ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಗೈರು: ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಪರಮೇಶ್ವರ್

Update: 2018-10-25 13:01 GMT

ಬೆಂಗಳೂರು, ಅ. 25: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹೋಗದೆ ಇರುವುದಕ್ಕೆ ವಾಲ್ಮೀಕಿ ಸಮುದಾಯದವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ನಾನು ಬಾಗಲಕೋಟೆಯ ಜಮಖಂಡಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅನಿರೀಕ್ಷಿತವಾಗಿ ಅನಾರೋಗ್ಯ ಎದುರಾದ ಕಾರಣ ಅವರು ಹೋಗಲಾಗಿಲ್ಲ. ಉದ್ದೇಶ ಪೂರ್ವಕವಾಗಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿಲ್ಲ. ಸಮುದಾಯದ ಭಾವನೆಗಳಿಗೆ ದಕ್ಕೆಯಾಗಿದ್ದರೆ ಕ್ಷಮೆಯಾಚಿಸುವೆ ಎಂದು ಪರಮೇಶ್ವರ್ ತಿಳಿಸಿದರು.

ಜಾತಿ ಹೆಸರಿನಲ್ಲಿ ಮತಯಾಚನೆ ಸಲ್ಲ: ವಾಲ್ಮೀಕಿ ಸಮಾಜವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸಲ್ಲ. ಚುನಾವಣೆ ಕಾರಣಕ್ಕೆ ಬಿಜೆಪಿಯವರು ಹೀಗೆ ಮಾಡುತ್ತಿದ್ದು, ಬಳ್ಳಾರಿಯಲ್ಲಿ ಜಾತಿ ಹೆಸರಿನಲ್ಲಿ ಮತಯಾಚನೆ ನಡೆಸುತ್ತಿರುವುದು ಅಕ್ಷಮ್ಯ ಎಂದು ಪರಮೇಶ್ವರ್ ಆಕ್ಷೇಪಿಸಿದರು.

ಗೆಲುವು ನಿಶ್ಚಿತ: ಜಮಖಂಡಿ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಪ್ರಚಾರ ನಡೆಸಿದ್ದೇನೆ. ಮೂರ್ನಾಲ್ಕು ದಿನ ಅಲ್ಲೇ ಇದ್ದು ಪ್ರಚಾರ ನಡೆಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಗೆಲುವು ನಿಶ್ಚಿತ. ಸ್ಥಳೀಯ ಮುಖಂಡರಲ್ಲಿ ಯಾವುದೇ ಅಸಮಾದಾನವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಪರಮೇಶ್ವರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News