ನಟಿ ಶ್ರುತಿ ಹರಿಹರನ್ ವಿರುದ್ಧ ಎಫ್‌ಐಆರ್
ಬೆಂಗಳೂರು, ಅ.25: ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಗುರುವಾರ ಬೆಳಗ್ಗೆ ನಟ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಪೊಲೀಸ್ ಕಮೀಷನರ್ ಸುನಿಲ್ ಕುಮಾರ್‌ರನ್ನು ಭೇಟಿಯಾಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು ನಟಿ ಶ್ರುತಿ ಹರಿಹರನ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ನಟ ಅರ್ಜುನ್ ಸರ್ಜಾ ವಿರುದ್ಧ ಅವಹೇಳನಕಾರಿಯಾದ ಹೇಳಿಕೆಗಳನ್ನು, ನಕಲಿ ಖಾತೆಗಳ ಮೂಲಕ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಟ ಅರ್ಜುನ್ ಸರ್ಜಾ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಯಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ನಟ ಅರ್ಜುನ್ ಸರ್ಜಾರವರ ಇಮೇಲ್, ಫೇಸ್‌ಬುಕ್, ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್‌ಗೆ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ದೂರು ನೀಡಿದ್ದಾರೆ. ಶ್ರುತಿ ಹರಿಹರನ್ ಮೀಟೂ ಮೂಲಕ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡುತ್ತಿದ್ದಂತೆ ಇ-ಮೇಲ್ ಹ್ಯಾಕ್ ಆಗಿದೆ ಎಂದು ಆರೋಪಿದ್ದಾರೆ.