ಖಶೋಗಿ ಕುರಿತ ಆಡಿಯೋ ಟೇಪ್ ಅಮೆರಿಕಕ್ಕೆ ಹಸ್ತಾಂತರಿಸಿಲ್ಲ: ಟರ್ಕಿ ಸ್ಪಷ್ಟನೆ

Update: 2018-10-19 16:31 GMT

ಇಸ್ತಾಂಬುಲ್,ಅ.19: ಸೌದಿ ರಾಯಭಾರಿ ಕಚೇರಿಯಿಂದ ಪತ್ರಕರ್ತ ಜಮಾಲ್ ಖಶೋಗಿ ಅವರ ಕಣ್ಮರೆಗೆ ಸಂಬಂಧಿಸಿದ ಯಾವುದೇ ರೀತಿಯ ಆಡಿಯೋ ಟೇಪ್ ಅನ್ನು ತಾನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅಥವಾ ಬೇರೆ ಯಾವುದೇ ವ್ಯಕ್ತಿಗೆ ನೀಡಿಲ್ಲವೆಂದು ಟರ್ಕಿ ಶುಕ್ರವಾರ ಸ್ಪಷ್ಟಪಡಿಸಿದೆ.

 ಟರ್ಕಿಯ ವಿದೇಶಾಂಗ ಸಚಿವ ಮೆವ್ಲಟ್ ಕ್ಯಾವ್‌ಸೊಗ್ಲು ಅವರು ಅಂಕಾರಾದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕರ ಜೊತೆ ಮಾತುಕತೆ ನಡೆಸಿದ ಎರಡು ದಿನಗಳ ಬಳಿಕ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಖಶೋಗಿ ಅವರು ಸೌದಿ ರಾಯಭಾರಿ ಕಚೇರಿಯೊಳಗೆ ಹತ್ಯೆಯಾಗಿದ್ದಾರೆಂಬುದನ್ನು ಸಾಬೀತುಪಡಿಸುವ ಧ್ವನಿಮುದ್ರಣವು ಟರ್ಕಿಯ ಬಳಿಯಿರುವುದಾಗಿ ಟರ್ಕಿಯ ಸರಕಾರಿ ಪರವಾದ ಮಾಧ್ಯಮಸಂಸ್ಥೆಯೊಂದು ಬಹಿರಂಗಪಡಿಸಿತ್ತು. ಆದರೆ ಅಂತಹದ್ದೊಂದು ಟೇಪ್ ತಮ್ಮ ಬಳಿಯಿರುವ ಬಗ್ಗೆ ಟರ್ಕಿ ಅಧಿಕಾರಿಗಳು ದೃಢಪಡಿಸಿರಲಿಲ್ಲ.

   ಪಾಂಪಿಯೊ ಅವರು ಇತ್ತೀಚೆಗೆ ಟರ್ಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಧ್ವನಿಸುರುಳಿಯನ್ನು ಆಲಿಸಿದ್ದರು ಹಾಗೂ ಅವರಿಗೆ ಈ ಧ್ವನಿಮುದ್ರಣದ ಪ್ರತಿಲಿಪಿ ಯನ್ನು ತೋರಿಸಲಾಗಿತ್ತು ಎಂದು ಟರ್ಕಿಯ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಅಮೆರಿಕದ ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News