ಎರಡನೇ ಪಂದ್ಯ: ಗೆಲುವಿನತ್ತ ಭಾರತ ಚಿತ್ತ

Update: 2018-10-23 18:43 GMT

 ವಿಶಾಖಪಟ್ಟಣ, ಅ.23: ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಬುಧವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲೂ ಗೆಲುವಿನ ಅಭಿಯಾನ ಮುಂದುವರಿಸುವ ಯೋಜನೆಯಲ್ಲಿದೆ.

ಗುವಾಹತಿಯ ಬರ್ಸಪಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಶತಕ ದಾಖಲಿಸಿ ಭಾರತಕ್ಕೆ ಸುಲಭದ ಜಯ ತಂದು ಕೊಟ್ಟಿದ್ದರು. ವೆಸ್ಟ್‌ಇಂಡೀಸ್ ತಂಡ 322 ರನ್ ದಾಖಲಿಸಿದ್ದರೂ, ಭಾರತಕ್ಕೆ ಗೆಲುವಿನ ಗುರಿಯನ್ನು ತಲುಪಲು ಸಮಸ್ಯೆ ಎದುರಾಗಲಿಲ್ಲ. ಇನ್ನೂ 47 ಎಸೆತಗಳು ಬಾಕಿ ಇರುವಾಗಲೇ ಭಾರತ 2 ವಿಕೆಟ್ ನಷ್ಟದಲ್ಲಿ 326 ರನ್ ಸೇರಿಸಿ ಗೆಲುವಿನ ದಡ ಸೇರಿತ್ತು. ಕೊಹ್ಲಿ ಮತ್ತು ರೋಹಿತ್ ಶರ್ಮಾ 2ನೇ ವಿಕೆಟ್‌ಗೆ 246 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೊಹ್ಲಿ 140 ರನ್(107ಎ, 21ಬೌ, 2ಸಿ) ಮತ್ತು ರೋಹಿತ್ ಶರ್ಮಾ ಔಟಾಗದೆ 152 ರನ್ (117 ಎಸೆತ, 15 ಬೌಂಡರಿ, 8 ಸಿಕ್ಸರ್) ಗಳಿಸಿದ್ದರು. ಕೊಹ್ಲಿ 212ನೇ ಏಕದಿನ ಪಂದ್ಯದಲ್ಲಿ 88 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಲ್ಲಿ 36ನೇ ಶತಕ ದಾಖಲಿಸಿದರು. ರೋಹಿತ್ ಶರ್ಮಾ 189ನೇ ಏಕದಿನ ಪಂದ್ಯದಲ್ಲಿ 20ನೇ ಶತಕ ಪೂರ್ಣಗೊಳಿಸಿದರು. ರೋಹಿತ್ 84 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ ಶತಕ ಪೂರೈಸಿದ್ದರು. ಶಿಖರ್ ಧವನ್ ಕಳೆದ ಪಂದ್ಯದಲ್ಲಿ ಬೇಗನೆ ಔಟಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಅವರು ಮಿಂಚುವುದನ್ನು ನಿರೀಕ್ಷಿಸಲಾಗಿದೆ. ಅವರು 2017 ಡಿಸೆಂಬರ್‌ನಲ್ಲಿ ಇದೇ ಕ್ರೀಡಾಂಗಣದಲ್ಲಿ ಶತಕ ಬಾರಿಸಿ ತಂಡದ ಗೆಲುವಿಗೆ ನೆರವಾಗಿದ್ದರು

ವಿರಾಟ್ ಕೊಹ್ಲಿ ಇನ್ನು 81 ರನ್ ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10 ಸಾವಿರ ರನ್ ಪೂರ್ಣಗೊಳಿಸಿದ ದಾಖಲೆ ಬರೆಯಲಿದ್ದಾರೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿಯಲಿದ್ದಾರೆ. ಸಚಿನ್ ತೆಂಡುಲ್ಕರ್ 259 ಇನಿಂಗ್ಸ್‌ಗಳಲ್ಲಿ 10 ಸಾವಿರ ರನ್ ಗಳಿಸಿದ್ದರು. ಕೊಹ್ಲಿ ಈ ತನಕ 204 ಇನಿಂಗ್ಸ್ ಗಳಲ್ಲಿ ಆಡಿದ್ದಾರೆ.

ಡೆತ್ ಓವರ್ಸ್‌ ಸ್ಟೆಶಲಿಸ್ಟ್ ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ ಕುಮಾರ್ ಅನುಪಸ್ಥಿತಿಯಲ್ಲಿ ಭಾರತದ ವೇಗಿಗಳು ವಿಂಡೀಸ್‌ನ ರನ್ ಪ್ರವಾಹವನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದರು. ಆಲ್‌ರೌಂಡರ್ ರವೀಂದ್ರ ಜಡೇಜಗೆ ಮಧ್ಯಮ ಸರದಿಯಲ್ಲಿ ವಿಂಡೀಸ್‌ನ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

ಏಶ್ಯಕಪ್‌ನಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಜಡೇಜ ಚೆನ್ನಾಗಿ ಆಡಿದ್ದರು. ಆದರೆ ಉಳಿದ ಪಂದ್ಯಗಳಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ವಿಂಡೀಸ್ ವಿರುದ್ಧ ಮೊದಲ ಪಂದ್ಯದಲ್ಲಿ 10 ಓವರ್‌ಗಳಲ್ಲಿ 66 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಇದೇ ವೇಳೆ ವೇಗಿ ಮುಹಮ್ಮದ್ ಶಮಿ 10 ಓವರ್‌ಗಳಲ್ಲಿ 81 ರನ್ ನೀಡಿ 2 ವಿಕೆಟ್ ಉಡಾಯಿಸಿದ್ದರು. ಟೆಸ್ಟ್ ನಲ್ಲಿ ಮಿಂಚಿದ್ದ ಉಮೇಶ್ ಯಾದವ್‌ಗೆ ಏಕದಿನ ಪಂದ್ಯದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. 64 ರನ್ ನೀಡಿ ಕೈ ಸುಟ್ಟುಕೊಂಡರು. ಆದರೆ ಯುವ ವೇಗಿ ಖಲೀಲ್ ಅಹ್ಮದ್ 64ಕ್ಕೆ 1 ವಿಕೆಟ್, ಚಹಾಲ್ ಮಾತ್ರ 41ಕ್ಕೆ 3 ವಿಕೆಟ್ ಪಡೆಯುವ ಮೂಲಕ ಯಶಸ್ಸು ಸಾಧಿಸಿದ್ದರು.ಕುಲ್‌ದೀಪ್ ಯಾದವ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಅವರು ಎರಡನೇ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಅವರಿಗೆ ಖಲೀಲ್ ಅಹ್ಮದ್ ಜಾಗ ತೆರವುಗೊಳಿಸಲಿದ್ದಾರೆ. ವಿಂಡೀಸ್‌ನ ಶಿಮ್ರಾನ್ ಹೆಟ್ಮಾಯೆರ್ ಕಳೆದ ಪಂದ್ಯದಲ್ಲಿ 78 ಎಸೆತಗಳಲ್ಲಿ 106 ರನ್ ಮತ್ತು ಕೀರನ್ ಪೊವೆಲ್ ಅರ್ಧಶತಕ(51) ಗಳಿಸಿದ್ದರು. ವಿಂಡೀಸ್ ಇದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News