ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿ: ಪ್ರಮೋದ್ ಮುತಾಲಿಕ್

Update: 2018-10-25 13:22 GMT

ಬೆಂಗಳೂರು, ಅ. 25: ಕಮ್ಯೂನಿಸ್ಟ್, ಬುದ್ಧಿಜೀವಿಗಳು ಹಿಂದೂ ಮಠ, ದೇವಸ್ಥಾನವನ್ನು ಅವಹೇಳನ ಮಾಡುವ ಕೆಲಸದಲ್ಲಿ ನಿರತರಾಗಿದ್ದು, ಅವರು ಏನೇ ಮಾಡಿದರೂ ಹಿಂದೂ ಸಂಪ್ರದಾಯ ಮುರಿಯಲು ಸಾಧ್ಯವಿಲ್ಲ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪು ಧಾರ್ಮಿಕತೆಗೆ ಧಕ್ಕೆಯಾಗಿದ್ದು, ತೀರ್ಪನ್ನು ಮರುಪರಿಶೀಲಿಸಬೇಕು. ಭಾರತ ಅಧ್ಯಾತ್ಮ ನೆಲೆಯ ಹಿನ್ನೆಲೆ ಹೊಂದಿದ್ದು, ಕಮ್ಯೂನಿಸ್ಟ್, ಬುದ್ಧಿಜೀವಿಗಳು ಹಿಂದೂ ಮಠ, ದೇವಸ್ಥಾನ ಹಾಗೂ ಆಚರಣೆಗಳನ್ನು ಟೀಕಿಸುತ್ತಿದ್ದಾರೆ ಎಂದು ತಿಳಿಸಿದರು.

ಕೇರಳ ಸರಕಾರ ನಾಸ್ತಿಕ ಸರಕಾರವಾಗಿದ್ದು, ಪ್ರಸಿದ್ಧ ದೇವಸ್ಥಾನ ಅಪವಿತ್ರ ಮಾಡುವ ಸಂಚು ರೂಪಿಸಿದೆ. ಮಸೀದಿಯೊಳಗೆ ಮಹಿಳೆಯರು ಸೇರಿದಂತೆ ಎಲ್ಲರನ್ನು ಬಿಡಲಿ. ನಂತರ ಹಿಂದೂ ದೇವಸ್ಥಾನದ ಬಗ್ಗೆ ಮಾತನಾಡಲಿ. ಕಿಸ್‌ ಆಫ್ ಲವ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡವಳು ಪೊಲೀಸ್ ಡ್ರೆಸ್‌ನಲ್ಲಿ ದೇವಸ್ಥಾನ ಪ್ರವೇಶಿಸಿದ್ದೇಕೆ? ಪೊಲೀಸ್ ಡ್ರೆಸ್ ಕೊಟ್ಟಿದ್ದು ಯಾರು? ಸರಕಾರದ ಕೈವಾಡ ಇದರಲ್ಲಿ ಕಾಣುತ್ತದೆ. ಆದ್ದರಿಂದ ಕೇಂದ್ರ ಸರಕಾರ ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಹರಿಹರಾತ್ಮಜ ಪೀಠಾಪತಿ ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಮಾತನಾಡಿ, ಅಯ್ಯಪ್ಪ ಮಾಲಾಧಾರಿಗಳು 48 ದಿನಗಳು ಅಖಂಡ ಮಂಡಲ ವ್ರತಾಚರಣೆ ಮಾಡಿ ಶಬರಿಮಲೆಗೆ ತೆರಳುವ ಸಂಪ್ರದಾಯ ಸಹಸ್ರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತದೆ. 10 ವರ್ಷದ ಒಳಗೆ 50 ವರ್ಷದ ಮೇಲ್ಪಟ್ಟವರು ಶಬರಿಮಲೆಗೆ ಹೋಗಲಿ. ಆದರೆ ಎಲ್ಲ ವಯಸ್ಸಿನ ಮಹಿಳೆಯರು ಹೋಗುವುದು ಧರ್ಮಕ್ಕೆ ವಿರುದ್ಧ. ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ದೇಶಾದಾದ್ಯಂತ ತೀರ್ಪಿನ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಕೋರ್ಟ್ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಹಿಂದಿನ ಸಂಪ್ರದಾಯದಂತೆ ಶಬರಿಮಲೆಯಲ್ಲಿ ಆಚರಣೆಗಳು ಆಗಬೇಕು. ಆದ್ದರಿಂದ ರಾಜ್ಯ ಸರಕಾರಗಳು ಕೇಂದ್ರಕ್ಕೆ, ರಾಜ್ಯಪಾಲರು ರಾಷ್ಟ್ರಪತಿಗೆ, ಹೈಕೋರ್ಟ್‌ನ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಬೇಕಿದೆ. ತೀರ್ಪು ಮರುಪರಿಶೀಲನೆಗಾಗಿ ಶಾಂತಿ ಸದ್ಭಾವನಾ ಮೆರವಣಿಗೆ, ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ನಟ ಶಿವರಾಮ್ ಮಾತನಾಡಿ, ಭಾರತ ಮಹಿಳೆಯರಿಗೆ ಸ್ಥಾನಮಾನ ಕೊಟ್ಟ ದೇಶ. ಶಬರಿಮಲೆ ಪ್ರವೇಶ ಕೇಳುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಹೋರಾಡಲಿ. ಡಾ.ರಾಜಕುಮಾರ್, ಕಮಲ್‌ ಹಾಸನ್, ರಜಿನೀಕಾಂತ್, ಅಮಿತಾಬ್ ಬಚ್ಚನ್ ಸೇರಿದಂತೆ ಹಿರಿಯ ನಟರೆಲ್ಲರೂ ಶಬರಿಮಲೆಗೆ ಹೋದಾಗಿನಿಂದ ಶಬರಿಮಲೆಯ ಮಹತ್ವ ತಿಳಿದು ಜನರು ಹೋಗಲು ಆರಂಭಿಸಿದರು. ಇಂತ ಪವಿತ್ರ ಕ್ಷೇತ್ರಕ್ಕೆ ಕೋರ್ಟ್‌ನ ತೀಪಿನಿಂದ ಧಕ್ಕೆಯಾಗಿದೆ. ತೀಪು ಮರುಪರಿಶೀಲನೆಯಾಗಬೇಕು ಎಂದರು.

ಅ.27ರಂದು ಸದ್ಭಾವನಾ ಮೆರವಣಿಗೆ

ಶಬರಿಮಲೆ ತೀರ್ಪು ಮರು ಪರಿಶೀಲಿಸಬೇಕೆಂದು ಆಗ್ರಹಿಸಿ ಶ್ರೀಶಬರಿಮಲೆ ಪರಂಪರೆ ಸಂರಕ್ಷಣಾ ವೇದಿಕೆ, ಶ್ರೀರಾಮಸೇನೆ ಸೇರಿದಂತೆ ಹಿಂದೂ ಸಂಘಟನೆಗಳು ಅ.27ರಂದು ಬೆಳಗ್ಗೆ 10ಗಂಟೆಗೆ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಶಾಂತಿ ಸದ್ಭಾವನಾ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಪ್ರಮೋದ್ ಮುತಾಲಿಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News