ಬೌದ್ಧ ಧರ್ಮವನ್ನು ಸ್ವೀಕರಿಸುವ ಮೊದಲು ಅಂಬೇಡ್ಕರ್ ಇಸ್ಲಾಂ ಧರ್ಮವನ್ನು ತನ್ನ ಆಯ್ಕೆಯ ಧರ್ಮವೆಂದು ಏಕೆ ಪರಿಗಣಿಸಿದ್ದರು?

Update: 2018-10-25 05:42 GMT

ಭಾಗ-2

 ಧರ್ಮವನ್ನು ಬದಲಾಯಿಸುವುದರಲ್ಲಿ, ಮತಾಂತರದಲ್ಲಿ ಆಧ್ಯಾತ್ಮಿಕ ಪರಿಗಣನೆಯು ಒಬ್ಬ ವ್ಯಕ್ತಿಯ ವೌಲ್ಯವನ್ನು ಎಷ್ಟು ಹೆಚ್ಚಿಸುತ್ತದೆ ಎಂಬುದಕ್ಕೆ ಸಂಬಂಧಿಸಿತ್ತು. ಹಿಂದೂ ಧರ್ಮದಲ್ಲಿ ಒಬ್ಬ ದಲಿತನಿಗೆ ಯಾವುದೇ ಸ್ಥಾನವಿಲ್ಲವಾದ್ದರಿಂದ ಅದು ಆತನಿಗೆ ಯಾವುದೇ ರೀತಿಯ ಆಧ್ಯಾತ್ಮಿಕ ಸಮಾಧಾನ ನೀಡಲು ಅಸಮರ್ಥವಾಯಿತು. ಅಂಬೇಡ್ಕರ್ ಪ್ರಕಾರ, ಒಂದು ಧರ್ಮದ ನಿಜವಾದ ಗುರಿ, ವ್ಯಕ್ತಿಗಳ ಆಧ್ಯಾತ್ಮಿಕ ಬೆಳವಣಿಗೆಯಾಗಿರಬೇಕು. ವ್ಯಕ್ತಿಯೊಬ್ಬನ ಬೆಳವಣಿಗೆಗೆ ಮೂರು ಅಂಶಗಳ ಅವಶ್ಯಕತೆ ಇದೆ: ಕರುಣೆ(ಕಂಪ್ಯಾಶನ್) ಸಮಾನತೆ ಮತ್ತು ಸ್ವಾತಂತ್ರ. ಹಿಂದೂ ಧರ್ಮದಲ್ಲಿ ದಲಿತರಿಗೆ ಸಂಬಂಧಿಸಿ ಈ ಮೂರೂ ಇಲ್ಲವೆಂಬುದು ಅಂಬೇಡ್ಕರ್‌ರವರ ಅಭಿಪ್ರಾಯವಾಗಿತ್ತು. ವೈಯಕ್ತಿಕವಾಗಿ, ಅಂಬೇಡ್ಕರ್ ಧರ್ಮದ ಆಧ್ಯಾತ್ಮಿಕ ಮುಖ ಅವರ ಅಸ್ತಿತ್ವವಾದಿ ಮುಖಕ್ಕಿಂತ ಹೆಚ್ಚು ವೌಲ್ಯಯುತವಾದದ್ದೆಂದು ತಿಳಿದಿದ್ದರು. ಆದರೂ, ದಲಿತರಿಗಾಗಿ ಅವರು ಧರ್ಮದ ಅಸ್ತಿತ್ವವಾದಿ ಉಪಯೋಗವೇ ಮುಖ್ಯವೆಂದು ಒತ್ತಿ ಹೇಳಿದರು. ಇನ್ಯಾವುದೋ ಒಂದು ಧರ್ಮಕ್ಕೆ ಮತಾಂತರಗೊಳ್ಳದೆ ಅಸ್ಪಶ್ಯರಿಗೆ ಜಾತಿ ಜೀತದಿಂದ ಬಿಡುಗಡೆ ಇಲ್ಲವೆಂಬ ತೀರ್ಮಾನಕ್ಕೆ ಅವರು ಅದಾಗಲೇ 1928ರಿಂದಲೇ ಬಂದಿದ್ದರು.

ದಲಿತರಿಗೆ ಮತಾಂತರಗೊಳ್ಳುವಂತೆ 1935ರ ಯೆವೊಲಾ ಘೋಷಣೆಗೆ ಮೊದಲೇ ಅವರು ಹೇಳಲಾರಂಭಿಸಿದ್ದರು. ಮತಾಂತರದ ವಿಷಯವಲ್ಲದೆ, ದಲಿತರಿಗೆ ಮತಾಂತರಗೊಳ್ಳಲು ಯಾವ ಧರ್ಮ ಅತ್ಯುತ್ತಮ ಎಂಬ ಬಗ್ಗೆಯೂ ಅವರು ತುಂಬ ಆಳವಾಗಿ ಚಿಂತಿಸಿದ್ದರು. ಬೌದ್ಧ ಧರ್ಮ ಮತ್ತು ಆರ್ಯ ಸಮಾಜವನ್ನು ತಿರಸ್ಕರಿಸಿ, ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮವನ್ನು ಆಯ್ದುಕೊಳ್ಳುವ ಹಂತಕ್ಕೂ ಅವರು ಹೋಗಿದ್ದರು. ‘‘ಹಿಂದೂಗಳ ಪೂರ್ವಗ್ರಹಗಳನ್ನು ನಾವು ಯಶಸ್ವಿಯಾಗಿ ಎದುರಿಸಬೇಕಾದರೆ, ದಂಗೆಕೋರ (ರಿಬೆಲಿಯಸ್) ಸಮುದಾಯವೊಂದರ ಬೆಂಬಲ ಪಡೆಯಲಿಕ್ಕಾಗಿ ನಾವು ಒಂದೋ ಕ್ರಿಶ್ಚಿಯನ್ ಧರ್ಮಕ್ಕೆ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು’’ ಎಂದು ಅವರು ಹೇಳಿದ್ದರು. ಆದರೆ ಎರಡು ವರ್ಷಗಳೊಳಗಾಗಿ, ಅವರು ಕ್ರಿಶ್ಚಿಯನ್ ಧರ್ಮದ ಆಯ್ಕೆಯನ್ನು ಕೈಬಿಟ್ಟು ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಕುರಿತು ಯೋಚಿಸಲಾರಂಭಿಸಿದ್ದರು.

1929ರ ಮಾರ್ಚ್ 15ರ ‘ಬಹಿಷ್ಕೃತ್ ಭಾರತ್’ ಸಂಚಿಕೆಯಲ್ಲಿ ‘ನೋಟಿಸ್ ಟು ಹಿಂದೂಯಿಸಂ’ ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ ‘‘ನೀವು ಮತಾಂತರಗೊಳ್ಳುವುದೇ ಆದಲ್ಲಿ ಮುಸಲ್ಮಾನರಾಗಿ ಮತಾಂತರಗೊಳ್ಳಿ. ಆಗ ಮಾತ್ರ ದಲಿತರ ಮೇಲಿರುವ ಅಸ್ಪಶ್ಯತೆಯ ಕಲೆ ತೊಳೆದುಹೋಗುತ್ತದೆ’’ ಎಂದು ಹೇಳಿದ್ದರು. ಬೌದ್ಧರಾಗುವುದರ ಅಥವಾ ಆರ್ಯ ಸಮಾಜಿಗರಾಗುವುದರ ವ್ಯರ್ಥತೆಯನ್ನು ವಿಶ್ಲೇಷಿಸಿದ ಬಳಿಕ, ಅವರು ಕ್ರಿಶ್ಚಿಯನ್ ಧರ್ಮವನ್ನು ಕೂಡ ತಳ್ಳಿ ಹಾಕಿದರು; ಯಾಕೆಂದರೆ ‘‘ಕ್ರಿಶ್ಚಿಯನ್ ಧರ್ಮಕ್ಕೆ ಕೂಡ ಭಾರತದಲ್ಲಿ ಜಾತಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ’’ ದಲಿತರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದರಿಂದ ಅವರ ಸಾಮಾಜಿಕ ಸ್ಥಾನಮಾನದಲ್ಲೇನೂ ವ್ಯತ್ಯಾಸವಾಗುವುದಿಲ್ಲವೆಂದು ಅಂಬೇಡ್ಕರ್‌ರವರಿಗೆ ತಿಳಿದಿತ್ತು. ಯಾಕೆಂದರೆ ಹಿಂದೂಗಳಿಗಷ್ಟೇ ಅಲ್ಲ, ಅವರ ಮೇಲ್ಜಾತಿಯ ಇತರರಿಗೂ ದಲಿತರು ಅದೇ ಹಳೆಯ ಅಸ್ಪಶ್ಯರಾಗಿಯೇ ಉಳಿಯುತ್ತಾರೆ.

ಮುಸ್ಲಿಂ ಸಮುದಾಯ ಮಾತ್ರ ಅವರನ್ನು ಬೆಂಬಲಿಸಲು ಬರಬಹುದೆಂದು ಅವರು ಹೇಳುತ್ತಿದ್ದರು. ತಾನು ಹಿಂದೂ ಧರ್ಮವನ್ನು ತ್ಯಜಿಸುತ್ತೇನೆಂದು ಪದೇ ಪದೇ ಹೇಳುತ್ತಿದ್ದರೂ ಮತ್ತು ಯಾವ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆಂದು ನಿರ್ದಿಷ್ಟವಾಗಿ ಹೇಳದಿದ್ದರೂ, 1936ರವರೆಗೆ ಇಸ್ಲಾಂ ಧರ್ಮ ಅವರ ವೈಚಾರಿಕ ಆಯ್ಕೆಯಾಗಿತ್ತೆಂಬುದು ತುಂಬ ಸ್ಪಷ್ಟವಾಗಿದೆ.

 ಅವರು ಮತಾಂತರಗೊಳ್ಳುವ ವಿಚಾರ ಪ್ರಸ್ತಾಪಿಸಿದ್ದು ಹಿಂದೂಗಳ ಮೇಲೆ ಸುಧಾರಣೆಗಳಿಗಾಗಿ ಒತ್ತಡ ತರುವುದಕ್ಕಾಗಿ ಇದ್ದಿರಬಹುದು. ಆದರೆ ದಲಿತರ ನಾಗರಿಕ ಹಕ್ಕುಗಳ ಬಗ್ಗೆ ಹಿಂದೂಗಳು ಪ್ರತಿಕ್ರಿಯಿಸಿದ ರೀತಿ ಅವರನ್ನು ಭ್ರಮನಿರಸನಗೊಳಿಸಿತ್ತು. ಮುಂದಿನ ಡಿಸೆಂಬರ್‌ನಲ್ಲಿ ನಡೆಸಲಾದ ಸತ್ಯಾಗ್ರಹ ಅಧಿವೇಶನದಲ್ಲಿ ಕೂಡ ದಲಿತರ ನಾಗರಿಕ ಹಕ್ಕುಗಳ ವಿಷಯವನ್ನು ಬದಿಗೆ ತಳ್ಳಲಾಯಿತು. ಹಾಗಾಗಿ, ಮಹಾರ್ ಅಧಿವೇಶನ ಮುಗಿದ ಕೂಡಲೇ ಅವರು ಮತಾಂತರದ ಬಗ್ಗೆ ಮಾತನಾಡತೊಡಗಿದರು.

ಮೋರ್ಲೆ ಮಿಂಟೊ ಸುಧಾರಣೆಗಳ (1909)ನಂತರ ರಾಜಕೀಯ ಅಧಿಕಾರವನ್ನು ಕೋಮು ನೆಲೆಯಲ್ಲಿ ಹಂಚಿಕೊಳ್ಳುವ ವಿಷಯ ಅಧಿಕೃತವಾಯಿತು. ದಲಿತರಿಗೆ ಮತ್ತು ಆದಿವಾಸಿಗಳಿಗೆ ಹಿಂದೂಗಳಿಂದ ಪ್ರತ್ಯೇಕವಾದ ಸ್ಥಾನ ಮಾನ ನೀಡುವ ವಿಷಯವೂ ಚರ್ಚೆಗೆ ಬಂತು.ಆಗ ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಗದರಿಸುವ ಮೂಲಕ ಹಿಂದೂಗಳನ್ನು ಬಗ್ಗಿಸಬಹುದೆಂದು ಅಂಬೇಡ್ಕರ್ ಭಾವಿಸಿದ್ದರು. ಕುತೂಹಲದ ವಿಷಯವೆಂದರೆ, ಯೆವೊಲಾ ಘೋಷಣೆಯವರೆಗೆ ಹಿಂದೂಗಳು ಆ ಬೆದರಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಅದೇನಿದ್ದರೂ, 1956ರಲ್ಲಿ ಅಂಬೇಡ್ಕರ್‌ರವರು ಮಾಡಿಕೊಂಡ ಧರ್ಮದ ಆಯ್ಕೆ ಈ ಅಸ್ತಿತ್ವವಾದಿ ಪರಿಗಣನೆಗಿಂತ ತೀರಾ ಬೇರೆಯಾಗಿತ್ತು.

 ಅವರ ಆಧ್ಯಾತ್ಮಿಕ ಪರಿಗಣನೆ ಅಂತಿಮವಾಗಿ ಅವರ ಅಸ್ತಿತ್ವವಾದಿ ಪರಿಗಣನೆಗಿಂತ ಮಿಗಿಲಾಯಿತು ಅನಿಸುತ್ತದೆ. ಅವರು ಮತಾಂತರವನ್ನು ಆಯ್ದುಕೊಂಡ ಬೌದ್ಧಧರ್ಮ ಆಗ್ನೇಯ ಭಾರತದ ಬೆಟ್ಟ ಪ್ರದೇಶಗಳ ಮತ್ತು ಹಿಮಾಲಯದ ಕಣಿವೆ ಪ್ರದೇಶಗಳ ಹೊರತಾಗಿ ಬೇರೆಲ್ಲಿಯೂ ಬಹುಪಾಲು ಕಂಡುಬರುತ್ತಿರಲಿಲ್ಲ. ಆದರೂ ಅಂಬೇಡ್ಕರ್ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಗಂಭೀರ ಅಧ್ಯಯನ ನಡೆಸಿದ ಬಳಿಕ ತನ್ನ ಧರ್ಮದ ಆಯ್ಕೆ ಮಾಡಿಕೊಂಡರೆಂದು ಹೇಳಬಹುದು. ಅವರು ಮೆಟ್ರಿಕ್ಯುಲೇಶನ್ ತೇರ್ಗಡೆಯಾದಾಗ ಅವರಿಗೆ ನೀಡಲಾಗಿದ್ದ ಬುದ್ಧನ ಜೀವನ ಚರಿತ್ರೆಯನ್ನೋದಿದಂದಿನಿಂದ ಅವರು ಬೌದ್ಧ ಧರ್ಮದಲ್ಲಿ ಆಸಕ್ತಿ ತಾಳಿದ್ದರು. ಅದನ್ನು ಬರೆದವರು ಕೆಲೂಸ್ಕರ್ ಗುರೂಜಿ; ಅಂದಿನ ಕಾಲದ ಬಹಳ ಪ್ರಸಿದ್ಧ ಓರ್ವ ಸಾಮಾಜಿಕ ಕಾರ್ಯಕರ್ತ. ಅಂಬೇಡ್ಕರ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದವರು ಅವರು.

‘ಮುಕ್ತಿ ಕೋನ್ ಪಥೆ’ಯಲ್ಲಿ ಕೂಡ ಅವರು, ಇಸ್ಲಾಂ ಧರ್ಮವನ್ನು ಹೊಗಳಿದ್ದರಾದರೂ, ಅವರು ತನ್ನ ಭಾಷಣವನ್ನು ಬುದ್ಧನ ಮಹಾ ಪರಿನಿಬ್ಬಾಣ ಸೂಕ್ತದ ಉಪದೇಶದಿಂದ ಕೊನೆಗೊಳಿಸಿದ್ದರು. ‘ಅಪ್ಪೊ ದೀಪೋಭವ’ (’ನೀವು ನಿಮಗೆ ನಿಮ್ಮದೇ ಬೆಳಕಾಗಿ’). ಅವರು ಅಂತಿಮವಾಗಿ ಬೌದ್ಧ ಧರ್ಮವನ್ನು ಆಯ್ದುಕೊಂಡದ್ದ್ದರಲ್ಲಿ, ದಲಿತರ ಧಾರ್ಮಿಕ ಮತಾಂತರ ಅವರ ಅಸ್ತಿತ್ವದ ಉಪಯೋಗಕ್ಕೆ ಬರ ಬೇಕೆಂಬ ತನ್ನದೇ ಆದ ತರ್ಕವನ್ನು ಉಪೇಕ್ಷಿಸಿದ್ದರೂ ಆಶ್ಚರ್ಯವಿಲ್ಲ.


ಕೃಪೆ: scroll.in

Writer - ಆನಂದ್ ತೇಲ್ತುಂಬ್ಡೆ

contributor

Editor - ಆನಂದ್ ತೇಲ್ತುಂಬ್ಡೆ

contributor

Similar News