗೆ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News