ಡೆನ್ಮಾರ್ಕ್ ಓಪನ್: ಶ್ರೀಕಾಂತ್ ಕ್ವಾರ್ಟರ್ ಫೆನಲ್‌ಗೆ

Update: 2018-10-19 18:49 GMT

ಒಡೆನ್ಸ್, ಅ.19: ಚೀನಾದ ದಿಗ್ಗಜ ಆಟಗಾರ ಲಿನ್ ಡಾನ್‌ರನ್ನು ಮಣಿಸಿದ ಕಿಡಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಗುರುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.6ನೇ ಆಟಗಾರ ಶ್ರೀಕಾಂತ್ ವಿಶ್ವದ ನಂ.14ನೇ ಆಟಗಾರ ಡಾನ್‌ರನ್ನು 18-21, 21-17, 21-16 ಗೇಮ್‌ಗಳ ಅಂತರದಿಂದ ಮಣಿಸಿದರು.

ಶ್ರೀಕಾಂತ್ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮದೇ ದೇಶದ ಸಮೀರ್ ವರ್ಮಾರನ್ನು ಎದುರಿಸಲಿದ್ದಾರೆ. ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್, ಐದು ಬಾರಿಯ ವಿಶ್ವ ಚಾಂಪಿಯನ್ ಲಿನ್ ಡಾನ್ ಹಾಗೂ ಶ್ರೀಕಾಂತ್ ಐದನೇ ಬಾರಿ ಮುಖಾಮುಖಿಯಾದರು. ಡಾನ್ 2016ರ ರಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್‌ರನ್ನು ಕೊನೆಯ ಬಾರಿ ಮುಖಾಮುಖಿಯಾಗಿದ್ದು ಆ ಪಂದ್ಯವನ್ನು ಗೆದ್ದುಕೊಂಡಿದ್ದರು.

ಮತ್ತೊಂದು ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.23ನೇ ಆಟಗಾರ ವರ್ಮಾ ಇಂಡೋನೇಶ್ಯದ 2018ರ ಏಶ್ಯನ್ ಗೇಮ್ಸ್ ಚಾಂಪಿಯನ್ ಜೋನಾಥನ್ ಕ್ರಿಸ್ಟಿ ಅವರನ್ನು 23-21, 6-21,22-20 ಅಂತರದಿಂದ ಮಣಿಸಿದ್ದಾರೆ.

ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಗುಚಿಯವರನ್ನು 21-15, 21-17 ಅಂತರದಿಂದ ಸೋಲಿಸಿದ್ದಾರೆ. ವಿಶ್ವದ ಎರಡನೇ ರ್ಯಾಂಕಿನ ಆಟಗಾರ್ತಿ ಯಮಗುಚಿ ಅವರನ್ನು 4 ವರ್ಷಗಳ ಬಳಿಕ ಮೊದಲ ಬಾರಿ ಸೋಲಿಸಿರುವ ಸೈನಾ ಮುಂದಿನ ಸುತ್ತಿನಲ್ಲಿ ಜಪಾನ್‌ನ ಇನ್ನೋರ್ವ ಆಟಗಾರ್ತಿ, ವಿಶ್ವದ ನಂ.3 ಹಾಗೂ 8ನೇ ಶ್ರೇಯಾಂಕದ ನೊರೊಮಿ ಒಕುಹರಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News