ಮುಸ್ಲಿಮರು ರಾಮನ ವಂಶಸ್ಥರು: ಕೇಂದ್ರ ಸಚಿವನ ವಿವಾದಾತ್ಮಕ ಹೇಳಿಕೆ

Update: 2018-10-22 03:44 GMT

ಮೀರಠ್, ಅ.22: "ಮುಸ್ಲಿಮರು ರಾಮನ ವಂಶಸ್ಥರು; ಮೊಘಲ್ ವಂಶಸ್ಥರಲ್ಲ. ಆದ್ದರಿಂದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸಬೇಕು, ಹಿಂದೂಗಳು ಅವರನ್ನು ದ್ವೇಷಿಸುತ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಈ ದ್ವೇಷ ಹೆಚ್ಚಿದರೆ, ಪರಿಣಾಮ ಏನಾಗಬಹುದು ಎಂದು ಕಲ್ಪಿಸಿಕೊಳ್ಳಿ" ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ರಾಜ್ಯ ಸಚಿವರಾಗಿರುವ ಅವರು, ರವಿವಾರ ಬಾಗ್‌ಪಥ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದರು. ಜನಸಂಖ್ಯಾ ನಿಯಂತ್ರಣ ರ್ಯಾಲಿಯಲ್ಲಿ ಭಾಗವಹಿಸಲು ಅವರು ಈ ನಗರಕ್ಕೆ ಆಗಮಿಸಿದ್ದರು.

"ಈ ದೇಶದಲ್ಲಿ ಪ್ರತಿ ಕಾನೂನಿಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬೇಕು. ಇದಾದಲ್ಲಿ ರಾಮಮಂದಿರ ವಿವಾದ ಹಾಗೂ ಜನಸಂಖ್ಯಾ ನಿಯಂತ್ರಣಕ್ಕೆ ಸೂಕ್ತ ಕಾನೂನು ಜಾರಿಗೆ ಬರುತ್ತದೆ. ಸದ್ಯಕ್ಕೆ ರಾಮಮಂದಿರ ವಿವಾದ ಎರಡನೇ ಹಂತದ ಕ್ಯಾನ್ಸರ್‌ನಂತೆ. ಇದನ್ನು ಈಗ ಗುಣಪಡಿಸದಿದ್ದರೆ ಭವಿಷ್ಯದಲ್ಲಿ ಇದನ್ನು ಗುಣಪಡಿಸಲು ಸಾಧ್ಯವಿಲ್ಲ" ಎಂದು ವಿಶ್ಲೇಷಿಸಿದರು.

ಮುಸ್ಲಿಮರು ಒಂದು ಹೆಜ್ಜೆ ಮುಂದಿಟ್ಟು ರಾಮಮಂದಿರವನ್ನು ಬೆಂಬಲಿಸಬೇಕು ಹಾಗೂ ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಪ್ರದರ್ಶಿಸಬೇಕು. "ಭಾರತದಲ್ಲಿ ಪ್ರತಿ ವಿಷಯದ ಬಗೆಗಿನ ಚರ್ಚೆಗೂ ರಸ್ತೆ ತಡೆಗಳು ಇರುತ್ತವೆ. ಅಲ್ಪಸಂಖ್ಯಾತರು ಎಂಬ ಪದದ ವ್ಯಾಖ್ಯಾನ ಬದಲಿಸಲು ಇದು ಸೂಕ್ತ ಸಮಯ" ಎಂದು ಹೇಳಿದರು.

ಅಧಿಕ ಮಕ್ಕಳನ್ನು ಪಡೆಯುವ ವಿರುದ್ಧವೂ ಕಟ್ಟುನಿಟ್ಟಿನ ಕಾನೂನು ಜಾರಿಗೆ ಬರಬೇಕು. ಇದಕ್ಕೆ ಒಪ್ಪದಿದ್ದರೆ, ಅವರ ಮತದಾನದ ಹಕ್ಕು ಕಿತ್ತುಕೊಳ್ಳಬೇಕು ಎಂದೂ ಸಚಿವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News