ಟಿಪ್ಪು ವಂಶಜೆ ನೂರ್ ಇನಾಯತ್ ಖಾನ್‌ಗೆ ಇಂಗ್ಲೆಂಡ್ ಕರೆನ್ಸಿ ನೋಟಿನಲ್ಲಿ ಗೌರವ?

Update: 2018-10-20 03:53 GMT

ಲಂಡನ್, ಅ.20: ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷ್ ಆಡಳಿತದ ಭಾರತ ಪರ ಗೂಢಚಾರಿಣಿಯಾಗಿದ್ದ ಟಿಪ್ಪು ವಂಶಜೆ ನೂರ್ ಇನಾಯತ್ ಖಾನ್ ಅವರ ಭಾವಚಿತ್ರ ಬ್ರಿಟಿಷ್ ಕರೆನ್ಸಿಯಲ್ಲಿ ಮುದ್ರಣವಾಗುವ ಸಾಧ್ಯತೆ ಇದೆ. ಖಾನ್‌ಗೆ ಕರೆನ್ಸಿ ಗೌರವ ನೀಡಬೇಕು ಎಂಬ ಅಭಿಯಾನ ವ್ಯಾಪಕವಾಗಿ ಬೆಳೆಯುತ್ತಿದ್ದು, ಮರು ವಿನ್ಯಾಸದ 50 ಪೌಂಡ್ ಕರೆನ್ಸಿ ನೋಟು ಈ ಗೂಢಚಾರಿಣಿಯ ಭಾವಚಿತ್ರ ಹೊಂದಿರಬೇಕು ಎಂಬ ಆಗ್ರಹ ವ್ಯಾಪಕವಾಗುತ್ತಿದೆ.

2020ರಿಂದ ಚಲಾವಣೆಗೆ ಬರುವಂತೆ, ಅಧಿಕ ಮೌಲ್ಯದ ನೋಟುಗಳನ್ನು ಹೊಸ ಪಾಲಿಮರ್ ನೋಟುಗಳಾಗಿ ಮರುವಿನ್ಯಾಸ ಮಾಡುವುದಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್ ಇತ್ತೀಚೆಗೆ ಪ್ರಕಟಿಸಿತ್ತು. ಹೊಸ ನೋಟಿನಲ್ಲಿ ಯಾರ ಮುಖಚಿತ್ರ ಪ್ರಕಟವಾಗಬೇಕು ಎಂಬ ನಾಮನಿರ್ದೇಶನ ಮಾಡುವಂತೆ ಸಾರ್ವಜನಿಕರಲ್ಲಿ ಬ್ಯಾಂಕ್ ಕೋರಿತ್ತು.

ಖಾನ್ ಭಾವಚಿತ್ರ ಪ್ರಕಟಿಸಬೇಕು ಎಂದು ಆಗ್ರಹಿಸುವ ಆನ್‌ಲೈನ್ ಮನವಿ ಪತ್ರಕ್ಕೆ ಈಗಾಗಲೇ 1,200ಕ್ಕೂ ಹೆಚ್ಚು ಮಂದಿ ಸಹಿ ಮಾಡಿದ್ದಾರೆ. ಇವರು ಟಿಪ್ಪು ವಂಶಜೆಯಾಗಿದ್ದು, ಭಾರತದ ಸೂಫಿ ಸಂತ ಹಝ್ರತ್ ಇನಾಯತ್ ಖಾನ್ ಅವರ ಪುತ್ರಿ. ಈ ಮನವಿಯನ್ನು ಬ್ಯಾಂಕ್ ಪರಿಗಣಿಸಿದಲ್ಲಿ ಈ ಕರೆನ್ಸಿ ಗೌರವಕ್ಕೆ ಪಾತ್ರವಾದ ಮೊಟ್ಟಮೊದಲ ಜನಾಂಗೀಯ ಅಲ್ಪಸಂಖ್ಯಾತ ಮಹಿಳೆ ಎಂಬ ಹೆಗ್ಗಳಿಕೆಗೆ ಖಾನ್ ಪಾತ್ರರಾಗಲಿದ್ದಾರೆ.

"ನೂರ್ ಇನಾಯತ್ ಖಾನ್ ಅವರ ರೋಚಕ ಕಥೆ ಹಲವು ಮಂದಿಗೆ ಸ್ಫೂರ್ತಿಯಾಗಿದೆ ಮತ್ತು ಅವರು ಐಕಾನ್ ಆಗಿದ್ದಾರೆ ಎನ್ನುವುದು ನಿಜಕ್ಕೂ ಸಂತಸದ ವಿಚಾರ. ನೂರ್ ಅತ್ಯದ್ಭುತ ಯುದ್ಧನಾಯಕಿ" ಎಂದು ಖಾನ್ ಅವರ ಜೀವನ ಚರಿತ್ರೆ "ಸ್ಪೈ ಪ್ರಿನ್ಸೆಸ್" ಬರೆದ ಶ್ರಬಾನಿ ಬಸು ಹೇಳಿದ್ದಾರೆ. ಇವರು ನೂರ್ ಇನಾಯತ್ ಖಾನ್ ಸ್ಮಾರಕ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News