ವಿರಾಟ್ ಕೊಹ್ಲಿ ಮನುಷ್ಯನೇ ಅಲ್ಲ ಎಂದ ಬಾಂಗ್ಲಾ ಕ್ರಿಕೆಟಿಗ ತಮೀಮ್ ಇಕ್ಬಾಲ್ !

Update: 2018-10-24 09:38 GMT

ಢಾಕಾ, ಅ.24: ಭಾರತದ ನಾಯಕ ವಿರಾಟ್ ಕೊಹ್ಲಿ ತನ್ನ ಕೌಶಲ್ಯಭರಿತ ಬ್ಯಾಟಿಂಗ್‌ನ ಮೂಲಕ ಕೆಲವು ಕ್ರಿಕೆಟಿಗರ ಮೇಲೆ ಪರಿಣಾಮಬೀರಿದ್ದಾರೆ. ಈ ಪೈಕಿ ಬಾಂಗ್ಲಾದೇಶದ ಸ್ಟಾರ್ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಕೂಡ ಒಬ್ಬರು.

 ಇತ್ತೀಚೆಗೆ ‘ಖಲೀಜ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಕ್ಬಾಲ್,‘‘ಕೊಹ್ಲಿ ಅವರ ಬ್ಯಾಟಿಂಗ್ ಶೈಲಿಯನ್ನು ನೋಡಿದಾಗ ನನಗೆ ಕೆಲವೊಮ್ಮೆ ಅವರು ಮಾನವನಲ್ಲ. ಯಂತ್ರ ಎಂಬ ಭಾವನೆ ಮೂಡುತ್ತದೆ. ಕೊಹ್ಲಿ ಅವರಂತೆ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸುವಂತಹ ಆಟಗಾರನನ್ನು ನಾನು ಇದುವರೆಗೆ ನೋಡಿಲ್ಲ. ಅವರು ಬ್ಯಾಟಿಂಗ್‌ಗೆ ಇಳಿದ ಬಳಿಕ ಪ್ರತಿ ಪಂದ್ಯದಲ್ಲೂ ಶತಕ ಗಳಿಸುವ ರೀತಿಯಲ್ಲೇ ಆಡುತ್ತಾರೆ’’ ಎಂದರು.

‘‘ನಾನು ಕಳೆದ 12 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಆದರೆ, ವಿರಾಟ್ ಕೊಹ್ಲಿಯವರಂತೆ ಪ್ರಾಬಲ್ಯ ಸಾಧಿಸುವ ಆಟಗಾರನನ್ನು ಇದುವರೆಗೆ ನೋಡಿಲ್ಲ. ಕ್ರಿಕೆಟ್ ಕುರಿತು ಅವರು ಮಾಡುತ್ತಿರುವ ಕೆಲಸ ನಂಬಲಸಾಧ್ಯ. ಅವರು ಟೆಸ್ಟ್ ಹಾಗೂ ಏಕದಿನ  ಕ್ರಿಕೆಟ್‌ನಲ್ಲಿ  ನಂ.1 ಆಟಗಾರ. ಅವರ ಆಟವನ್ನು ನೋಡಿ ಕಲಿತುಕೊಳ್ಳಲು ಸಾಕಷ್ಟಿದೆ. ನನ್ನ ಪ್ರಕಾರ ಅವರೊಬ್ಬ ಅದ್ಭುತ ಆಟಗಾರ’’ ಎಂದು ಇಕ್ಬಾಲ್ ಅಭಿಪ್ರಾಯಪಟ್ಟರು.

ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಕೊಹ್ಲಿ 136.22 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ 2,102 ರನ್ ಗಳಿಸಿದ್ದಾರೆ. 48.88ರ ಸರಾಸರಿ ಹೊಂದಿರುವ ಅವರು ಗರಿಷ್ಠ ಸ್ಕೋರ್ ಔಟಾಗದೆ 90 ರನ್ ಗಳಿಸಿದ್ದಾರೆ. ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿ ಕಾಯ್ದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News