ಹಿಮದ ಯಶಸ್ಸಿನ ಹಾದಿಯಲ್ಲಿ ಜಾತಿಯ ಕವಲು ಹುಡುಕುತ್ತ!

Update: 2018-10-27 18:36 GMT

ಫಿನ್‌ಲ್ಯಾಂಡ್‌ನ ಟ್ಯಾಂಪರೆ ಕ್ರೀಡಾಂಗಣದಲ್ಲಿ ಹಿಮಾ ದಾಸ್ ದಾಪುಗಾಲಿಟ್ಟು ಓಡುತ್ತಿರುವಾಗ ಅಲ್ಲಿಯ ವೀಕ್ಷಕ ವಿವರಣೆಕಾರ ‘‘ಭಾರತದ ಹೊಸ ತಾರೆ ಇಲ್ಲಿ ಉದಯಿಸಿದೆ’’ ಎಂದು ಸಂಭ್ರಮದಿಂದ ಹೇಳುತ್ತಿದ್ದರೆ ನಾವು ಭಾರತೀಯರು ಇಲ್ಲಿ ಆಕೆಯ ಜಾತಿಯ ಮೂಲವನ್ನು ಹುಡುಕಲಾರಂಭಿಸಿದ್ದೆವು!.

ಬೆಳೆದು ನಿಂತ ಭತ್ತದ ಪೈರಿನ ನಡುವೆ ಓಡುವ ಆಕೆಗೆ ಗುರಿ ಇಷ್ಟೆ... ತಂದೆಗೆ ಬುತ್ತಿ ನೀಡುವುದು... ಮತ್ತೆ ಅಮ್ಮನಲ್ಲಿಗೆ ಓಟ... ಮನೆ ಕೆಲಸ...ಗದ್ದೆಯ ಕೆಸರು... ಅಂಟಿದ ಜಾತಿ... ಉಳಿದದ್ದು ವೇಗ ಮಾತ್ರ... ಅಂದು ಬರಿಗಾಲಲ್ಲಿ ಓಡಿದ ಆಕೆಗೆ ಈಗ ಜಗತ್ತಿನ ಶ್ರೇಷ್ಠ ಕ್ರೀಡಾ ಉತ್ಪನ್ನಗಳ ಕಂಪೆನಿ ಅಡಿಡಾಸ್ ಆಕೆಯ ಹೆಸರಿನಲ್ಲೇ ಉತ್ಪನ್ನವನ್ನು ಸಿದ್ಧಪಡಿಸಿ ನೀಡಿದೆ. ಇಷ್ಟು ಸಾಧನೆ ಮಾಡಿದ ಅಸ್ಸಾಂನ ನಗಾನ್ ಜಿಲ್ಲೆಯ ಧಿಂಗ್ ಪಟ್ಟದ ಹೊರವಲಯದಲ್ಲಿರುವ ಖಂಡುಲಿಮಾರಿ ಗ್ರಾಮದ ಸಾಧಕಿ ಹಿಮಾ ದಾಸ್. ಜಗತ್ತು ಆಕೆಯ ಸಾಧನೆಯ ಬಗ್ಗೆ ತಿಳಿದುಕೊಳ್ಳಲು ಕುತೂಹಲದಿಂದ ಹುಡುಕುತ್ತಿದ್ದರೆ, ನಾವು ಭಾರತೀಯರು ಆಕೆಯ ಜಾತಿಯನ್ನು ಹುಡುಕಲಾರಂಭಿಸಿದೆವು. ಸುಮಾರು 4ಲಕ್ಷಕ್ಕೂ ಹೆಚ್ಚು ಮಂದಿ ಆಕೆಯ ಜಾತಿಯನ್ನು ತಿಳಿಯುವ ತವಕದಲ್ಲಿದ್ದರು. ಸಾಮಾನ್ಯವಾಗಿ ಹೆಸರಿನ ಮುಂದೆ ದಾಸ್ ಇದ್ದರೆ ಅವರನ್ನು ಬಂಗಾಳದ ಮೂಲದವರು ಎಂದು ತಿಳಿಯಲಾಗುತ್ತದೆ. ಆದರೆ ಅಸ್ಸಾಂನಲ್ಲೂ ದಾಸ್ ಸರ್‌ನೇಮ್ ಹೊಂದಿರುವವರೂ ಇದ್ದಾರೆ ಎಂಬುದಕ್ಕೆ ಹಿಮಾ ಸಾಕ್ಷಿ. ಆಕೆ ಒಬ್ಬ ಮನುಷ್ಯಳು, ಸಾಧಕಿ... ನೀವೆಷ್ಟೇ ಜಾತಿಯ ಬಣ್ಣ ಹಚ್ಚಿದರೂ ಆಕೆ ಭಾರತದ ಕ್ರೀಡಾ ಸಾಧಕಿ. ಭಾರತೀಯಳು.
 ಗದ್ದೆಗಳ ಮಧ್ಯದಲ್ಲಿ ಬರಿಗಾಲಲ್ಲಿ ಓಡಿದ ಹಿಮಾ, ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂದು ಖ್ಯಾತಿ ಗಳಿಸುವ ಮೂಲಕ ಜಗತ್ತಿನ ಗಮನ ಸೆಳೆದಳು. ನಂತರ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನ ರಿಲೇಯಲ್ಲಿ ಚಿನ್ನ, ಮಿಶ್ರ ರಿಲೇಯಲ್ಲಿ ಬೆಳ್ಳಿ ಹಾಗೂ 400 ಮೀ. ಓಟದಲ್ಲೂ ಬೆಳ್ಳಿಯ ಸಾಧನೆ ಮಾಡಿದರು.

ಪದಕಕ್ಕಾಗಿ ಓಟ ಅಲ್ಲ
 ‘‘ನಾನು ಚಿನ್ನ ಗೆಲ್ಲಬೇಕೆಂದು ಓಟ ಆರಂಭಿಸಿದವಳಲ್ಲ,’’ ಎಂದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ನಂತರ ಹಿಮಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಓಟ ಆಕೆಯ ನಿತ್ಯದ ಬದುಕಾಗಿತ್ತು. ಪುರುಷರ ಜತೆಯಲ್ಲಿ ಫುಟ್ಬಾಲ್ ಆಡುವುದು ಕೂಡ ಆಕೆಯ ನಿತ್ಯದ ಆಟವಾಗಿತ್ತು. ಧಿಂಗ್‌ನ ಚಿಕ್ಕ ಹಳ್ಳಿಯಲ್ಲಿ ವಾಸಿಸುತ್ತಿದ್ದ ಹಿಮಾ ರೀತಿಯ ಅಲ್ಲಿಯ ಇತರ ಹೆಣ್ಣು ಮಕ್ಕಳು ಪುರುಷರೊಂದಿಗೆ ಆಡುತ್ತಿದ್ದರೆ ಸಮಾಜದ ಹಾಗೂ ಹೆತ್ತವರ ವಿರೋಧ ಕಟ್ಟಿಕೊಳ್ಳಬೇಕಾಗಿತ್ತು. ಆದರೆ ಹಿಮಾ ಅವರ ತಾಯಿ ಜೊನಾಲಿ ದಾಸ್ ಹಾಗೂ ತಂದೆ ರಂಜಿತ್ ದಾಸ್ ಮಗಳ ಖುಷಿಗೆ ಯಾವುದೇ ರೀತಿಯ ಅಡ್ಡಿ ತರಲಿಲ್ಲ. ಅವರ ಆ ಉತ್ತಮ ಗುಣವೇ ಇಂದು ದೇಶಕ್ಕೆ ಉತ್ತಮ ಕ್ರೀಡಾಪಟುವನ್ನು ನೀಡಲು ಸಾಧ್ಯವಾಯಿತು. ಆ ಗಲ್ಲಿಯಲ್ಲಿ ಆಡದ ಹೆಣ್ಣು ಮಕ್ಕಳು ಅಡುಗೆ ಮನೆಯ ಪಾಲಾದಾರು, ಎಲ್ಲರೊಂದಿಗೆ ಓಡಿ ಚಿನ್ನ ಗೆದ್ದ ಹಿಮಾ ಕೀರ್ತಿಯ ದೀಪವಾದಳು.

ಆಕೆಯ ಸಾಧನೆ ... ನಮ್ಮ ಸಣ್ಣತನ
ಕ್ರೀಡಾಪಟುಗಳು ಸಾಧನೆ ಮಾಡಿದಾಗ ಜಾತಿಯನ್ನು ಹುಡುಕುವುದು ಅಥವಾ ತಿಳಿಯುವ ಯತ್ನ ಮಾಡುವುದು ಇದೇ ಮೊದಲಲ್ಲ. ಯಾವುದೋ ಪತ್ರಿಕೆಯವರು ಹಿಮಾ ದಾಸ್ ದಲಿತ ಹುಡುಗಿ ಎಂದು ಬರೆದರು. ಇದನ್ನು ಗಮನಿಸಿದ ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ್ 10 ಲಕ್ಷ ರೂ.ಗಳನ್ನು ನೀಡಿದರು. ಸಂತೋಷದ ವಿಚಾರ. ಏಕೆಂದರೆ ಜಾತಿ ಈಗ ಉತ್ತಮ ಮಾರುಕಟ್ಟೆಯ ವಸ್ತು. ಆದರೆ ನಮ್ಮದೇ ರಾಜ್ಯದ ಬೆಳಗಾವಿ ಜಿಲ್ಲೆಯ ಬಡ ಕ್ರೀಡಾಪಟು ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ ನ ಕುರಷ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರೆ ಆಕೆಗೆ ಅಭಿನಂದನೆ ಸಲ್ಲಿಸುವ ದೊಡ್ಡ ಗುಣ ನಮ್ಮಲ್ಲಿಲ್ಲ.
ಈ ರೀತಿ ಜಾತಿ ಹುಡುಕುವುದು ಇದೇ ಮೊದಲಲ್ಲ. 2016 ರಿಯೋ ಒಲಿಂಪಿಕ್ಸ್‌ನಲ್ಲಿ ಪಿ.ವಿ. ಸಿಂಧೂ ಬೆಳ್ಳಿ ಪದಕ ಗೆದ್ದಾಗಲೂ 10 ನಿಮಿಷಗಳ ಅವಧಿಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಆಕೆಯ ಜಾತಿಯನ್ನು ಹುಡುಕಿದ್ದರು. ದೇಶಕ್ಕಾಗಿ ಕೀರ್ತಿ ತಂದವರಿಗೆ ಪ್ರೋತ್ಸಾಹ ನೀಡಲು, ಅವರಿಗೆ ಅಭಿನಂದನೆ ಸಲ್ಲಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಅವಕಾಶವಿದೆ. ಆದರೆ ನಾವು ಅವರ ಜಾತಿ ಹುಡುಕುತ್ತಿದ್ದೇವೆ ಎಂದರೆ ನಮ್ಮ ಉದ್ದೇಶ ಹಾಗೂ ನಮ್ಮ ಸ್ಥಿತಿ ಸ್ಪಷ್ಟವಾಗುತ್ತದೆ. ಈ ದೇಶ ಜಾತಿ ಮತ ಕುಲಗಳಲ್ಲಿ ವೈವಿಧ್ಯಮಯವಾದುದು. ಈ ಕಾರಣಕ್ಕಾಗಿಯೇ ಭಾರತ ಜಗತ್ತಿನಲ್ಲೇ ವಿಶಿಷ್ಟ ಹಾಗೂ ವಿಭಿನ್ನ ರಾಷ್ಟ್ರವಾಗಿದೆ. ಹಿಮಾ ಜಾಗತಿಕ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 400 ಮೀ. ಓಟದಲ್ಲಿ ಈ ಸಾಧನೆ ಮಾಡಿರುವ ಹಿಮಾ ಬಡ ಕೃಷಿಕ ಕುಟುಂಬದಿಂದ ಬಂದ ಅಥ್ಲೀಟ್. ಗಂಡು ಮಕ್ಕಳ ನಡುವೆ ಫುಟ್ಬಾಲ್ ಆಡಿಕೊಂಡು, ಭತ್ತದ ಗದ್ದೆಯಲ್ಲಿ ತಂದೆಗೆ ನೆರವಾಗಿ ಕೇವಲ 18 ತಿಂಗಳ ಹಿಂದೆಯಷ್ಟೇ ವೃತ್ತಿಪರ ಅಥ್ಲೀಟ್ ಆಗಿ ರೂಪುಗೊಂಡರು. ಸರಕಾರದ ಪ್ರೋತ್ಸಾಹ ಇಲ್ಲದೆ ಓಟವನ್ನೇ ಉಸಿರಾಗಿಸಿಕೊಂಡು, ಯಾವುದೇ ಕಾರ್ಪೊರೇಟ್ ವಲಯದಿಂದ ಪ್ರಾಯೋಜಕತ್ವ ಪಡೆಯದೆ ಓಟಕ್ಕೆ ನಿಂತವಳು. ಹಿಮಾ ದಾಸ್ ಜಾಗತಿಕ ಮಟ್ಟದಲ್ಲಿ ಚಿನ್ನ ಗೆಲ್ಲುವುದಕ್ಕೆ ಮೊದಲು ಜನಸಾಮಾನ್ಯರನ್ನು ಬಿಡಿ, ಪ್ರಮುಖ ಪತ್ರಿಕೆಗಳ ಕ್ರೀಡಾ ಪತ್ರಕರ್ತರಿಗೂ ಆಕೆಯ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಟ್ಯಾಂಪರೆ ಕ್ರೀಡಾಂಗಣದಲ್ಲಿ ದಾಸ್ ದಾಪುಗಾಲಿಟ್ಟು ಓಡುತ್ತಿರುವಾಗ ಅಲ್ಲಿಯ ವೀಕ್ಷಕ ವಿವರಣೆಕಾರ ‘‘ಭಾರತದ ಹೊಸ ತಾರೆ ಇಲ್ಲಿ ಉದಯಿಸಿದೆ’’ ಎಂದು ಸಂಭ್ರಮದಿಂದ ಹೇಳುತ್ತಿದ್ದರು. ನಿಜ ಹೇಳಬೇಕೆಂದರೆ ಜುಲೈ 12ರವರೆಗೂ ಹಿಮಾ ದಾಸ್ ತಾರೆಯಾಗಿರಲಿಲ್ಲ. ಪ್ರತಿಯೊಬ್ಬರೂ ಗೂಗಲ್‌ನಲ್ಲಿ ಹುಡುಕಿ ತಿಳಿದುಕೊಳ್ಳಲಾರಂಭಿಸಿದರು. ಆಕೆ ಎಲ್ಲಿಯವಳು?, ಇಲ್ಲಿಯ ತನಕ ಏನು ಮಾಡುತ್ತಿದ್ದಳು? ಯಾವ ರಾಜ್ಯದವಳು? ಹೇಗೆ ಸಾಧನೆ ಮಾಡಿದಳು? ಎಂಬ ಕುರಿತು ಕುತೂಹಲ ಹುಟ್ಟುವುದು ಸಹಜ. ಆದರೆ ಅದೆಲ್ಲವನ್ನು ಬಿಟ್ಟು ಜಾತಿಯ ಬಗ್ಗೆ ಹುಡುಕಾಟ ನಡೆಸಿದ್ದು ಬೇಸರದ ಸಂಗತಿ. ಆಕೆ ಚಿನ್ನ ಗೆಲ್ಲುತಿದ್ದುದೇ ತಡ ‘ಹಿಮಾ ದಾಸ್ ಕಾಸ್ಟ್’ ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆದಿದ್ದೇ ಹೆಚ್ಚು.
ಸಿಂಧೂ ಹಾಗೂ ಹಿಮಾ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕಾಗಿ ಪದಕ ಗೆದ್ದು ಯುವ ಜನತೆಗೆ ಮಾದರಿ ಎನಿಸಿದ್ದಾರೆ. ಆದರೆ ಭಾರತದಲ್ಲಿ ಯಾವುದನ್ನು ಈಗಲೂ ಗುರುತಿಸುತ್ತಿದ್ದಾರೆ ಎಂಬುದನ್ನು ಗೂಗಲ್‌ನಲ್ಲಿ ನಡೆದ ಹುಡುಕಾಟದ ಮೂಲಕ ನಾವು ತಿಳಿದುಕೊಳ್ಳಬಹುದು. ಇದು ನಮ್ಮ ಜನರ ಸಾಮಾಜಿಕ ಹಾಗೂ ರಾಜಕೀಯ ಮನಃಸ್ಥಿತಿ ಎಂದೇ ಹೇಳಬೇಕು. ಇಲ್ಲಿ ಜಾತಿಯನ್ನು ಯಾಕೆ ಹುಡುಕುತ್ತಾರೆ ಎಂಬುದು ಮುಖ್ಯವಲ್ಲ. ಆದರೆ ಅದು ಯಾಕೆ ಅಗತ್ಯವಾಗಿದೆ ಎಂಬುದೇ ಮುಖ್ಯವಾಗುತ್ತದೆ. ಇದನ್ನು ನಮ್ಮ ಸಮಾಜದಿಂದ ಬಿಡಿಸಲಾಗದ ಬಂಧವನ್ನಾಗಿ ಯಾರು ಮಾಡುತ್ತಿದ್ದಾರೆ ಎಂಬುದು ಮುಖ್ಯ. ಶತಮಾನಗಳ ಹಿಂದಿನ ಈ ಅವ್ಯವಸ್ಥೆ ಈಗಲೂ ಉಳಿದುಕೊಂಡಿರಲು ಕಾರಣ ಏನೆಂಬುದು ಮುಖ್ಯವಾಗುತ್ತದೆ. ಇದೊಂದು ಸಂಘಟಿತ ಅವ್ಯವಸ್ಥೆ. ಕ್ರೀಡಾ ಸಾಧನೆಗೂ ಇದನ್ನು ಕೊಂಡಿಯಾಗಿಸುತ್ತಿರುವುದು ಬೇಸರದ ಸಂಗತಿ. ಮನುಷ್ಯ ಸುಶಿಕ್ಷಿತನಾದಂತೆ ಜಾತಿ ವ್ಯವಸ್ಥೆಯಿಂದ ದೂರ ಸರಿಯುತ್ತಾನೆ ಎಂಬುದನ್ನು ಚಿಕ್ಕಂದಿನಿಂದಲೂ ತಿಳಿದುಕೊಂಡು ಬಂದ ಸಂಗತಿ. ಆದರೆ ಉತ್ತಮ ಶಿಕ್ಷಣದ ನಡುವೆಯೂ ನಾವು ಮತ್ತದೇ ಶತಮಾನಗಳ ಹಿಂದಿನ ಸೋಂಕಿಗೆ ತುತ್ತಾಗುತ್ತಿದ್ದೇವೆ.
 ಭಾರತದ ಮಾಜಿ ಒಲಿಂಪಿಯನ್ ವಿಕಾಸ್ ಗೌಡ ಅವರಿಗೆ ಅಮೆರಿಕದಲ್ಲಿ ತರಬೇತಿಗಾಗಿ ಪ್ರೋತ್ಸಾಹ ಧನ ನೀಡಲು ಸರಕಾರ ವಿಳಂಬ ಮಾಡಿತ್ತು. ಆಗ ಸದಾನಂದ ಗೌಡ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆಂಗ್ಲ ದಿನಪತ್ರಿಕೆಯೊಂದು ಈ ಬಗ್ಗೆ ನಿರಂತರ ಲೇಖನ ಬರೆಯಿತು. ಆದರೂ ಸರಕಾರ ವೌನಕ್ಕೆ ಶರಣಾಗಿತ್ತು. ಈ ಬಾರಿ ಕನ್ನಡ ಪತ್ರಿಕೆಯೊಂದು ವಿಭಿನ್ನ ರೀತಿಯಲ್ಲಿ ಸುದ್ದಿ ಪ್ರಕಟಿಸಿತು. ಅಲ್ಲಿ ಗೌಡ ಸಮುದಾಯವನ್ನೇ ಹೈಲೈಟ್ಸ್ ಮಾಡಿತ್ತು. ಮುಖ್ಯಮಂತ್ರಿ ಸದಾನಂದ ಗೌಡರಾಗಿದ್ದರೂ ವಿಕಾಸ್ ಗೌಡ ಅವರಿಗೆ ಆರ್ಥಿಕ ನೆರವು ನೀಡಲಾಗುತ್ತಿಲ್ಲ ಎಂದು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಮರು ದಿನವೇ 50 ಲಕ್ಷ ರೂ. ಆರ್ಥಿಕ ನೆರವನ್ನು ಪ್ರಕಟಿಸಿದರು. ಜಾತಿ ಇಲ್ಲಿ ಧನಾತ್ಮಕವಾಗಿ ಕೆಲಸ ಮಾಡಿದೆ. ಆದರೆ ಒಬ್ಬ ಕ್ರೀಡಾಪಟುವಿನ ಸಾಧನೆಗೆ ತಕ್ಕ ಸ್ಥಾನ ಮಾನ ನೀಡಬೇಕೇ ಹೊರತು ಅವರ ಜಾತಿ ಅಥವಾ ಧರ್ಮದ ಆಧಾರದ ಮೇಲೆ ನೀಡುವುದು ಸೂಕ್ತ ಎನಿಸದು. ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯೂ ಈ ಜಾತಿ ಪಿಡುಗನ್ನು ಇಲ್ಲಿಯವರೆಗೂ ಮುಂದುವರಿಸಿಕೊಂಡು ಬರುವಂತೆ ಮಾಡಿದೆ. ಜಾತಿ ಮತ್ತು ಬಣ್ಣ ಕ್ರೀಡಾ ಲೋಕಕ್ಕೆ ಸೂಕ್ತವಾದುದಲ್ಲ. ಹಾಗಿರುತ್ತಿದ್ದರೆ ಅಮೆರಿಕ ಇಂದು ಕ್ರೀಡಾ ಕ್ಷೇತ್ರದಲ್ಲಿ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳುತ್ತಿರಲಿಲ್ಲ. ಹಾಗಂತ ಯಾವುದೋ ಹಳ್ಳಿಯ ಮಂದಿ ಒಂದಾಗಿ ಕೂತು ಹಿಮಾ ದಾಸ್ ಅವರ ಜಾತಿಯನ್ನು ಹುಡುಕಿಲ್ಲ. ಅವರು ಈ ಹಳ್ಳಿ ಹುಡುಗಿಯ ಸಾಧನೆಯನ್ನು ಕಂಡು ಸಂಭ್ರಮಿಸಿದ್ದಾರೆ. ಭಾರತಕ್ಕೆ ಐತಿಹಾಸಿಕ ಚಿನ್ನ ದಕ್ಕಿದೆ ಎಂದು ಖುಷಿ ಪಟ್ಟಿದ್ದಾರೆ. ಜಾತಿಯನ್ನು ಹುಡುಕಿದ್ದು ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದಿರುವ ಅಥವಾ ತನ್ನೆದುರು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹಿಡಿದಿರುವ ಪ್ರಜ್ಞಾವಂತ ನಾಗರಿಕರು. ಹಿಮಾ ದಾಸ್ ಅವರ ಸಾಧನೆಯನ್ನು ಸಂಭ್ರಮಿಸೋಣ, ಅವರ ಜಾತಿಯನ್ನಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News