ಶಬರಿಮಲೆ ಪ್ರಕರಣ: ರೆಹಾನ ಫಾತಿಮಾಗೆ ವರ್ಗಾವಣೆ ಶಿಕ್ಷೆ ನೀಡಿದ ಬಿಎಸ್ಸೆನ್ನೆಲ್

Update: 2018-10-22 13:37 GMT

ಕೊಚ್ಚಿ, ಅ.22: ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಲು ಯತ್ನಿಸಿ ವಿವಾದ ಹುಟ್ಟುಹಾಕಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನ ಫಾತಿಮಾರಿಗೆ ವರ್ಗಾವಣೆ ಶಿಕ್ಷೆ ನೀಡಿರುವ ಬಿಎಸ್ಸೆನ್ನೆಲ್, ಆಂತರಿಕ ತನಿಖೆ ಪೂರ್ಣಗೊಂಡ ಬಳಿಕ ಇನ್ನಷ್ಟು ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ. ಫಾತಿಮಾರನ್ನು ಕೊಚ್ಚಿಯ ರವಿಪುರಂ ಶಾಖೆಗೆ ವರ್ಗಾಯಿಸಲಾಗಿದೆ ಎಂದು ಬಿಎಸ್ಸೆನ್ನೆಲ್ ಅಧಿಕಾರಿಗಳು ತಿಳಿಸಿದ್ದಾರೆ. ಸರಕಾರಿ ಸಂಸ್ಥೆಯಾಗಿರುವ ಬಿಎಸ್ಸೆನ್ನೆಲ್ ಕೊಚ್ಚಿ ಬೋಟ್ ಜೆಟ್ಟಿ ಶಾಖೆಯಲ್ಲಿ ಟೆಲಿಫೋನ್ ಮೆಕ್ಯಾನಿಕ್ ಹುದ್ದೆಯಲ್ಲಿದ್ದ ಫಾತಿಮಾರಿಗೆ ವರ್ಗಾವಣೆಗೊಂಡಿರುವ ಶಾಖೆಯಲ್ಲಿ ಸಾರ್ವಜನಿಕರೊಂದಿಗೆ ಸಂಪರ್ಕಕ್ಕೆ ಅವಕಾಶವಿಲ್ಲದ ಹುದ್ದೆ ನೀಡಲಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಧಾರ್ಮಿಕ ನಂಬಿಕೆಗೆ ಘಾಸಿ ಎಸಗುವ ರೀತಿಯಲ್ಲಿ ಹೇಳಿಕೆ ಪೋಸ್ಟ್ ಮಾಡಿರುವ ಆರೋಪದಲ್ಲಿ ಫಾತಿಮಾ ವಿರುದ್ಧ ರವಿವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2014ರಲ್ಲಿ ನೈತಿಕ ಪೊಲೀಸ್‌ಗಿರಿ ಖಂಡಿಸಿ ನಡೆದ ‘ಕಿಸ್ ಆಫ್ ಲವ್’ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೆಹಾನ, 2016ರಲ್ಲಿ ‘ತ್ರಿಶೂರ್ ಪುಲಿಕ್ಕಾಲಿ’ ನೃತ್ಯದಲ್ಲಿ ಪಾಲ್ಗೊಂಡಿದ್ದರು. ‘ತ್ರಿಶೂರ್ ಪುಲಿಕ್ಕಾಲಿ’ ಕೇರಳದಲ್ಲಿ ಓಣಂ ಹಬ್ಬದ ಸಂದರ್ಭ ಪುರುಷರು ಹುಲಿವೇಷ ತೊಟ್ಟು ನಡೆಸುವ ಸಾಂಪ್ರದಾಯಿಕ ನೃತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News