ಸುಧಾ, ಫೆರೇರಾ ಹಾಗೂ ವರ್ನನ್ ಜಾಮೀನು ಅರ್ಜಿ ತಿರಸ್ಕೃತ: ಬಂಧನ ಸಾಧ್ಯತೆ

Update: 2018-10-26 16:50 GMT

 ಹೊಸದಿಲ್ಲಿ,ಅ.26: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 28ರಂದು ಪುಣೆ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಸಾಮಾಜಿಕ ಹೋರಾಟಗಾರರಾದ ಸುಧಾ ಭಾರದ್ವಾಜ್, ಅರುಣ್ ಫೆರೀರಾ ಹಾಗೂ ವರ್ನನ್ ಗೊನ್ಸಾಲ್ವಿಸ್, ಜಾಮೀನು ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಶೇಷ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.

 ಸುಪ್ರೀಂಕೋರ್ಟ್ ಜಾರಿಗೊಳಿಸಿದ ಆದೇಶದ ಹಿನ್ನೆಲೆಯಲ್ಲಿ ಇತರ ಇಬ್ಬರು ಸಾಮಾಜಿಕ ಹೋರಾಟಗಾರರಾದ ಪಿ.ವರವರ ರಾವ್ ಹಾಗೂ ಗೌತಮ್ ನವ್ಲಾಖಾ ಅವರೊಂದಿಗೆ ಈ ಮೂವರನ್ನು ನಾಲ್ಕು ವಾರಗಳ ಅವಧಿಗೆ ಗೃಹಬಂಧನದಲ್ಲಿಡಲಾಗಿತ್ತು. ಅವರ ಗೃಹಬಂಧನದ ಅವಧಿ ಇಂದಿಗೆ ಮುಕ್ತಾಯಗೊಂಡಿತ್ತು. ಜಾಮೀನು ಬಿಡುಗಡೆ ದೊರೆಯದ ಹಿನ್ನೆಲೆಯಲ್ಲಿ ಗೃಹಬಂಧನದ ಅವಧಿಯನ್ನು ಒಂದು ವಾರದವರೆಗೆ ವಿಸ್ತರಿಸುವಂತೆ ಕೋರಿ ಅವರ ವಕೀಲರು ಬಾಂಬೆ ನ್ಯಾಯಾಲಯದ ಮೆಟ್ಟಲೇರಿದ್ದರು. ಆದರೆ ನ್ಯಾಯಾಲಯ ಅದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಮೂವರನ್ನು ಇಂದು ತಮ್ಮ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಕೆಳನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಒಂದು ವಾರದ ಕಾಲಾವಕಾಶ ನೀಡಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಭಾರದ್ವಜ್, ಫೆರೇರಾ ಹಾಗೂ ವೆರ್ನೊಮ್ ಗೊನ್ಸಾಲ್ವಿಸ್ ಅವರ ವಕೀಲರುಗಳು ತಿಳಿಸಿದ್ದಾರೆ.

ಈ ವರ್ಷದ ಜನವರಿ 1ರಂದು ಭೀಮಾಕೋರೆಗಾಂವ್‌ನಲ್ಲಿ ನಡೆದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಭುಗಿಲೆದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರಧ್ವಜ್, ವೆರ್ನನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರನ್ನು ಬಂಧಿಸಿದ್ದರು. ಈ ಮೂವರಿಗೆ ನಿಷೇಧಿತ ಸಿಪಿಐ(ಮಾವೊವಾದಿ) ಸಂಘಟನೆಯ ಜೊತೆ ನಂಟಿದೆಯೆಂದು ಪೊಲೀಸರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News