ಭಯೋತ್ಪಾದನೆಯಲ್ಲಿ ಸಿರಿಯಕ್ಕಿಂತ ಪಾಕ್ 3 ಪಟ್ಟು ಹೆಚ್ಚು ಅಪಾಯಕಾರಿ: ಅಧ್ಯಯನ ವರದಿ

Update: 2018-10-27 15:48 GMT
ಸಾಂದರ್ಭಿಕ ಚಿತ್ರ

ಲಂಡನ್, ಅ. 27: ಭಯೋತ್ಪಾದಕರ ಉತ್ಪಾದಕ ನೆಲ ಹಾಗೂ ಜಾಗತಿಕ ಭಯೋತ್ಪಾದನೆಯ ಬೆಂಬಲಿಗ ದೇಶವಾಗಿರುವ ಪಾಕಿಸ್ತಾನವು ಸಿರಿಯಕ್ಕಿಂತ ಮೂರು ಪಟ್ಟು ಅಧಿಕ ಭಯೋತ್ಪಾದನಾ ಬೆದರಿಕೆಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಸ್ಟ್ರಾಟಜಿಕ್ ಫೋರ್‌ಸೈಟ್ ಗ್ರೂಪ್ ಜಂಟಿಯಾಗಿ ನಡೆಸಿದ ‘ಹ್ಯುಮೇನಿಟಿ ಎಟ್ ರಿಸ್ಕ್- ಗ್ಲೋಬಲ್ ಟೆರರ್ ತ್ರೆಟ್ ಇಂಡಿಕಾಂಟ್’ ಎಂಬ ವಿಷಯದ ಕುರಿತ ಅಧ್ಯಯನವು ಈ ನಿರ್ಧಾರಕ್ಕೆ ಬಂದಿದೆ.

ಅಫ್ಘಾನ್ ತಾಲಿಬಾನ್ ಮತ್ತು ಲಷ್ಕರೆ ತಯ್ಯಬ ಭಯೋತ್ಪಾದಕ ಸಂಘಟನೆಗಳು ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಭದ್ರತೆಗೆ ಪ್ರಬಲ ಬೆದರಿಕೆಯಾಗುತ್ತದೆ ಎಂದು ವರದಿ ಹೇಳಿದೆ.

ಅದೇ ವೇಳೆ, ಅತ್ಯಂತ ಹೆಚ್ಚು ಭಯೋತ್ಪಾದಕ ನೆಲೆಗಳು ಮತ್ತು ಸುರಕ್ಷಿತ ಆಶ್ರಯ ತಾಣಗಳಿರುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ ಎಂದಿದೆ.

‘‘ವಾಸ್ತವಿಕ ಸಂಗತಿಗಳು ಮತ್ತು ಅಂಕಿಅಂಶಗಳ ಆಧಾರದಲ್ಲಿ, ಅತ್ಯಂತ ಅಪಾಯಕಾರಿ ಭಯೋತ್ಪಾದಕ ಗುಂಪುಗಳ ಬಗ್ಗೆ ಹೇಳುವುದಾದರೆ, ಅವುಗಳ ಪೈಕಿ ಹೆಚ್ಚಿನ ಗುಂಪುಗಳಿಗೆ ಪಾಕಿಸ್ತಾನ ಆಶ್ರಯ ಹಾಗೂ ನೆರವು ನೀಡಿದೆ. ಅದೇ ವೇಳೆ, ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಗಣನೀಯ ಸಂಖ್ಯೆಯ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದ ನೆರವಿನೊಂದಿಗೆ ದಾಳಿ ನಡೆಸುತ್ತಿವೆ’’ ಎಂದು ವರದಿ ತಿಳಿಸಿದೆ.

ಮಾನವ ಪ್ರಗತಿಗೆ ಅಡ್ಡಿ

‘‘ಎಲ್ಲ ವಿಧದ ಉಗ್ರವಾದದ ಹೆಚ್ಚಳ, ಸಮೂಹ ವಿನಾಶಕ ಅಸ್ತ್ರಗಳ ದುರ್ಬಳಕೆ ಹಾಗೂ ಭಯೋತ್ಪಾದನೆಯು ಆರ್ಥಿಕತೆಗೆ ನೀಡುವ ಹೊಡೆತವು ಇಂದಿನಿಂದ 2030ರವರೆಗಿನ ಅವಧಿಯಲ್ಲಿ ಮಾನವ ಪ್ರಗತಿಗೆ ಹಾಗೂ ಮಾನವನ ಉಳಿಯುವಿಕೆಗೂ ತಡೆಯಾಗಬಲ್ಲವು. ಇವುಗಳೆಲ್ಲವೂ ಭಯೋತ್ಪಾದನೆಯೊಂದಿಗೆ ಆಂತರಿಕ ನಂಟು ಹೊಂದಿವೆ’’ ಎಂದು 80ಕ್ಕೂ ಅಧಿಕ ಪುಟಗಳ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News