ಎರಡನೇ ಟ್ವೆಂಟಿ-20: ಪಾಕಿಸ್ತಾನಕ್ಕೆ ಆಸೀಸ್ ವಿರುದ್ಧ ರೋಚಕ ಜಯ

Update: 2018-10-27 05:17 GMT

ದುಬೈ, ಅ.27: ‘ಬಿಗ್ ಹಿಟ್ಟರ್’ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ನಡುವೆಯೂ ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 11 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಟಿ-20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

 ದುಬೈ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 148 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯದ ಗೆಲುವಿಗೆ ಕೊನೆಯ ಓವರ್‌ನಲ್ಲಿ 23 ರನ್ ಅಗತ್ಯವಿತ್ತು. 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 52 ರನ್ ಗಳಿಸಿದ ಮ್ಯಾಕ್ಸ್‌ವೆಲ್ ಪ್ರಯತ್ನದ ಹೊರತಾಗಿಯೂ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಇದಕ್ಕೆ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡ ಬಾಬರ್ ಆಝಮ್(45) ಹಾಗೂ ಮುಹಮ್ಮದ್ ಹಫೀಝ್(40)ನೆರವಿನಿಂದ 6 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲು ಶಕ್ತವಾಯಿತು.

 ಪಾಕಿಸ್ತಾನ ಅಬುಧಾಬಿಯಲ್ಲಿ ನಡೆದ ಮೊದಲ ಪಂದ್ಯವನ್ನು 66 ರನ್ ಜಯಿಸಿದೆ. ರವಿವಾರ ದುಬೈನಲ್ಲಿ ಮೂರನೆ ಹಾಗೂ ಅಂತಿಮ ಪಂದ್ಯ ನಡೆಯಲಿದೆ.

ಸರ್ಫರಾಝ್ ಅಹ್ಮದ್ 2016ರಲ್ಲಿ ಪಾಕ್ ನಾಯಕತ್ವವಹಿಸಿಕೊಂಡ ಬಳಿಕ 10ನೇ ಬಾರಿ ಟ್ವೆಂಟಿ-20 ಸರಣಿ ಗೆದ್ದುಕೊಂಡರು. ಇದರಲ್ಲಿ ಈ ವರ್ಷ ಝಿಂಬಾಬ್ವೆಯಲ್ಲಿ ನಡೆದ ತ್ರಿಕೋನ ಸರಣಿಯೂ ಸೇರಿದೆ. ಗೆಲ್ಲಲು ಸುಲಭ ಸವಾಲನ್ನೇ ಪಡೆದಿದ್ದ ಆಸ್ಟ್ರೇಲಿಯ ಡಿ ಆರ್ಚಿಶಾರ್ಟ್(2),ಫಿಂಚ್(3) ಹಾಗೂ ಬಿಗ್ ಹಿಟ್ಟರ್ ಕ್ರಿಸ್ ಲಿನ್(7)ಬೇಗನೆ ಔಟಾಗಿದ್ದು ಆಸ್ಟ್ರೇಲಿಯ 31 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.

18, 34 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಮ್ಯಾಕ್ಸ್‌ವೆಲ್ ಅವರು ಮಿಚೆಲ್ ಮಾರ್ಷ್(27)ಅವರೊಂದಿಗೆ 4ನೇ ವಿಕೆಟ್‌ಗೆ 30 ರನ್ ಸೇರಿಸಿದರು. ಆದರೆ, ನಿರಂತರವಾಗಿ ವಿಕೆಟ್ ಕಬಳಿಸಿದ ಪಾಕ್ ತಂಡ ಆಸೀಸ್‌ಗೆ ಒತ್ತಡ ಹೇರಿತು. ಮಾರ್ಷ್ ಹಾಗೂ ಬೆನ್ ಡಿರ್ಮಾಟ್(3) ಬೆನ್ನುಬೆನ್ನಿಗೆ ಔಟಾದಾಗ ಆಸ್ಟ್ರೇಲಿಯ 100ರೊಳಗೆ ಆಲೌಟಾಗುವ ಭೀತಿಯಲ್ಲಿತ್ತು. ಆಗ 7ನೇ ವಿಕೆಟ್‌ಗೆ 59 ರನ್ ಜೊತೆಯಾಟ ನಡೆಸಿದ ಮ್ಯಾಕ್ಸ್‌ವೆಲ್ ಹಾಗೂ ನಥಾನ್ ಕೌಲ್ಟರ್‌ನೀಲ್ ತಂಡಕ್ಕೆ ಆಸರೆಯಾದರು.

ಆಸ್ಟ್ರೇಲಿಯಕ್ಕೆ 20ನೆ ಓವರ್‌ನಲ್ಲಿ ಗೆಲ್ಲಲು 23 ರನ್ ಅಗತ್ಯವಿತ್ತು. ಶಾಹೀನ್ ಅಫ್ರಿದಿ ಅವರ ಕೊನೆಯ ಓವರ್‌ನ ಮೊದಲ ಎಸೆತವನ್ನು ಕೌಲ್ಟರ್ ನೀಲ್ ಸಿಕ್ಸರ್‌ಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಒಂದು ರನ್ ಪಡೆದರು. ಆದರೆ, ಮುಂದಿನ ಎಸೆತದಲ್ಲಿ ಮ್ಯಾಕ್ಸ್‌ವೆಲ್ ಔಟಾದಾಗ ಆಸ್ಟ್ರೇಲಿಯದ ಗೆಲುವಿನ ವಿಶ್ವಾಸ ಕಮರಿಹೋಯಿತು. 5ನೇ ಎಸೆತದಲ್ಲಿ ನೀಲ್ ಕೂಡ ಔಟಾದರು. ಅಫ್ರಿದಿ ಕೊನೆಯ ಓವರ್‌ನಲ್ಲಿ ಒಟ್ಟು 11 ರನ್ ನೀಡಿ ಪಾಕ್‌ಗೆ ರೋಚಕ ಗೆಲುವು ತಂದರು.

ಶಾಹೀನ್(2-35) ಹಾಗೂ ಸ್ಪಿನ್ನರ್ ಶಾದಾಬ್ ಖಾನ್(2-30) ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News