ಚಾರಿತ್ರ್ಯ ಸಾಬೀತುಪಡಿಸಲು ಮಹಿಳೆಯ ಕೈಗೆ ಕೆಂಡವಿಟ್ಟರು!

Update: 2018-10-26 05:58 GMT
ಫೋಟೊ ಕೃಪೆ: ANI

ಲಕ್ನೋ, ಅ. 26: ತನ್ನ ಚಾರಿತ್ರ್ಯವನ್ನು ಸಾಬೀತುಪಡಿಸುವ ಸಲುವಾಗಿ ಮತ್ತು ಗಂಡನಿಗಷ್ಟೇ ತಾನು ನಿಷ್ಠಳಾಗಿದ್ದೇನೆ ಎಂದು ದೃಢಪಡಿಸುವ ಸಲುವಾಗಿ ಸ್ಥಳೀಯ ಗ್ರಾಮ ಪಂಚಾಯತ್ ಮಹಿಳೆಯನ್ನು ಅಗ್ನಿ ಪರೀಕ್ಷೆಗೆ ಗುರಿಪಡಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಈ ಪೈಶಾಚಿಕ ಕ್ರೌರ್ಯದಿಂದಾಗಿ ಮಹಿಳೆಯ ಕೈಗಳಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ.

ಮಹಿಳೆಯ ಚಾರಿತ್ರ್ಯವನ್ನು ಪ್ರಶ್ನಿಸಿದ ಪತಿ ಹಾಗೂ ಆರು ಮಂದಿ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ದೆವ್ವ ಬಿಡಿಸುವುದಾಗಿ ಹೇಳಿದ ಮಾಂತ್ರಿಕನೊಬ್ಬ ಈ ಬರ್ಬರ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದ.

ಈ ಘಟನೆ ಮಥುರಾ ಜಿಲ್ಲೆಯ ಬ್ರಿಜ್ ಪ್ರದೇಶದ ನಾಗ್ಲಬಾರಿ ಎಂಬ ಗ್ರಾಮದಲ್ಲಿ ಅ. 19ರಂದು ನಡೆದಿದ್ದು ಗುರುವಾರ ಬೆಳಕಿಗೆ ಬಂದಿದೆ. ಹತ್ರಾಸ್ ಜಿಲ್ಲೆಯ ನಾಗಪಟ್ಟೆ ಎಂಬ ಗ್ರಾಮದ ಜೈವೀರ್ ಎಂಬಾತನ ಜತೆಗೆ ಶಿವಾನಿಯ ವಿವಾಹ 18 ತಿಂಗಳ ಹಿಂದೆ ನಡೆದಿತ್ತು. ಅದೇ ದಿನ ಆಕೆಯ ಅಕ್ಕ ಪುಷ್ಪಾಳನ್ನು ಜೈವೀರ್ ಅಣ್ಣನಿಗೆ ವಿವಾಹ ಮಾಡಿಕೊಡಲಾಗಿತ್ತು.

ವಿವಾಹವಾದ ಕೆಲ ದಿನಗಳಲ್ಲಿ ಜೈವೀರ್ ಶಿವಾನಿಗೆ ಕಿರುಕುಳ ನೀಡಲಾರಂಭಿಸಿದ ಮತ್ತು ದಾಂಪತ್ಯದ್ರೋಹದ ಆರೋಪ ಮಾಡುತ್ತಿದ್ದ. ಅ.19ರಂದು ಜೈವೀರ್ ಗ್ರಾಮ ಪಂಚಾಯತ್ ನಲ್ಲಿ ದೂರು ನೀಡಿದ. ಇದರ ಆಧಾರದಲ್ಲಿ ಸಂಬಂಧಿಕರ ಮನೆಯೊಂದರಲ್ಲಿ ದೆವ್ವ ಬಿಡಿಸುವ ಮಹಿಳೆಯ ಸಮ್ಮುಖದಲ್ಲಿ ಈ ಅಗ್ನಿ ಪರೀಕ್ಷೆ ನಡೆಸಲಾಗಿದೆ.

ಜೈವೀರ್ ಕೂಡಾ ತನ್ನ ಸತ್ಯವನ್ನು ಪ್ರಮಾಣಿಸಲು ಅಗ್ನಿ ಪರೀಕ್ಷೆಗೆ ಒಳಗಾಗಬೇಕು ಎಂದು ಶಿವಾನಿ ಷರತ್ತು ಹಾಕಿದಳು. ಇಬ್ಬರಿಗೂ ಅಗ್ನಿ ಪರೀಕ್ಷೆ ನಡೆಸಲು ಪಂಚಾಯತ್ ತೀರ್ಮಾನ ಕೈಗೊಂಡಿತು. ಮೊದಲು ಜೈವೀರ್‌ನ ಕೈಗೆ ಕೆಂಡ ಹಾಕಿದಾಗ ತಕ್ಷಣವೇ ಅದನ್ನು ಎಸೆದ. ಆದರೆ ಮಹಿಳೆಯ ಸರದಿ ಬಂದಾಗ ಆಕೆ ಕೆಂಡ ಎಸೆಯಲು ಅವಕಾಶವಾಗದಂತೆ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ. ಇದರಿಂದ ಆಕೆಯ ಕೈ ಸುಟ್ಟಿತು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News