ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿರಂತರ: ಲಿಂಗಾಯತ ಮಹಾಸಭಾ ಮುಖಂಡ ಜಾಮದಾರ್

Update: 2018-10-20 14:40 GMT

ಬೆಂಗಳೂರು, ಅ.20: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವು ನೂರಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಹಿಂದೆ ಶಾಮನೂರು ಶಿವಶಂಕರಪ್ಪ ಹಾಗೂ ಅವರ ತಂಡ ಪ್ರತ್ಯೇಕ ಧರ್ಮಕ್ಕಾಗಿ ಹೊಸದಿಲ್ಲಿಗೆ ಹೋಗಿದ್ದರು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ್ ತಿಳಿಸಿದರು.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ಶಾಮನೂರು ಹಾಗೂ ಅವರ ತಂಡದ ಬೇಡಿಕೆಯನ್ನು ತಿರಸ್ಕರಿಸಿತ್ತು ಎಂದರು. ಆನಂತರ, ಸಿದ್ದರಾಮಯ್ಯ ಸರಕಾರದಲ್ಲಿ ಪುನಃ ಬೇಡಿಕೆಯನ್ನು ಮಂಡಿಸಲಾಯಿತು. ಅದಕ್ಕೆ ಅವರು ಬೆಂಬಲ ನೀಡಿದರು. ನಮ್ಮ ಹೋರಾಟವು ಶುದ್ಧವಾಗಿದೆ. ಕೇಂದ್ರ ಸರಕಾರದ ಎದುರು ಅಗತ್ಯ ದಾಖಲಾತಿಗಳನ್ನು ಮುಂದಿಟ್ಟು ನ್ಯಾಯ ಕೇಳುತ್ತಿದ್ದೇವೆ ಎಂದು ಜಾಮದಾರ್ ಹೇಳಿದರು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಈ ಮೊದಲು ಶಾಮನೂರು ಶಿವಶಂಕರಪ್ಪನವರೇ ಹೋರಾಟಕ್ಕೆ ಕೈ ಹಾಕುವಂತೆ ಹೇಳಿದ್ದರು. ಆದರೆ, ಈಗ ಅದರ ವಿರುದ್ಧ ಮಾತನಾಡುವ ಹಕ್ಕು ಅವರಿಗಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗೆಗಿನ ಇತ್ತೀಚಿನ ಬೆಳವಣಿಗೆಗಳು ಮತ್ತು ರಾಜಕೀಯ ನಾಯಕರ ಹೇಳಿಕೆಗಳು ರಾಜ್ಯದ ಜನರಲ್ಲಿ ಆತಂಕ ಹುಟ್ಟಿಸಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಡಿಕೆಶಿ ವಿರುದ್ಧ ಆಕ್ರೋಶ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕೈ ಹಾಕಿ, ಕೈ ಸುಟ್ಟುಕೊಂಡಿದ್ದೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ, ಇದರಿಂದ ನೀವು ಕೈ ಸುಟ್ಟುಕೊಂಡಿಲ್ಲ, ಕೈ ತಣ್ಣಗೆ ಮಾಡಿಕೊಂಡಿದ್ದೀರಿ. ಅದು ಹೇಗೆ ಅನ್ನೋದನ್ನು ನಾನು ಸ್ಪಷ್ಟಪಡಿಸುತ್ತೇನೆ ಎಂದು ಜಾಮದಾರ್ ತಿರುಗೇಟು ನೀಡಿದರು.

ಈ ಹಿಂದೆ 3 ಸಭೆಗಳು ನಡೆದಾಗ ಯಾವುದೇ ಚಕಾರ ಎತ್ತದ ಶಿವಕುಮಾರ್, 7 ತಿಂಗಳ ನಂತರ ಈ ರೀತಿಯ ಹೇಳಿಕೆ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ಅವರ ಹೇಳಿಕೆಯನ್ನು ಬೆಂಬಲಿಸಿರುವ ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ನಡುವೆ ಏನು ನಡೆಯುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮ ಲೆಕ್ಕಾಚಾರಗಳೇನು ಅನ್ನೋದನ್ನು ರಾಜ್ಯದ ಜನತೆಗೆ ತಿಳಿಸಿ ಎಂದು ಅವರು ಆಗ್ರಹಿಸಿದರು.

ಹೋರಾಟದ ನಾಯಕ ತೋಂಟದಾರ್ಯ ಶ್ರೀ: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ನಾಯಕರಾಗಿ ಮುಂಚೂಣಿಯಲ್ಲಿ ನಿಂತಿದ್ದವರು ಗದಗ ಜಿಲ್ಲೆಯ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮಿಗಳು. ನಮ್ಮ ಹೋರಾಟಕ್ಕೆ ಸಂಬಂಧಿಸಿದಂತೆ ಅವರು ಹೇಳಿರುವ ಮಾತುಗಳು ಇಂದಿಗೂ ಪ್ರಸ್ತುತ ಎಂದು ಜಾಮದಾರ್ ಹೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ಪ್ರಾರಂಭಿಸಿದ್ದು ಯಾರು? ಈಗ ಆ ಹೋರಾಟವನ್ನು ನಿಲ್ಲಿಸುವಂತೆ ನನ್ನನ್ನು ಏಕೆ ಪ್ರಶ್ನಿಸುತ್ತೀರಾ? ಸುಮ್ಮನೆ ಬಾಯಿ ಮುಚ್ಚಿ ಎಂದು ವಿರೋಧಿಗಳ ವಿರುದ್ಧ ಕಠಿಣ ನಿಲುವನ್ನು ತಾಳಿದವರು ತೋಂಟದಾರ್ಯ ಶ್ರೀಗಳು ಎಂದು ಅವರು ಸ್ಮರಿಸಿದರು.

ಬೇಲಿಮಠದ ಶ್ರೀ ಶಿವರುದ್ರ ಸ್ವಾಮಿ ಮಾತನಾಡಿ, ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಾವು ಮಾಡುತ್ತಿರುವ ಹೋರಾಟವು ಹಿಂದೂ ಧರ್ಮದ ವಿರುದ್ಧವಲ್ಲ ಅನ್ನೋದನ್ನು ಮೊದಲು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬೌದ್ಧರು, ಸಿಖ್ಖರು, ಜೈನರು ಯಾವ ರೀತಿಯಲ್ಲಿ ತಮ್ಮ ಅಸ್ಮಿತೆಯನ್ನು ಸಾಬೀತು ಮಾಡಿಕೊಂಡಿದ್ದಾರೋ, ಅದೇ ರೀತಿ ನಾವು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ರಾಜಕಾರಣಿಗಳು ಈ ಚಿಂತನೆಯನ್ನು ರಾಜಕೀಯವಾಗಿ ಬಳಸದೇ ದೂರ ಉಳಿಯುವುದು ಉತ್ತಮ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಇಂದು ನಿಧನರಾದ ತೋಂಟದಾರ್ಯ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News