ಪಟೇಲ್ ಪ್ರತಿಮೆಗೆ ವಿರೋಧ: ಅಸಹಾಕಾರ ಚಳವಳಿಗೆ 75 ಸಾವಿರ ಆದಿವಾಸಿಗಳ ನಿರ್ಧಾರ

Update: 2018-10-20 14:12 GMT

ಅಹ್ಮದಾಬಾದ್, ಅ.20: ವಿಶ್ವದ ಅತೀ ಎತ್ತರದ ಪ್ರತಿಮೆಯೆಂಬ ಹಿರಿಮೆಯ, ಸರ್ದಾರ್ ವಲ್ಲಭಬಾಯಿ ಪಟೇಲರ ‘ಏಕತೆಯ ಪ್ರತಿಮೆ’ ಯನ್ನು ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ಅನಾವರಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸನ್ನದ್ಧವಾಗಿರುವಂತೆಯೇ, ಈ ಯೋಜನೆಯಿಂದ ಬಾಧಿತವಾಗಿರುವ ಸಾವಿರಾರು ಆದಿವಾಸಿಗಳು ಅಸಹಾಕಾರ ಚಳವಳಿಯ ಮೂಲಕ ಬೃಹತ್ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.

ನಮ್ಮ ವಿನಾಶಕ್ಕಾಗಿ ಈ ಯೋಜನೆ ರೂಪಿಸಿರುವ ಕಾರಣ ಯೋಜನೆಯಿಂದ ಬಾಧಿತವಾಗಿರುವ 72 ಗ್ರಾಮಗಳ ಮನೆಗಳಲ್ಲಿ ಪ್ರತಿಮೆ ಅನಾವರಣದ ದಿನ ಯಾವುದೇ ಆಹಾರವನ್ನು ಬೇಯಿಸಲಾಗುವುದಿಲ್ಲ ಎಂದು ಆದಿವಾಸಿಗಳ ಮುಖಂಡ ಡಾ ಪ್ರಫುಲ್ ವಾಸವ ತಿಳಿಸಿದ್ದಾರೆ. ಆದಿವಾಸಿಗಳ ಸಂಪ್ರದಾಯದಂತೆ ಸಾವಿನ ಸೂತಕದ ಮನೆಯಲ್ಲಿ ಆಹಾರ ಬೇಯಿಸುವುದಿಲ್ಲ.

ನರ್ಮದಾ ಜಿಲ್ಲೆಯ ಕೆವಾಡಿಯಾ ಎಂಬಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಯೋಜನೆಯಿಂದ ಸುಮಾರು 75 ಸಾವಿರ ಆದಿವಾಸಿಗಳು ಬಾಧಿತರಾಗಿದ್ದಾರೆ ಎಂದು ಸ್ಥಳೀಯ ಬುಡಕಟ್ಟು ಸಮುದಾಯದವರು ಅಳಲು ತೋಡಿಕೊಂಡಿದ್ದಾರೆ.

  ಗುಜರಾತ್‌ನ ಹೆಮ್ಮೆಯ ಪುತ್ರ ಸರ್ದಾರ್ ಪಟೇಲ್ ಬಗ್ಗೆ ನಮಗೆ ಗೌರವವಿದೆ. ಆದಿವಾಸಿಗಳು ಅಭಿವೃದ್ಧಿ ಕಾರ್ಯದ ವಿರೋಧಿಗಳಲ್ಲ. ಆದರೆ ಈ ಸರಕಾರದ ಅಭಿವೃದ್ಧಿ ಯೋಜನೆಗಳು ಅಸಂತುಲಿತವಾಗಿದ್ದು ಆದಿವಾಸಿಗಳ ವಿರುದ್ಧವಾಗಿದೆ. ಆದಿವಾಸಿಗಳ ಹಕ್ಕನ್ನು ಸರಕಾರ ಉಲ್ಲಂಘಿಸಿದೆ ಎಂದು ಪ್ರಫುಲ್ ವಾಸವ್ ಹೇಳಿದ್ದಾರೆ. ರಾಜ್ಯದಾದ್ಯಂತದ 100ಕ್ಕೂ ಹೆಚ್ಚಿನ ಆದಿವಾಸಿ ಸಂಘಟನೆಗಳು ಈ ಅಸಹಕಾರ ಚಳವಳಿಗೆ ಬೆಂಬಲ ಸೂಚಿಸಿವೆ. ಉತ್ತರ ಗುಜರಾತ್‌ನ ಬನಸ್ಕಾಂತದಿಂದ ದಕ್ಷಿಣ ಗುಜರಾತ್‌ನ ದಾಂಗ್ಸ್ ಜಿಲ್ಲೆಯವರೆಗಿನ 9 ಬುಡಕಟ್ಟು ಜಿಲ್ಲೆಗಳು ಆಂದೋಲನಕ್ಕೆ ಕೈಜೋಡಿಸಲಿವೆ. ಶಾಲೆಗಳು, ಕಚೇರಿಗಳು ಹಾಗೂ ವ್ಯಾಪಾರ ವಹಿವಾಟು ಕೂಡಾ ಮುಚ್ಚಿರುತ್ತದೆ ಎಂದವರು ತಿಳಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಂಡವರಿಗೆ ಪುನರ್ವಸತಿ ಯೋಜನೆಯಲ್ಲಿ ಬದಲಿ ಜಮೀನು, ಸೂಕ್ತ ಉದ್ಯೋಗ ಮುಂತಾದವುಗಳನ್ನು ಒದಗಿಸಬೇಕೆಂದು ನರ್ಮದಾ ನ್ಯಾಯಮಂಡಳಿ ಪ್ರಾಧಿಕಾರ ಆದೇಶಿಸಿತ್ತು. ಆದರೆ ಸರಕಾರ ಕೇವಲ ಹಣ ಮಾತ್ರ ನೀಡಿ ಸುಮ್ಮನಾಗಿದೆ. ಭೂಸ್ವಾಧೀನವನ್ನು ವಿರೋಧಿಸುತ್ತಿರುವ ಕೆಲವರು ಪರಿಹಾರ ಹಣವನ್ನೂ ಸ್ವೀಕರಿಸಿಲ್ಲ ಎಂದು ಗರುಡೇಶ್ವರ ನಿವಾಸಿ ರಮೇಶ್ ಭಾಯ್ ಎಂಬವರು ಹೇಳಿದ್ದಾರೆ. ತನ್ನ ಫಲವತ್ತಾದ ಜಮೀನನ್ನು ಸರ್ದಾರ್ ಸರೋವರ ಯೋಜನೆಗೆ ಸ್ವಾಧೀನಪಡಿಸಿಕೊಂಡಿರುವ ಗುಜರಾತ್ ಸರಕಾರ ಸಾಗ್‌ಬರ ಪ್ರದೇಶದಲ್ಲಿ ಒಂದು ಹೆಕ್ಟೇರ್ ಜಮೀನು ಮಂಜೂರುಗೊಳಿಸಿದೆ. ಆದರೆ ಈ ಜಮೀನು ಕೃಷಿಯೋಗ್ಯವಲ್ಲ. ಈ ಜಮೀನು ಇಟ್ಟುಕೊಂಡು ನಾನೇನು ಮಾಡಲಿ ಎಂದು ಸಂತ್ರಸ್ತ ಆದಿವಾಸಿ ಪಾರ್ಚಿ ಬೋಂಡು ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಸರ್ದಾರ್ ಸರೋವರ್ ನರ್ಮದಾ ಯೋಜನೆ, ಪಟೇಲ್ ಪ್ರತಿಮೆ ಯೋಜನೆ , ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಹೆಸರಲ್ಲಿ ತಮ್ಮ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ ಎಂದು ಆದಿವಾಸಿಗಳು ದೂರುತ್ತಿದ್ದಾರೆ.

ಭರವಸೆ ಮರೆತ ಸರಕಾರ

ಪ್ರತಿಮೆ ಯೋಜನೆ 72 ಆದಿವಾಸಿ ಗ್ರಾಮಗಳ ಮೇಲೆ ಪರಿಣಾಮ ಬೀರಲಿದ್ದು 32ಗ್ರಾಮಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಬಾಧಿತವಾಗಿವೆ. 19 ಗ್ರಾಮಗಳಲ್ಲಿ ಪುನರ್ವಸತಿ ಕಾರ್ಯ ಪೂರ್ಣಗೊಂಡಿಲ್ಲ. ಈಗ ಕೆವಾಡಿಯಾ ಕಾಲೊನಿ ನಿರ್ಮಿಸಲಾಗಿರುವ ಪ್ರದೇಶದಲ್ಲಿರುವ ಆರು ಗ್ರಾಮಗಳು ಹಾಗೂ ಗರುಡೇಶ್ವರ ಬ್ಲಾಕ್‌ನಲ್ಲಿರುವ ಏಳು ಗ್ರಾಮದ ನಿವಾಸಿಗಳಿಗೆ ಪರಿಹಾರ ಧನ ಮಾತ್ರ ನೀಡಲಾಗಿದೆ. ಆದರೆ ಭೂಸ್ವಾಧೀನ ಪಡಿಸಿಕೊಳ್ಳುವ ಸಂದರ್ಭ ಮಾಡಿಕೊಳ್ಳಲಾದ ಒಪ್ಪಂದದ ಇತರ ಬಾಧ್ಯತೆಗಳಾದ ಸೂಕ್ತ ಬದಲಿ ಜಮೀನು ಅಥವಾ ಉದ್ಯೋಗದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆದಿವಾಸಿ ಮುಖಂಡರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News