15 ಕ್ರಿಕೆಟ್ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್: ತನಿಖಾ ಸಾಕ್ಷ್ಯ ಚಿತ್ರದಲ್ಲಿ ಬಹಿರಂಗ

Update: 2018-10-22 08:33 GMT

ಮುಂಬೈ, ಅ.22: ಐಸಿಸಿ ನಿಗಾವಹಿಸಿರುವ ಮ್ಯಾಚ್ ಫಿಕ್ಸರ್ ಅನೀಲ್ ಮುನಾವರ್ 2011 ಹಾಗೂ 2012ರ ನಡುವೆ ನಡೆದಿರುವ 15 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ 26 ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಅಲ್ ಜಝೀರಾ ರವಿವಾರ ಬಿಡುಗಡೆ ಮಾಡಿರುವ ತನಿಖಾ ಸಾಕ್ಷ್ಯ ಚಿತ್ರದಲ್ಲಿ ಬಹಿರಂಗಪಡಿಸಿದೆ.

2011-12ರಲ್ಲಿ 6 ಟೆಸ್ಟ್, 6 ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿದೆ. ಇಂಗ್ಲೆಂಡ್ ಆಟಗಾರರು ಏಳು ಪಂದ್ಯಗಳಲ್ಲಿ, ಆಸ್ಟ್ರೇಲಿಯ ಹಾಗೂ ಪಾಕಿಸ್ತಾನದ ಆಟಗಾರರು ಕ್ರಮವಾಗಿ 7 ಹಾಗೂ 5 ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ.

2011ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಪಂದ್ಯ ಹಾಗೂ 2011ರ ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯ ನಡುವಿನ ಕೇಪ್‌ಟೌನ್ ಪಂದ್ಯ, 2011ರ ವಿಶ್ವಕಪ್‌ನ 5 ಪಂದ್ಯಗಳು, 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನ 3 ಪಂದ್ಯಳು ಸೇರಿ ಪ್ರಮುಖ ಪಂದ್ಯಗಳ ಮೇಲೂ ಸ್ಪಾಟ್ ಫಿಕ್ಸಿಂಗ್ ಕರಿನೆರಳು ಬಿದ್ದಿದೆ. 2012ರಲ್ಲಿ ಯುಎಇನಲ್ಲಿ ನಡೆದ ಇಂಗ್ಲೆಂಡ್-ಪಾಕ್ ನಡುವಿನ ಎಲ್ಲ 3 ಪಂದ್ಯಗಳಲ್ಲಿ ಯಶಸ್ವಿ ಸ್ಪಾಟ್ ಫಿಕ್ಸಿಂಗ್ ನಡೆದಿತ್ತು ಎಂದು ಸಾಕ್ಷ್ಯಚಿತ್ರದಲ್ಲಿ ಬೆಟ್ಟು ಮಾಡಲಾಗಿದೆ.

ದುಬೈನಲ್ಲಿ ಪಾಕಿಸ್ತಾನ-ಇಂಗ್ಲೆಡ್ ನಡುವೆ ನಡೆದಿದ್ದ 3ನೇ ಟೆಸ್ಟ್‌ನ ರಾತ್ರಿ ಹೊಟೇಲ್ ಲಾಬಿಯಲ್ಲಿ ಪಾಕ್ ದಾಂಡಿಗ ಉಮರ್ ಅಕ್ಮಲ್ ಡಿ ಕಂಪೆನಿಯ ಸಹವರ್ತಿಯನ್ನು ಭೇಟಿಯಾಗುವ ಚಿತ್ರಗಳನ್ನು ಡಾಕ್ಯುಮೆಂಟರಿಯಲ್ಲಿ ಬಹಿರಂಗಪಡಿಸಲಾಗಿದೆ. ಅಕ್ಮಲ್‌ಗೆ ಈ ವರ್ಷದ ಜೂನ್‌ನಲ್ಲಿ ಪಿಸಿಬಿಯ ಭ್ರಷ್ಟಾಚಾರ ನಿಗ್ರಹ ಘಟಕ ಸಮನ್ಸ್ ನೀಡಿತ್ತು.

 ಅಲ್‌ಜಝೀರಾ ಈ ವರ್ಷದ ಮೇನಲ್ಲಿ ಬಿಡುಗಡೆ ಮಾಡಿದ್ದ ಸಾಕ್ಷಚಿತ್ರದಲ್ಲೂ ಮುನಾವರ್ ಪ್ರಮುಖ ಬುಕ್ಕಿ ಎಂದು ಗುರುತಿಸಲಾಗಿತ್ತು. ಈತ ದಾವೂದ್ ಇಬ್ರಾಹೀಂ ಹಿಡಿತದಲ್ಲಿರುವ ಡಿ ಕಂಪೆನಿಯ ಸದಸ್ಯನಾಗಿರಬಹುದು ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News