ಹಜ್‌ ಯಾತ್ರೆ-2019ರ ಅರ್ಜಿ ವಿತರಣೆ ಪ್ರಕ್ರಿಯೆ ಆರಂಭ: ಸಚಿವ ಝಮೀರ್‌ ಅಹ್ಮದ್‌

Update: 2018-10-20 14:47 GMT

ಬೆಂಗಳೂರು, ಅ.20: ಭಾರತೀಯ ಹಜ್ ಸಮಿತಿಯು 2019ನೆ ಸಾಲಿನ ಹಜ್ ಯಾತ್ರೆಗಾಗಿ ಇಂದಿನಿಂದಲೆ ಅರ್ಜಿ ವಿತರಣೆ ಮಾಡುವ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಶನಿವಾರ ಹೆಗಡೆನಗರ ಸಮೀಪದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ 2019ನೆ ಸಾಲಿನ ಹಜ್‌ಯಾತ್ರೆಯ ಅರ್ಜಿಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ಬಾರಿಯ ಹಜ್ ಯಾತ್ರೆಗೆ ರಾಜ್ಯ ಹಜ್ ಸಮಿತಿಗೆ 18,427 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 6624 ಮಂದಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿತ್ತು. ಈ ಬಾರಿ ಕನಿಷ್ಠ 2000-2500 ಕೋಟಾ ಹೆಚ್ಚಳ ಮಾಡುವಂತೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮೇಲೆ ಒತ್ತಡ ಹೇರಲಾಗುವುದು ಎಂದು ಅವರು ಹೇಳಿದರು.

ಖಾಸಗಿ ಟೂರ್ ಆಪರೇಟರ್‌ಗಳಿಗೆ ಕಡಿವಾಣ: ಖಾಸಗಿ ಟೂರ್ ಆಪರೇಟರ್‌ಗಳ ಹಾವಳಿ ಹೆಚ್ಚಾಗಿದೆ. ಜನಸಾಮಾನ್ಯರಿಗೆ ಹಜ್, ಉಮ್ರಾ ಯಾತ್ರೆಗೆ ಕಳುಹಿಸುವುದಾಗಿ ನಂಬಿಸಿ ಹಣ ಪಡೆದು ಪರಾರಿಯಾಗುತ್ತಿರುವ ಘಟನೆಗಳು ಜರುಗುತ್ತಿವೆ. ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಯಾತ್ರೆಗೆ ತೆರಳ ಬಯಸುವವರು, ಮೊದಲು ಅವರ ಬಳಿ ಪರವಾನಗಿ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ತಿಲಕ್‌ನಗರದ ಹರೀಮ್ ಟೂರ್ಸ್‌ ಮಾಲಕ 138 ಮಂದಿಗೆ ಹಜ್‌ಯಾತ್ರೆಗೆ ಕಳುಹಿಸುವುದಾಗಿ ಹೇಳಿ, ಹಣ ಕಟ್ಟಿಸಿಕೊಂಡು ನಾಪತ್ತೆಯಾಗಿದ್ದಾನೆ. ಈ 138 ಮಂದಿಯನ್ನು 2019ನೆ ಸಾಲಿನ ಹಜ್‌ಯಾತ್ರೆಗೆ ಯಾವುದೇ ಲಾಟರಿ ಇಲ್ಲದೆ, ನೇರವಾಗಿ ಆಯ್ಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇವರ ಪೈಕಿ 15-20 ಮಂದಿ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿರುವುದರಿಂದ ಅವರನ್ನು ತನ್ನ ವೈಯಕ್ತಿಕ ಖರ್ಚಿನಲ್ಲಿ ಹಜ್‌ಯಾತ್ರೆಗೆ ಕಳುಹಿಸುವುದಾಗಿ ಝಮೀರ್‌ ಅಹ್ಮದ್‌ ಖಾನ್ ಹೇಳಿದರು.

ಹಜ್ ಸಮಿತಿಯು ಹಜ್‌ ಯಾತ್ರೆಗೆ ಒಬ್ಬರಿಂದ ತಲಾ 2.30 ಲಕ್ಷ ರೂ.ಪಡೆಯುತ್ತಿದೆ. ಈ ಪೈಕಿ ವಿಮಾನ ಪ್ರಯಾಣ ದರಕ್ಕೆ 76 ಸಾವಿರ ರೂ.ಗಳನ್ನು ಪಡೆಯಲಾಗುತ್ತಿದೆ. ನಾವೇ ವಿಮಾನ ಪ್ರಯಾಣದ ಟೆಂಡರ್ ಮಾಡಿದರೆ 33 ಸಾವಿರ ರೂ.ಗಳಾಗಬಹುದು. ಕೇಂದ್ರ ಸರಕಾರ ನಮ್ಮ ರಾಜ್ಯದ ಕೋಟಾ ನಮಗೆ ನೀಡಿದರೆ ಸಾಕು, ಉಳಿದ ವ್ಯವಸ್ಥೆಯನ್ನು ನಾವೇ ಮಾಡಿದರೆ ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಆರ್.ರೋಷನ್‌ ಬೇಗ್ ಮಾತನಾಡಿ, ನಾನು ಹಾಗೂ ಸಚಿವ ಝಮೀರ್ ಇಬ್ಬರೂ ಸೇರಿ ಹಜ್ ಕೋಟಾ ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಕಳೆದ ಬಾರಿ ಮಕ್ಕಾ ಹಾಗೂ ಮದೀನಾದಲ್ಲಿ ರಾಜ್ಯದ ಯಾತ್ರಿಗಳಿಗೆ ಸ್ಪಲ್ಪಮಟ್ಟದಲ್ಲಿ ವಸತಿ ಸಮಸ್ಯೆಯಾಗಿತ್ತು. ಮುಂದಿನ ಬಾರಿ ಇಂತಹ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗುವುದು ಎಂದರು.

ನವೆಂಬರ್-ಡಿಸೆಂಬರ್‌ನಲ್ಲಿ ಕೇಂದ್ರ ಹಜ್ ಸಮಿತಿಯ ನಿಯೋಗವು ಮಕ್ಕಾ ಹಾಗೂ ಮದೀನಾದಲ್ಲಿ ವಸತಿ ವ್ಯವಸ್ಥೆ ಪರಿಶೀಲನೆಗೆ ತೆರಳುತ್ತಿದೆ. ಮೂರು ತಿಂಗಳ ಮುಂಚಿತವಾಗಿಯೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿರುವುದರಿಂದ ಹರಮ್ ಹಾಗೂ ಪ್ರವಾದಿ ಮಸೀದಿ ಸಮೀಪ ಉತ್ತಮ ಗುಣಮಟ್ಟದ ಕಟ್ಟಡಗಳು ನಮಗೆ ಲಭ್ಯವಾಗಬಹುದು ಎಂದು ಅವರು ಹೇಳಿದರು.

ಹಜ್‌ ಭವನದಲ್ಲಿ ಸಭಾಂಗಣ, ಹೊಟೇಲ್, ಕಾಫಿ ಶಾಪ್, ಬಿಝಿನೆಸ್ ಸೆಂಟರ್, ಪ್ರವಾಸಿಗರ ತಂಗುದಾಣ, ಸಿಇಟಿ, ನೆಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆಗಮಿಸುವ ಹೊರ ಜಿಲ್ಲೆಗಳ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ರೋಷನ್‌ ಬೇಗ್ ತಿಳಿಸಿದರು.

ಈ ಸಂದರ್ಭದಲ್ಲಿ  ಮೌಲಾನ ಲುತ್ಫುಲ್ಲಾ, ಮೌಲಾನ ಝೈನುಲ್ ಆಬಿದಿನ್, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್‌ ಖಾನ್ ಸರ್ದಾರ್‌ಮ ಹಜ್ ಸಮಿತಿಯ ಸದಸ್ಯರಾದ ಎಂ.ಎಸ್.ಅರ್ಶದ್, ಬಲ್ಕೀಸ್ ಬಾನು, ಸೈಯ್ಯದ್ ಸನಾವುಲ್ಲಾ, ಬಿಬಿಎಂಪಿ ಸದಸ್ಯ ಸೈಯ್ಯದ್ ಮುಜಾಹೀದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News