ನಮ್ಮ ದೇಶದಲ್ಲಿ ಕೈಗಾರಿಕೋದ್ಯಮಿಗಳನ್ನು ಟೀಕಿಸುವುದು ಫ್ಯಾಶನ್ ಆಗಿದೆ: ಪ್ರಧಾನಿ ಮೋದಿ

Update: 2018-10-25 06:37 GMT

ಹೊಸದಿಲ್ಲಿ, ಅ.25: ತಮ್ಮ ಉದ್ಯಮದ ಜತೆಜತೆಗೆ ಸಾಕಷ್ಟು ಸಮಾಜ ಸೇವೆಯನ್ನೂ ಮಾಡುವ ಕೈಗಾರಿಕೋದ್ಯಮಿಗಳನ್ನು ಹಾಗೂ ಕಾರ್ಪೊರೇಟ್ ಸಂಸ್ಥೆಗಳನ್ನು ಟೀಕಿಸುವ ಸಂಸ್ಕೃತಿಯಲ್ಲಿ ತಾನು ನಂಬಿಕೆಯಿರಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜಧಾನಿಯಲ್ಲಿ ಬುಧವಾರ ಐಟಿ ತಂತ್ರಜ್ಞರು ಹಾಗೂ ಟೆಕ್ ಕಂಪೆನಿಗಳ ಮುಖ್ಯಸ್ಥರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “ಜನರು ತಮ್ಮ ತೆರಿಗೆಗಳನ್ನು ಪ್ರಾಮಾಣಿಕವಾಗಿ ಪಾವತಿಸುವುದರ ಜತೆಗೆ ತಮ್ಮಿಂದಾದಷ್ಟು ಮಟ್ಟಿಗೆ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಬೇಕು'' ಎಂದರು.

“ನಮ್ಮ ದೇಶದಲ್ಲಿ ಉದ್ಯಮಿಗಳನ್ನು ಹಾಗೂ ಕೈಗಾರಿಕೋದ್ಯಮಿಗಳನ್ನು ನಿಂದಿಸುವುದು ಸಾಮಾನ್ಯವಾಗಿದೆ. ಏಕೆಂದು ನನಗೆ ತಿಳಿದಿಲ್ಲ. ಆದರೆ ಇದೊಂದು ಫ್ಯಾಷನ್ ಆಗಿ ಬಿಟ್ಟಿದೆ. ಇದನ್ನು ನಾನು ಒಪ್ಪುವುದಿಲ್ಲ'' ಎಂದು ಪ್ರಧಾನಿ ಹೇಳಿದರು. ಐಟಿ ಕಂಪೆನಿಗಳು ತಮ್ಮ ನೈಪುಣ್ಯ ಮತ್ತು ಮಾನವ ಸಂಪನ್ಮೂಲಗಳ ಮೂಲಕ ಸಾಮಾಜಿಕ ಬದಲಾವಣೆ ತರಬೇಕು. ಐಟಿ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸಮಾಜಕ್ಕೆ ಕೊಡುಗೆ ನೀಡುವಂತೆ ಕೇಳಿಕೊಳ್ಳುವ ಮೂಲಕ ಅತ್ಯುತ್ತಮ ಸಮಾಜ ಸೇವೆ ಸಲ್ಲಿಸುತ್ತಿವೆ'' ಎಂದು ಪ್ರಧಾನಿ ಹೇಳಿದರು.

ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಮೋದಿ ಮಾತನಾಡಿದ್ದು ಇದು ಎರಡನೇ ಬಾರಿ. ತಮ್ಮ ಆತ್ಮಸಾಕ್ಷಿ ಸ್ವಚ್ಛವಾಗಿರುವುದರಿಂದ ಕೈಗಾರಿಕೋದ್ಯಮಿಗಳ ಜತೆ ಕಾಣಿಸಿಕೊಳ್ಳಲು ತನಗೆ ಭಯವಿಲ್ಲ,. ಅವರು ಕೂಡ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ಜುಲೈಯಲ್ಲಿ ಪ್ರಧಾನಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News