×
Ad

ಬಿಜೆಪಿ ಜತೆ ಡೀಲ್ ಮಾಡಿಕೊಳ್ಳುತ್ತಿದ್ದಾರೆನ್ನುವುದು ಸುಳ್ಳು: ಸಿಎಂ ಕುಮಾರಸ್ವಾಮಿ

Update: 2018-10-23 19:25 IST

ಬೆಂಗಳೂರು, ಅ. 23: ದೆಹಲಿಗೆ ಹೋಗಿ ಪ್ರಧಾನಮಂತ್ರಿ, ಕೇಂದ್ರ ಸಚಿವರನ್ನು ನೋಡಿದಾಕ್ಷಣ ಕುಮಾರಸ್ವಾಮಿ ಬಿಜೆಪಿ ಜತೆ ಡೀಲ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ, ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ದೆಹಲಿಯ ಭೇಟಿಯಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಹಣ ತರಲು ಪ್ರಯತ್ನಿಸಿದ್ದೇನೆ. ನನ್ನ ಸಹೋದರ ರೇವಣ್ಣ ದೆಹಲಿಗೆ ಬರುವುದು ಸ್ವಾರ್ಥಕ್ಕಾಗಿ ಅಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಪ್ರಸ್ತಾವನೆಗಳೊಂದಿಗೆ ಬರುತ್ತಾರೆ. ಇತ್ತೀಚೆಗೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದಾಗ ಕಾಫಿ ಬೆಳೆಗಾರರ ಕಷ್ಟದ ಬಗ್ಗೆ ಚರ್ಚಿಸಿದ್ದು, ಶೇ.50ರಷ್ಟು ನೆರವನ್ನು ನೀಡುವ ಭರವಸೆ ನೀಡಿದ್ದಾರೆ. ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ದೇವೇಗೌಡರು-ಸಿದ್ದರಾಮಯ್ಯ ಅವರು ಒಂದಾಗಿರುವ ಬಗ್ಗೆ ಬಿಜೆಪಿಯವರು ವ್ಯಂಗ್ಯವಾಡುತ್ತಿದ್ದಾರೆ. ಅಧಿಕಾರದ ದಾಹಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವುದು ಸುಳ್ಳು, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು, ಚರ್ಚಿಸಲು ಅವರು ಒಂದಾಗುತ್ತಾರೆ ಎಂದರು.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಾಯುಕ್ತದಲ್ಲಿ ದಾಖಲಾದ ಕೆಲ ಪ್ರಕರಣಗಳು ಸಚಿವ ಸಂಪುಟ ಸಭೆಯ ಮುಂದೆಯೂ ಬರುತ್ತವೆ. ಅಧಿಕಾರಿಗಳಿಗೆ ರಕ್ಷಣೆ ನೀಡುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ. ರೌಡಿಗಳು ದೊಡ್ಡವರೇ ಇರಲಿ, ಸಣ್ಣವರೇ ಇರಲಿ ಎಲ್ಲರನ್ನು ಬಲಿ ಹಾಕುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಈ ವಿಚಾರದಲ್ಲಿ ಸರಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಬೆಂಗಳೂರು, ಮಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ ಅಲ್ಲದೆ ಸೂಕ್ಷ್ಮ ಜಿಲ್ಲೆಗಳೂ ಸೇರಿದಂತೆ ಪ್ರತಿ ಜಿಲ್ಲೆಯ ರಸ್ತೆಗಳಲ್ಲಿ ಸಿಸಿಟಿವಿ ಹಾಕುವಂತೆ ಆದೇಶಿಸಿದ್ದೇನೆ.

ಒಂದೂವರೆಯಿಂದ 2 ಸಾವಿರ ಕೋಟಿ ರೂ. ಖರ್ಚಾದರೂ ಅಪರಾಧ ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮುತ್ತಪ್ಪರೈ ಅವರು ಶಸ್ತ್ರಾಸ್ತ್ರಗಳನ್ನು ಬಹಿರಂಗವಾಗಿ ಪ್ರದರ್ಶಿಸಿರುವ ಸಂಬಂಧ ಈಗಾಗಲೇ ಸಿಸಿಬಿ 11 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, 7 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಕೇರಳದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ರಾಜ್ಯದ ಮಹಿಳೆಯರು ತೆರಳಿದರೆ ಅವರಿಗೆ ರಕ್ಷಣೆ ನೀಡಲಾಗದು. ಅಗತ್ಯ ಬಿದ್ದಲ್ಲಿ ಅಲ್ಲಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರಕ್ಷಣೆ ನೀಡುವಂತೆ ಕೋರುತ್ತೇನೆ. ಆದರೆ, ಮಹಿಳೆಯರಿಗಾಗಿ ಇಲ್ಲಿಂದ ವಿಶೇಷ ರಕ್ಷಣಾ ಪಡೆ ಕಳುಹಿಸಲು ಸಾಧ್ಯವಿಲ್ಲ. ಅದು ಆ ರಾಜ್ಯದ ಸಮಸ್ಯೆ, ಅಲ್ಲಿನವರೊಂದಿಗೆ ಸಂಘರ್ಷಕ್ಕಿಳಿಯಲಾರೆ. ಮೀ-ಟೂ ಬಗ್ಗೆ ನಾನು ಮಧ್ಯ ಪ್ರವೇಶಿಸುವುದಿಲ್ಲ. ಕಾನೂನು ತಜ್ಞರು, ಸಿನಿಮಾರಂಗದ ಹಿರಿಯರು ಕುಳಿತು ಇದನ್ನು ಬಗೆಹರಿಸುತ್ತಾರೆ ಎಂದರು.

ಸಂವಾದದಲ್ಲಿ ಪ್ರೆಸ್‌ಕ್ಲಬ್ ಸದಾಶಿವ ಶೆಣೈ, ಕಾರ್ಯದರ್ಶಿ ಎಚ್.ವಿ.ಕಿರಣ್, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ನನ್ನ ಕಚೇರಿಯಲ್ಲಿ ಪೇಮೆಂಟ್ ಸೀಟಿನ ವರ್ಗಾವಣೆಗೆ ಅವಕಾಶವಿಲ್ಲ. ಮೆರಿಟ್ ಆಧಾರದ ಮೇಲೆ ಅಧಿಕಾರಿಗಳನ್ನು ಸೂಕ್ತ ಹುದ್ದೆಗಳಿಗೆ ನಿಯೋಜನೆ ಮಾಡುತ್ತಿದ್ದೇನೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಬೆಂಗಳೂರಿನಲ್ಲಿನ ಡ್ಯಾನ್ಸ್ ಬಾರ್‌ಗಳಲ್ಲಿ ಒಂದು ರಾತ್ರಿಗೆ 5 ಕೋಟಿ ಹಣ ಸಂಗ್ರಹಿಸುತ್ತಾರೆ. ಹೈದರಾಬಾದ್-ಬಾಂಬೆಯಿಂದ ವಿಶೇಷ ವಿಮಾನದಲ್ಲಿ ಮಟ್ಕಾ ಪರಿಣಿತರನ್ನು ಕರೆತಂದು ಆಟವಾಡಿಸುತ್ತಿದ್ದಾರೆ. ಇದನ್ನೆಲ್ಲಾ ಮಟ್ಟ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News