ಉಪ ಚುನಾವಣೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ದಸಂಸ ಬೆಂಬಲ
ಬೆಂಗಳೂರು, ಅ. 24: ಲೋಕಸಭಾ ಹಾಗೂ ವಿಧಾನಸಭಾ ಉಪ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಲಕ್ಮ್ಮೀ ನಾರಾಯಣ ನಾಗವಾರ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣ ಮೂಲಕ ದೇಶದಲ್ಲಿರುವ ಕಪ್ಪುಹಣವನ್ನು ಪತ್ತೆ ಹಚ್ಚುತ್ತೇವೆ, ಸ್ವಿಸ್ ಬ್ಯಾಂಕ್‌ನಿಂದ ಭಾರತೀಯರ ಕೋಟ್ಯಾಧಿಪತಿಗಳ ಹಣ ತಂದು ದೇಶದ ಜನತೆಯ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂ. ಜಮಾ ಮಾಡುತ್ತೇವೆಂದು ಹೇಳಿ ನಾಲ್ಕುವರೆ ವರ್ಷ ಕಳೆದು ಹೋಗಿದೆ. ಹೀಗಾಗಿ, ಇಂತಹ ಸುಳ್ಳು ಭರವಸೆಗಳನ್ನು ಕೊಡುತ್ತಾ ಬಂದಿರುವ ಬಿಜೆಪಿಗೆ ದಸಂಸ ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿದರು.
ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗದೆ, ಜನರನ್ನು ದಿಕ್ಕು ತಪ್ಪಿಸಲು ಬಿಜೆಪಿ ಮತ್ತು ಸಂಘಪರಿಹಾರ ರಾಮಮಂದಿರ ಜಪ ಮಾಡಲು ಹೊರಟಿದೆ. ಅಲ್ಲದೆ, ಬಿಜೆಪಿಯ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಾವು ಬಂದಿರುವುದೇ ಸಂವಿಧಾನ ಬದಲಿಸಲು, ಸಮಾಜಸೇವೆ ಮಾಡಲು ಅಲ್ಲ ಎಂಬ ಮೂರ್ಖತನದ ಮಾತುಗಳನ್ನು ಆಡುತ್ತಾ ಸಂವಿಧಾನ ಬದಲಾವಣೆ ಮಾಡುವ ಮಾತುಗಳನ್ನು ಆಡುತ್ತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವೆಲ್ಲ ಒಂದು ಎಂದು ಹೇಳುವ ಆರ್‌ಎಸ್‌ಸ್-ಬಿಜೆಪಿ, ದಲಿತ ಸಮುದಾಯವನ್ನು ಅತ್ಯಂತ ಕೀಳಾಗಿ ಕಾಣುತ್ತಾ ದೇವಾಲಯಗಳಲ್ಲಿ ಪ್ರವೇಶ ನೀಡುವುದಿಲ್ಲ, ಹಾಗಾದರೆ ನಾವೆಲ್ಲ ಹಿಂದುಗಳಾಗಿದ್ದೇವೆಯೇ ನಿಮ್ಮ ದೃಷ್ಟಿಯಲ್ಲಿ ಎಂದು ಪ್ರಶ್ನೆ ಹಾಕಿದರು.
ಶಬರಿಮಲೈಯಲ್ಲಿ ಮಹಿಳೆಯರಿಗೆ ದೇವಾಲಯ ಪ್ರವೇಶ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಂಘ ಪರಿವಾರ ಪ್ರತಿಭಟಿಸುತ್ತಿದೆ. ಮುಸ್ಲಿಂ ಮಹಿಳೆಯರ ತಲಾಕ್ ವಿಚಾರದಲ್ಲಿ ಮುಸ್ಲಿಂ ಮಹಿಳೆಯರ ಪರ ಇದೆ. ಹಾಗಾಗರೆ ಹಿಂದು ಮಹಿಳೆಯರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದರು.