ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲಿ ದುರ್ಬಲಗೊಳಿಸುತ್ತಿರುವುದು ಖಂಡನೀಯ: ಎಎಪಿ
ಬೆಂಗಳೂರು, ಅ. 25: ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲಿ ದುರ್ಬಲಗೊಳಿಸಲು ರಾಜ್ಯ ಸರಕಾರ ಹೊರಟಿದೆ ಎಂದು ಆರೋಪಿಸಿ, ಸರಕಾರದ ನಿಲುವಿನ ವಿರುದ್ಧ ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ವಕ್ತಾರ ಜಗದೀಶ್, ಕೆಲ ದಿನಗಳ ಹಿಂದೆ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸರಕಾರಕ್ಕೆ ಟಿಪ್ಪಣಿಯೊಂದನ್ನು ಕಳುಹಿಸುವ ಮೂಲಕ ಶಿಕ್ಷಣ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟಿರುವುದು ನಿಜಕ್ಕೂ ಖೇದಕರ ವಿಷಯ ಎಂದು ಹೇಳಿದರು.
ಶಿಕ್ಷಣ ಹಕ್ಕು ಕಾಯ್ದೆಯ ಅಡಿಯಲ್ಲಿ ಸೇರ್ಪಡೆಗೊಳ್ಳುವ ಮಕ್ಕಳಿಗೆ ಪ್ರಥಮ ಹಂತದಲ್ಲಿ ಸರಕಾರಿ ಶಾಲೆಗಳಲ್ಲಿ ಮಾತ್ರ ಪ್ರವೇಶಾತಿ, ಎರಡನೇ ಹಂತದಲ್ಲಿ ಸರಕಾರಿ ಅನುದಾನಿತ ಶಾಲೆಗಳು ಹಾಗೂ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶಾಲೆಗಳು ಇಲ್ಲದ ಕಡೆಯಲ್ಲಿ ಮಾತ್ರ ಮೂರನೇ ಹಂತದಲ್ಲಿ ಖಾಸಗಿ ಶಾಲೆಗಳಲ್ಲಿ ಖಾಲಿ ಇರುವಂತಹ ಸೀಟುಗಳ ಹಂಚಿಕೆ ಮಾಡಬೇಕೆಂದು ಕಾಯ್ದೆ ತಿಳಿಸುತ್ತದೆ ಎಂದು ಮಾಹಿತಿ ನೀಡಿದರು.
ಕಾಯ್ದೆಗೆ ಸರಕಾರದ ಅಧಿಕಾರಿಗಳು, ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಬಹುದು ಎಂದು ಹಾಗೂ ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಪ್ರವೇಶ ದಾಖಲಾತಿಗಳಿಗೆ ಮಿತಿ ಹಾಕಬಹುದೆಂದು ತಮ್ಮ ಟಿಪ್ಪಣಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯ ಸರಕಾರವು 1ಸಾವಿರ ಕೋಟಿ ರೂ.ಗಳನ್ನು ಶಿಕ್ಷಣ ಹಕ್ಕು ಕಾಯ್ದೆಯ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿನಿಯೋಜನೆ ಮಾಡುತ್ತಿದ್ದು. ಸಾರ್ವಜನಿಕ ತೆರಿಗೆ ಹಣ ಪೋಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂದರು.
ರಾಜ್ಯ ಸರಕಾರ ಪ್ರಸ್ತುತ ಶಿಕ್ಷಣ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುವ ಈ ರೀತಿಯ ಯಾವುದೆ ದುಷ್ಕೃತ್ಯಗಳಿಗೆ ಕೈ ಹಾಕಬಾರದು ಹಾಗೂ ಅನೈತಿಕ ಆದೇಶಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರೋತ್ಸಾಹ ನೀಡಬಾರದು, ಕಡತಗಳಿಗೆ ಸಹಿ ಹಾಕಬಾರದು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿತು.