ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ನಿಶ್ಚಿತ: ದೇವೇಗೌಡ, ಸಿದ್ದರಾಮಯ್ಯ ಜಂಟಿ ಘೋಷಣೆ

Update: 2018-10-20 14:31 GMT

ಬೆಂಗಳೂರು, ಅ.20: ‘ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮುಂದುವರಿಯಲಿದ್ದು, ಈ ಉಪ ಚುನಾವಣಾ ಜಂಟಿ ಪ್ರಚಾರ ಮುಂಬರುವ ಲೋಕಸಭೆ ಚುನಾವಣಾ ಮೈತ್ರಿಗೆ ನಾಂದಿಯಾಗಲಿದೆ’ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಅಕ್ಕ-ಪಕ್ಕ ಕೂತು ಜಂಟಿ ಸುದ್ದಿಗೋಷ್ಠಿ ನಡೆಸಿ ಉಭಯ ನಾಯಕರು, ಮೂರು ಲೋಕಸಭೆ ಮತ್ತು ಎರಡು ಕ್ಷೇತ್ರಗಳ ಉಪ ಚುನಾವಣೆಯಿಂದಲೇ ಮೈತ್ರಿ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ರಾಜ್ಯದಿಂದಲೇ ರಾಷ್ಟ್ರಕ್ಕೆ ಮೈತ್ರಿ ಸಂದೇಶ ರವಾನಿಸಲಾಗುವುದೆಂದು ಘೋಷಿಸಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆ ಮಾಡಿದ್ದು, ಉಪ ಚುನಾವಣೆಯಲ್ಲಿಯೂ ಮೈತ್ರಿ ಅಭ್ಯರ್ಥಿಗಳ ಪರ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಜಂಟಿ ಪ್ರಚಾರ ನಡೆಸಲಿದ್ದಾರೆ. ಹಳೆಯ ತಪ್ಪುಗಳನ್ನೆಲ್ಲಾ ಮನ್ನಿಸಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇವೆ ಎಂದು ಇಬ್ಬರು ಮುಖಂಡರು ಹೇಳಿದರು.

ಹಲವು ಸಂದರ್ಭಗಳಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದೇವೆ. ಆದರೆ, ಇದೀಗ ಹಳೆಯದ್ದೆಲ್ಲವನ್ನೂ ಮರೆತ್ತಿದ್ದು ದೇಶದ ಭವಿಷ್ಯದ ದೃಷ್ಟಿಯಿಂದ ಒಗ್ಗಟ್ಟಾಗಿದ್ದೇವೆ ಎಂದ ಉಭಯ ನಾಯಕರು, ಸ್ಥಳೀಯವಾಗಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದ ಹೋಗುವ ಅಗತ್ಯವಿದೆ. ಜಾತ್ಯತೀತ ಮತಗಳು ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು ಎಂದರು. ಮುಂದಿನ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿನ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಮೈತ್ರಿಯೇ ಅಡಿಪಾಯ. ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.

ಹನ್ನೆರಡು ವರ್ಷಗಳ ಬಳಿಕ ಸಮಾಗಮ: ಹನ್ನೆರಡು ವರ್ಷಗಳ ಬಳಿಕ ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕೂತು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು ವಿಶೇಷವಾಗಿತ್ತು. ಅಲ್ಲದೆ, ನಾವು ಹಳೆಯದನ್ನೆಲ್ಲ ಮರೆತಿದ್ದೇವೆ ಎಂದು ಹೇಳಿದರು.

ಗೆಲುವು ನಮ್ಮದೆ: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದ ಉಭಯ ನಾಯಕರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಗೆಲ್ಲಲು ಶ್ರಮಿಸುತ್ತೇವೆ ಎಂದು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದು, ಮೋದಿಯವರು ಈವರೆಗೂ ರೈತರ ಸಂಕಷ್ಟವನ್ನು ಆಲಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಮುಖಂಡರು, ಹಲವು ಸಂದರ್ಭಗಳಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದೇವೆ. ಎಲ್ಲರೂ ಪೈಪೋಟಿ ಮಾಡಿದ್ದೇವೆ. ಇದೀಗ ಅದೆಲ್ಲವನ್ನು ಮರೆತು ಒಗ್ಗೂಡಿ ಹೊಸ ಅಧ್ಯಾಯ ಆರಂಭಿಸಿದ್ದೇವೆ. ಮೈತ್ರಿಯ ಬಗ್ಗೆ ಯಾವುದೇ ಸಂಶಯ ಬೇಡ. ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದ ಈ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಮುಖಂಡರು ಕರೆ ನೀಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಜಂಟಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.

‘ದೇವೇಗೌಡರು ಹಾಗೂ ಸಿದ್ದರಾಮಯ್ಯ ನಡುವಿನ ಬಾಂಧವ್ಯ ಹಳೆಯದು. ಅದು ಇನ್ನೂ ಉಳಿದಿದೆ. ಅವರ ದೇಹ ಬೇರೆ-ಬೇರೆಯಾಗಿದ್ದರೂ ಮನಸ್ಸಿನಲ್ಲಿ ಇಬ್ಬರೂ ಒಂದೇ. ಅವರಿಬ್ಬರ ಬಾಂಧವ್ಯ ಮೈತ್ರಿ ಬಲ ಹೆಚ್ಚಿಸಿದೆ. ನಾವೆಲ್ಲರೂ ಒಟ್ಟಾಗಿದ್ದು, ಉಪ ಚುನಾವಣೆಯನ್ನು ಒಟ್ಟಾಗಿಯೇ ಎದುರಿಸಲಿದ್ದೇವೆ’

-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

‘ಬಳ್ಳಾರಿ, ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್, ಮಂಡ್ಯ, ಶಿವಮೊಗ್ಗ ಹಾಗೂ ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಉಭಯ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಅನಿವಾರ್ಯತೆ ಇದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಚಾರ ನಡೆಸುವೆ. ಅಗತ್ಯವಿದ್ದರೆ ರಾಮನಗರಕ್ಕೂ ಪ್ರಚಾರಕ್ಕೆ ತೆರಳುವೆ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News