ತನ್ನ ರಾಯಭಾರ ಕಚೇರಿಯಲ್ಲೇ ಪತ್ರಕರ್ತ ಖಶೋಗಿ ಹತ್ಯೆಯಾಗಿದ್ದಾಗಿ ಒಪ್ಪಿಕೊಂಡ ಸೌದಿ

Update: 2018-10-20 16:12 GMT

ಇಸ್ತಾಂಬೂಲ್ (ಟರ್ಕಿ), ಅ.20: ಖ್ಯಾತ ಪತ್ರಕರ್ತ ಜಮಾಲ್ ಖಶೋಗಿ, ಇಸ್ತಾಂಬೂಲ್‌ನಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿಯ ಆವರಣದಲ್ಲಿ ಹತ್ಯೆಯಾಗಿದ್ದು ನಿಜ ಎಂದು ಕೊನೆಗೂ ಸೌದಿ ಅರೇಬಿಯಾ ಒಪ್ಪಿಕೊಂಡಿದೆ.

"ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಂತೆ, ಕಟ್ಟಡದ ಒಳಗೆ ನಡೆದ ಘರ್ಷಣೆಯಲ್ಲಿ ಈ ಲೇಖಕ ಮೃತಪಟ್ಟಿದ್ದಾರೆ" ಎಂದು ಅಧಿಕೃತ ಸುದ್ದಿಸಂಸ್ಥೆ ಪ್ರಕಟಿಸಿದೆ.

ಇಸ್ತಾಂಬೂಲ್ ರಾಯಭಾರ ಕಚೇರಿಯಲ್ಲಿ ಖಶೋಗಿ ಭೇಟಿ ಮಾಡಿದ ವ್ಯಕ್ತಿಗಳ ಜತೆ ವಾಗ್ವಾದ ಆರಂಭವಾಗಿದ್ದು, ಕೊನೆಗೆ ಇದು ವಿಕೋಪಕ್ಕೆ ತಿರುಗಿ ಸಂಘರ್ಷ ಅವರ ಸಾವಿಗೆ ಕಾರಣವಾಯಿತು" ಎಂದು ಸುದ್ದಿಸಂಸ್ಥೆ ಹೇಳಿದೆ.

"ತನಿಖೆ ಪ್ರಗತಿಯಲ್ಲಿದ್ದು, 18 ಸೌದಿ ಪ್ರಜೆಗಳನ್ನು ಇದುವರೆಗೆ ಬಂಧಿಸಲಾಗಿದೆ" ಎಂದು ಸೌದಿ ಅರೇಬಿಯಾದ ಸರ್ಕಾರಿ ವಕೀಲರು ಹೇಳಿದ್ದಾರೆ. ಜತೆಗೆ ರಾಯಲ್ ಕೋರ್ಟ್ ಸಲಹೆಗಾರ ಸಾವೂದ್ ಅಲ್ ಖತಾನಿ ಮತ್ತು ಉಪ ಬೇಹುಗಾರಿಕೆ ಮುಖ್ಯಸ್ಥ ಅಹ್ಮದ್ ಅಲ್-ಅಸಿರಿ ಅವರನ್ನು ಅವರ ಹುದ್ದೆಗಳಿಂದ ವಜಾ ಮಾಡಲಾಗಿದೆ ಎಂದು ವಿವರ ನೀಡಿದ್ದಾರೆ. ಆದರೆ ಹತ್ಯೆ ಬಳಿಕ ಖಶೋಗಿ ಮೃತದೇಹವನ್ನು ಎಲ್ಲಿಗೆ ಒಯ್ಯಲಾಗಿತ್ತು ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ.

ವಾಷಿಂಗ್ಟನ್ ಪೋಸ್ಟ್ ಅಂಕಣಕಾರರಾಗಿದ್ದ ಖಶೋಗಿ ಅವರು ರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ಟೀಕಿಸಿ ಲೇಖನ ಬರೆದಿದ್ದರು. ತಮ್ಮ ವಿವಾಹಕ್ಕೆ ಅಗತ್ಯವಾಗಿದ್ದ ದಾಖಲೆಗಳನ್ನು ಪಡೆಯುವ ಸಲುವಾಗಿ ಇಸ್ತಾಂಬೂಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿಗೆ ತೆರಳಿದ್ದ ಅವರು ಅಕ್ಟೋಬರ್ 2ರಿಂದ ನಾಪತ್ತೆಯಾಗಿದ್ದರು. ಆ ಬಳಿಕ ಅವರ ಚಲನವಲನಗಳ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲವಾಗಿದೆ.

ಪತ್ರಕರ್ತ ಹಾಗೂ ವಿಮರ್ಶಕ, ರಾಜತಾಂತ್ರಿಕ ಕಚೇರಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂಬ ವರದಿಗಳನ್ನು ಸೌದಿ ಅಧಿಕಾರಿಗಳು ಈ ಮುನ್ನ ಅಲ್ಲಗಳೆದಿದ್ದರು. ಕಣ್ಮರೆಯಾಗುವ ಮುನ್ನವೇ ಖಶೋಗಿ ರಾಯಭಾರ ಕಚೇರಿ ಕಟ್ಟಡದಿಂದ ಹೊರನಡೆದಿದ್ದರು ಎಂದು ಪ್ರತಿಪಾದಿಸಿತ್ತು.

ಆದರೆ 15 ಹಂತಕರ ತಂಡ ಎರಡು ವಿಶೇಷ ವಿಮಾನಗಳಲ್ಲಿ ಆಗಮಿಸಿ ಖಶೋಗಿಯವರನ್ನು ವಿಚಾರಣೆಗೆ ಗುರಿಪಡಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿದ್ದವು. ಎರಡು ವಾರಗಳಿಂದ ಟರ್ಕಿ ಗುಪ್ತಚರ ವಿಭಾಗ ಕೂಡಾ ಸಾಕಷ್ಟು ಮಾಹಿತಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿತ್ತು. ರಾಜತಾಂತ್ರಿಕ ಕಚೇರಿಯಲ್ಲೇ ಖಶೋಗಿ ಹತ್ಯೆಯಾಗಿರುವ ಬಗೆಗಿನ ಆಡಿಯೊ ದಾಖಲೆ ಕೂಡಾ ತನ್ನ ಬಳಿ ಇದೆ ಎಂದು ಗುಪ್ತಚರ ವಿಭಾಗ ಹೇಳಿತ್ತು.

ತೀವ್ರ ಆಘಾತ: ಗುಟೆರಸ್

ಸೌದಿ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯಿಂದ ‘‘ತೀವ್ರವಾಗಿ ಆಘಾತಗೊಂಡಿದ್ದೇನೆ’’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News