ಬೆಂಗಳೂರು: ಪ್ರಾಂಶುಪಾಲರ ಕೊಲೆ ಪ್ರಕರಣ; ನಾಲ್ವರ ಬಂಧನ
Update: 2018-10-25 18:33 IST
ಬೆಂಗಳೂರು, ಅ.25: ಜಾಗದ ವಿಚಾರಕ್ಕಾಗಿ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯ ಹಾವನೂರು ಪಬ್ಲಿಕ್ ಶಾಲೆಗೆ ನುಗ್ಗಿ ಶಾಲೆಯ ಪ್ರಾಂಶುಪಾಲರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಮಾಗಡಿ ರಸ್ತೆಯ ಪೊಲೀಸರು ಬಂಧಿಸಿದ್ದಾರೆ.
ಗೌತಮ್, ಮಂಜ, ರಾಜಶೇಖರ್ ಹಾಗೂ ಮಹೇಶ್ ಬಂಧಿತ ಆರೋಪಿಗಳು. ಕಳೆದ ಅ.14ರಂದು ಶಾಲೆಯ ಬಳಿಯ 10 ಅಡಿ ಜಾಗದ ವಿಚಾರಕ್ಕಾಗಿ ಒಟ್ಟು ಏಳು ಮಂದಿ ಆರೋಪಿಗಳು ಶಾಲೆಗೆ ನುಗ್ಗಿ ಪ್ರಾಂಶುಪಾಲ ರಂಗನಾಥ ನಾಯಕ್‌ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೃತ್ಯದಲ್ಲಿ ಪಾಲ್ಗೊಂಡು ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮುನಿರಾಜ್ ಮೇಲೆ ಗುಂಡು ಹಾರಿಸಿ ಬಂಧಿಸಿದ್ದರು. ಇದೀಗ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.