ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆಂದು ನಾನೆಲ್ಲಿಯೂ ಹೇಳಿಲ್ಲ: ನಟ ಪ್ರಕಾಶ್ ರೈ

Update: 2018-10-23 14:00 GMT

ಬೆಂಗಳೂರು, ಅ.23: ಬಹುಭಾಷಾ ನಟ ಅರ್ಜುನ್ ಸರ್ಜಾ ತಪ್ಪಾಗಿ ನಡೆದುಕೊಂಡಿದ್ದೇನೆ ಎಂಬ ಭಾವ ಹುಟ್ಟಿಕೊಂಡರೆ ಕ್ಷಮೆ ಕೇಳಿ ಎಂದಿದ್ದೇನೆ ಹೊರತು ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆಂದು ನಾನೆಲ್ಲಿಯೂ ಹೇಳಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಾನೆ ಎಂಬ ಆರೋಪ ಕೇಳಿಬಂದ ಸಂದರ್ಭದಲ್ಲಿ ತಪ್ಪು ಮಾಡಿದ್ದೇನೆ ಎಂಬ ಭಾವವಿದ್ದರೆ ಕ್ಷಮೆಯಾಚನೆ ಮಾಡಿ ಎಂಬುದನ್ನು ಮುಂದಿಡುವುದು ಆರೋಗ್ಯವಂಥ ಜೀವದ ಮೊದಲ ಲಕ್ಷಣವಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಿನಿಮಾದಲ್ಲಿ ಯಾವ ಕಾರಣಕ್ಕೋ, ಯಾವ ಹೊತ್ತಿನಲ್ಲಿಯೋ, ಯಾವುದೋ ಒಂದು ಸ್ಪರ್ಶ ಕೆಟ್ಟದ್ದು ಎಂದು ನಾಯಕಿಗೂ ಅನ್ನಿಸಿರಬಹುದು. ನಾಯಕನಿಗೂ ಅನ್ನಿಸಿರಬಹುದು. ಅದನ್ನು ಒಬ್ಬಾಕೆ ಬಹಿರಂಗವಾಗಿ ಹೇಳಿದಾಗ ಹೌದು, ಹಾಗೇನಾದರೂ ಆಗಿದ್ದರೆ ಅದು ಉದ್ದೇಶಪೂರ್ವಕವಲ್ಲ. ನನಗದು ಗೊತ್ತೂ ಆಗಲಿಲ್ಲ ಎಂದು ಹೇಳಲು ಅಹಂಕಾರ ಯಾಕೆ ಅಡ್ಡಿ ಬರಬೇಕಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಆದರೆ, ಇಂಥ ಸಂಗತಿಗಳಿಗೆ ಬೇರೆ ಬೇರೆ ವಿಚಾರಗಳನ್ನು ಎಳೆದು ತಂದು ತೆಳುವಾಗಿಸುವುದರಲ್ಲೇ ನಮ್ಮ ಸೋಲು ಅಡಗಿದೆ. ಇವತ್ತು ಶ್ರುತಿ ಹರಿಹರನ್‌ಗೆ ಆದದ್ದು, ನಾಳೆ ನಮಗೂ ಆಗಬಹುದು. ನಾವು ನ್ಯಾಯದ ಪರ ನಿಲ್ಲುತ್ತೇವೆ ಎಂಬ ನಂಬಿಕೆ ನಮಗಾದರೂ ಇರಬೇಕು. ಧೈರ್ಯವಾಗಿ ಮಾತನಾಡುವುದಕ್ಕೆ ಶಕ್ತಿಯಿಲ್ಲದೇ ಹೋದರೆ ಮೌನವಾಗಿದ್ದೇ ಪ್ರತಿಭಟಿಸಬೇಕು. ಅದು ಬಿಟ್ಟು ಅನ್ಯಾಯದ ಪರವಾಗಿ ನಿಂತು ಆ ಕ್ಷಣದಲ್ಲಿ ಪಾರಾಗಲು ನೋಡುವುದು ಮಾತ್ರ ಅನೈತಿಕ ಎಂದು ಪ್ರಕಾಶ್ ರೈ ಕಟುವಾಗಿ ಟೀಕಿಸಿದ್ದಾರೆ.

'ನಿನ್ನಿಂದ ನನಗೆ ನೋವಾಗಿದೆ, ನೀನು ತಪ್ಪಾಗಿ ನಡೆದುಕೊಂಡಿದ್ದೀಯಾ. ಅದರಿಂದ ನಾನು ಕೆಲವು ದಿನ ತಲ್ಲಣಿಸಿ ಹೋಗಿದ್ದೆ'. ಹೀಗೆ ಒಬ್ಬಳು ಹೆಣ್ಣು ಮಗಳು ಹೇಳಿದ ತಕ್ಷಣ ಇಡೀ ಜಗತ್ತು ಎದ್ದು ಕೂರುತ್ತದೆ. ಹಾಗೆ ಹೇಳುವುದಕ್ಕೆ ನೀನು ಯಾರು? ನಿನ್ನ ಬಳಿ ಸಾಕ್ಷಿ ಏನಿದೆ? ಯಾಕೆ ನೀನಿದನ್ನು ಹೇಳುತ್ತಿರುವೆ? ಯಾರು ನಿನಗೆ ಇದನ್ನು ಹೇಳಿಕೊಟ್ಟವರು? ಯಾವ ರಾಜಕೀಯ ಪ್ರೇರಣೆಯಿಂದ ಹೀಗೆ ಪ್ರಶ್ನಿಸುತ್ತಿದೀಯಾ? ಎಂಬ ಪುಂಖಾನುಪುಂಖ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಮೂಲಕ ಹೆಣ್ಣು ಮಕ್ಕಳ ಬಾಯಿ ಮುಚ್ಚಿಸುವುದಕ್ಕೆ ನೋಡುತ್ತಾರೆ. ಆಮೇಲೆ ಅವಳೊಬ್ಬಳೇ ಅಲ್ಲ, ಯಾವ ಹೆಣ್ಣು ಮಗಳೂ ಬಾಯಿ ತೆರೆಯಬಾರದು. ಯಾವತ್ತೂ ತನಗೆ ಅನ್ಯಾಯವಾಗಿದೆ ಎಂದು ಹೇಳಿಕೊಳ್ಳಬಾರದು. ಒಂದು ಕೆಟ್ಟ ಸ್ಪರ್ಶವನ್ನೂ ಅದು ಸಹಜ ಎಂಬಂತೆ ಸ್ವೀಕರಿಸಬೇಕು ಎಂಬಂತೆ ಮಾಡುತ್ತಿದೆ. ಇಂಥದ್ದನ್ನು ನಾನು ನೋಡುತ್ತಲೇ ಬಂದಿದ್ದೇನೆ. ಹೀಗಾಗಿ, ಇದನ್ನೆಲ್ಲ ಕೇಳಿದಾಗ ನನಗೆ ಅಷ್ಟೇನೂ ಆಶ್ಚರ್ಯವಾಗುವುದಿಲ್ಲ ಎಂದಿದ್ದಾರೆ.

ಒಬ್ಬ ಹೆಣ್ಣು ನನಗೆ ಅನ್ಯಾಯವಾಗಿದೆ ಎಂದಾಗ ಪುರುಷನಷ್ಟೇ ಅಲ್ಲ, ಮಹಿಳೆಯೂ ಒಂದೊಂದು ಬಾರಿ ನಂಬುವುದಿಲ್ಲ. ಮತ್ತೊಬ್ಬ ಹೆಣ್ಣು ಮಗಳು ಅದನ್ನು ವಿರೋಧಿಸುತ್ತಾರೆ. ನನ್ನ ಜೊತೆ ಎಷ್ಟೊಂದು ಸಂಭಾವಿತರಂತೆ ನಡೆದುಕೊಂಡಿದ್ದಾರೆ. ಅಂಥವರು ಹೀಗೆ ಮಾಡಲು ಸಾಧ್ಯವೇ ಇಲ್ಲ ಎಂಬಂತೆ ತೀರ್ಪು ಕೊಟ್ಟುಬಿಡುತ್ತಾರೆ. ಅಲ್ಲಿಗೆ ಆ ಹೆಣ್ಣು ಖಳನಾಯಕಿಯಂತೆ ತಮ್ಮ ಜೀವನದಲ್ಲಿ ನಿಂತು ಹೋಗಿಬಿಡುವಂತೆ ಮಾಡುತ್ತಿದ್ದಾರೆ ಎಂದು ಪ್ರಕಾಶ್ ರೈ ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News