ಸಂವಿಧಾನ ಸಂರಕ್ಷಣೆ ಇಂದಿನ ತುರ್ತು ಅಗತ್ಯ: ಸಿ.ಬಸವಲಿಂಗಯ್ಯ

Update: 2018-10-26 13:49 GMT

ಬೆಂಗಳೂರು, ಅ.26: ಕೆಲವು ಮೂಲಭೂತವಾದಿಗಳು ಸಂವಿಧಾನವನ್ನು ದುರ್ಬಲಗೊಳಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಇಂತಹವರಿಂದ ಸಂವಿಧಾನವನ್ನು ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ ತಿಳಿಸಿದರು.

ಶುಕ್ರವಾರ ದೂರದರ್ಶನ ಎಸ್ಸಿ, ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ ದೂರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 127ನೆ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುವಾದಿ ಶಕ್ತಿಗಳಿಂದ ಸಂವಿಧಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದಲಿತ ಸಮುದಾಯ ಒಂದಾಗಿ ಹೋರಾಟ ಮಾಡುವುದು ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸಂವಿಧಾನದ ಪರವಾಗಿ ಮಾತನಾಡುವವರನ್ನು ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವವರನ್ನು ನಗರ ನಕ್ಸಲ್ ಹಣೆಪಟ್ಟಿ ಕಟ್ಟುಲಾಗುತ್ತಿದೆ. ಹೋರಾಟಗಾರರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಹಲ್ಲೆ ಮಾಡುವಂತಹ ಪ್ರಕ್ರಿಯೆ ದೇಶಾದ್ಯಂತ ನಡೆಯುತ್ತಿದೆ. ಈ ಬಗ್ಗೆ ದೇಶದ ಸಾಮಾನ್ಯ ಜನತೆ ಜಾಗೃತರಾಗಬೇಕಿದೆ ಎಂದು ಅವರು ತಿಳಿಸಿದರು.

ದೂರದರ್ಶನ ಎಸ್ಸಿ, ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ರಾಜಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ದಾಳಿಗಳು, ಬಹಿಷ್ಕಾರಗಳು ಹೆಚ್ಚುತ್ತಿವೆ. ಹಾಗೂ ಮನುವಾದಿ ಆಚರಣೆಗಳು ಪುನಃ ತಲೆ ಎತ್ತುತ್ತಿವೆ. ಹೀಗಾಗಿ ಪ್ರಜಾಪ್ರಭುತ್ವವನ್ನು ಗೌರವಿಸುವವರು ಮನುವಾದಿಗಳ ಕುತಂತ್ರಗಳಿಗೆ ಬಲಿಯಾಗಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೂರದರ್ಶನ ಕೇಂದ್ರದ ಮಾದವ ರೆಡ್ಡಿ, ಕಾರ್ಯಕ್ರಮ ಮುಖ್ಯಸ್ಥೆ ಉಷಾಕಿಣಿ, ಸಂಘದ ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು. ಈ ವೇಳೆ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಯಿತು. ಜಾನಪದ ತಜ್ಞ ಡಾ.ಬಾನಂದೂರು ಕೆಂಪಯ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News