ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಸಿಪಿಐ ಬೆಂಬಲ: ದಿನೇಶ್ ಗುಂಡೂರಾವ್

Update: 2018-10-20 14:49 GMT

ಬೆಂಗಳೂರು, ಅ. 20: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಲು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಒಪ್ಪಿಗೆ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸಿಪಿಐ ಮುಖಂಡರಾದ ಅನಂತಸುಬ್ಬರಾವ್, ಪಿ.ವಿ.ಲೋಕೇಶ್, ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ನಾಗಭೂಷಣ್ ರಾವ್, ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ, ವಿಜಯಭಾಸ್ಕರ್ ಸೇರಿದಂತೆ ಇನ್ನಿತರರೊಂದಿಗೆ ದಿನೇಶ್ ಗುಂಡೂರಾವ್ ಸಮಾಲೋಚನೆ ನಡೆಸಿದರು. ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಸಿಪಿಐ ಸೇರಿದಂತೆ ಆ ಪಕ್ಷದ ನೇತೃತ್ವದ ಸಂಘಟನೆಗಳು ರಾಜ್ಯಾದ್ಯಂತ ತನ್ನದೇ ಆದ ಕಾರ್ಯಕರ್ತರನ್ನು ಹೊಂದಿದ್ದು, ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲಿಸುವುದರ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಮುಖಂಡರು ಭರವಸೆ ನೀಡಿದ್ದಾರೆಂದು ಅವರು ಹೇಳಿದರು.

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ಜಾತ್ಯತೀತ ಪಕ್ಷಗಳ ಒಗ್ಗೂಡಿಸುವ ಮೂಲಕ ದೇಶದಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಒಡೆದು ಆಳುವ ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಬುದ್ಧಿ ಕಲಿಸುವ ದೃಷ್ಟಿಯಿಂದ ಕಾಂಗ್ರೆಸ್- ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆಂದು ಎಡಪಕ್ಷಗಳ ಮುಖಂಡರು ಹೇಳಿದ್ದಾರೆಂದು ಅವರು ತಿಳಿಸಿದರು.

‘ಬಳ್ಳಾರಿ ಲೋಕಸಭೆ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಮ್ಮ ಬೆಂಬಲ ಕೇಳಿತ್ತು. ಜಾತ್ಯತೀತ ತತ್ವದಲ್ಲಿ ಬದ್ಧತೆಯುಳ್ಳ ನಮ್ಮ ಪಕ್ಷ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಲು ತೀರ್ಮಾನಿಸಿದ್ದು, ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇವೆ’

-ಪಿ.ವಿ.ಲೋಕೇಶ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News