ಜಿದ್ದಾಜಿದ್ದಿನ ಕಣವಾದ ಪಶ್ಚಿಮ ಬಂಗಾಳ

Update: 2024-04-29 05:10 GMT

ಭಾರತೀಯ ಜನತಾ ಪಕ್ಷ (ಬಿಜೆಪಿ) ದಶಕದಿಂದ ಪ್ರಯಾಸಪಟ್ಟು ಪಶ್ಚಿಮ ಬಂಗಾಳದೊಳಕ್ಕೆ ನುಸುಳಿದೆ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸಿನ (ಟಿಎಂಸಿ) ಪ್ರತಿರೋಧದ ನಡುವೆ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದಿದೆ. ಈ ಲೋಕಸಭೆ ಚುನಾವಣೆಯಲ್ಲಿ ಕಮಲ ಇನ್ನಷ್ಟು ಅರಳುವುದೇ ಅಥವಾ ಟಿಎಂಸಿ ‘ಹೊಡೆತ’ಕ್ಕೆ ಸಿಕ್ಕಿ ಮುದುಡುವುದೇ ಎಂಬ ಕುತೂಹಲ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಎಲ್ಲೆಡೆಯೂ ಇದೆ.

ಈ ಸಲದ ಚುನಾವಣೆ ಎರಡೂ ಪಕ್ಷಗಳಿಗೂ ನಿರ್ಣಾಯಕ. ಏಕೆಂದರೆ, ಟಿಎಂಸಿ ಕ್ಷೇತ್ರಗಳ ಮೇಲೇ ಬಿಜೆಪಿ ಕಣ್ಣಿಟ್ಟಿದೆ. ಅದನ್ನು ಹಿಮ್ಮೆಟ್ಟಿಸಿ, ತನ್ನ ಆಧಿಪತ್ಯ ಉಳಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಟಿಎಂಸಿಗಿದೆ. ಬಿಜೆಪಿ ಹೆಚ್ಚು ಸ್ಥಾನ ಗೆದ್ದರೆ ಅದರ ನೇರ ಪರಿಣಾಮ ರಾಜ್ಯ ರಾಜಕಾರಣದ ಮೇಲೂ ಆಗಬಹುದು. ಆಡಳಿತ ಪಕ್ಷದ ಶಾಸಕರು ಪಕ್ಷಾಂತರ ಮಾಡಬಹುದು. ಅಕಸ್ಮಾತ್‌ಸದ್ಯಕ್ಕೆ ಅದಾಗದಿದ್ದರೆ 2026ರ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ಪ್ರಯತ್ನಿಸಬಹುದು.

2014ರ ಲೋಕಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದ ಬಿಜೆಪಿ ಐದೇ ವರ್ಷದಲ್ಲಿ 18 ಕ್ಷೇತ್ರಗಳನ್ನು ವಶಕ್ಕೆ ಪಡೆದಿದೆ. ಮತ್ತೊಂದೆಡೆ ಟಿಎಂಸಿ, ಮತಗಳ ಪ್ರಮಾಣ ಹೆಚ್ಚಿಸಿಕೊಂಡಿದ್ದರೂ ಸೀಟುಗಳ ಸಂಪಾದನೆಯಲ್ಲಿ ಹಿಂದೆ ಬಿದ್ದಿದೆ. 2014ರಲ್ಲಿ 34 ಸ್ಥಾನ ಪಡೆದಿದ್ದ ಮಮತಾ ಅವರ ಪಕ್ಷ ಆನಂತರದ ಚುನಾವಣೆಯಲ್ಲಿ ಗೆದ್ದಿದ್ದು 22 ಕ್ಷೇತ್ರ. 12 ಕ್ಷೇತ್ರ ಕಳೆದುಕೊಂಡಿದೆ. ಈ ಕಾರಣಕ್ಕೆ 2024ರ ಚುನಾವಣೆಯಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿ ಮತದಾರರು ಮಗ್ನರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ. ಅದು? ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದ್ದರೂ ಕಾಂಗ್ರೆಸ್ ಹಾಗೂ ಎಡ ಪಕ್ಷಗಳಿಗೆ ಯಾವುದೇ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿಲ್ಲ. ಮಮತಾಗೆ ಬಿಜೆಪಿಯಷ್ಟೇ ಎಡ ಪಕ್ಷಗಳ ಜತೆಗೂ ವೈರತ್ವವಿದೆ. ಅವರು ಹಳೇ ದ್ವೇಷ ಮರೆತಿಲ್ಲ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿದಿವೆ. ಹೀಗಾಗಿ, ಟಿಎಂಸಿ ಏಕಕಾಲಕ್ಕೆ ಬಿಜೆಪಿ ಮತ್ತು ಮೈತ್ರಿಕೂಟದ ವಿರುದ್ಧಹೋರಾಡುತ್ತಿದೆ.

ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮ ಬಂಗಾಳ ಅಧಿಕಾರ (ಮುಖ್ಯಮಂತ್ರಿ ಕುರ್ಚಿ) ಸುಲಭವಾಗಿ ಸಿಕ್ಕಿದ್ದಲ್ಲ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತೆಯ ಮಟ್ಟದಿಂದ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರ ಹಿಂದೆ ದೊಡ್ಡ ಹೋರಾಟವಿದೆ. 34 ವರ್ಷಗಳ ಎಡರಂಗದ ಸರಕಾರ ಕಿತ್ತೊಗೆಯಲು ಬೀದಿಯಲ್ಲಿ ಹೊಡೆದಾಡಿದ್ದಾರೆ. ವಿರೋಧಿಗಳಿಂದ ಹೊಡೆತ ತಿಂದಿದ್ದಾರೆ. ಧರಣಿ ಸತ್ಯಾಗ್ರಹ ಮಾಡಿದ್ದಾರೆ. ಬಂಧನಕ್ಕೂ ಒಳಗಾಗಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಲು ಅವರಷ್ಟು ಕಷ್ಟ ಪಟ್ಟ ಮತ್ತೊಬ್ಬ ನಾಯಕರು ದೇಶದಲ್ಲಿ ಸಿಗಲಾರರು.

ಮಮತಾ ಅಧಿಕಾರಕ್ಕೆ ಬರುವ ಮುನ್ನ ಎಡಪಂಥೀಯರ ಜತೆ ಬಡಿದಾಟ. ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ, ಸಂಘಪರಿವಾರದವರ ಜತೆ ಗುದ್ದಾಟ... 70ರ ದಶಕದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಮೂಲಕ ರಾಜಕೀಯ ಆರಂಭಿಸಿದ ಮಮತಾ ಸಂಘಟನಾ ಶಕ್ತಿಯಿಂದ ಬಹು ಬೇಗನೆ ಪಕ್ಷದೊಳಗೆ ಮೇಲೇರಿದವರು. ಸಿಪಿಎಂ ನೇತೃತ್ವದ ಎಡರಂಗ ಸರಕಾರದ ವಿರುದ್ಧ ತಾವು ನಡೆಸಿದ ಹೋರಾಟಕ್ಕೆ ಪಕ್ಷ ಸಾಥ್ ಕೊಡಲಿಲ್ಲ ಎಂಬ ಕಾರಣಕ್ಕೆ 1997ರಲ್ಲಿ ಕಾಂಗ್ರೆಸ್ ತೊರೆದ ಮಮತಾ, ಮರು ವರ್ಷ ಟಿಎಂಸಿ ಕಟ್ಟಿದರು.

ಹೊಸ ಪಕ್ಷ ಕಟ್ಟಿ ಚುನಾವಣೆಗೆ ಹೋಗುವುದು ಸುಲಭದ ವಿಷಯವಲ್ಲ. ಸಾಹಸದ ಕೆಲಸ. ಹೆಜ್ಜೆಹೆಜ್ಜೆಗೂ ಮಮತಾ ಅಡ್ಡಿ, ಆತಂಕ ಎದುರಿಸಿದ್ದಾರೆ. ಅವುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿದ್ದಾರೆ. ಸಿಂಗೂರ್ ಮತ್ತು ನಂದಿ ಗ್ರಾಮಗಳಲ್ಲಿ ರೈತರ ಜಮೀನನ್ನು ಉದ್ಯಮ ಸ್ಥಾಪನೆಗಾಗಿ ವಶಪಡಿಸಿಕೊಂಡಿದ್ದ ಎಡರಂಗ ಸರಕಾರದ ವಿರುದ್ಧ ಮಮತಾ ಅವರದ್ದು ಭಾರೀ ಹೋರಾಟ. ಅದೇ ಅವರನ್ನು 2011ರಲ್ಲಿ ಮುಖ್ಯಮಂತ್ರಿ ಗಾದಿಗೆ ತಂದು ಕೂರಿಸಿದ್ದು.

2011ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ 184 ಕ್ಷೇತ್ರಗಳನ್ನು ಪಡೆದಿತ್ತು. ಸುದೀರ್ಘ ಆಡಳಿತ ನಡೆಸಿದ್ದ ಸಿಪಿಎಂಗೆ ಸಿಕ್ಕಿದ್ದು ಬರೀ 40 ಸ್ಥಾನ. ಕಾಂಗ್ರೆಸ್ 42 ಕ್ಷೇತ್ರಗಳಲ್ಲಿ ಜಯಿಸಿತ್ತು. ಟಿಎಂಸಿ ಶೇ. 38.93, ಕಾಂಗ್ರೆಸ್ ಶೇ. 9.09 ಮತ್ತು ಸಿಪಿಎಂಗೆ ಶೇ. 30.08 ಮತಗಳು ಬಿದ್ದಿದ್ದವು. ಅಲ್ಲಿಂದಲೇ ಎಡ ಪಕ್ಷಗಳ ಪತನ ಆರಂಭ. ಈ ಜಾಗವನ್ನು ಬಿಜೆಪಿ ಆಕ್ರಮಿಸಿತು. 26 ವರ್ಷಗಳ ಟಿಎಂಸಿ ರಾಜಕೀಯ ಇತಿಹಾಸದಲ್ಲಿ ಮಮತಾ ಬೇರೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದು ಎರಡು ಸಲ. ಒಮ್ಮೆ ಎನ್‌ಡಿಎ ಜತೆ, ಮತ್ತೊಮ್ಮೆ ಯುಪಿಎ ಜತೆ. ಎರಡೂ ಸಲ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದರು.2011ರಿಂದ ರಾಜ್ಯ ರಾಜಕಾರಣದಲ್ಲಿ ಸತತ ಮೂರು ಅವಧಿಯಿಂದ ಮುಖ್ಯಮಂತ್ರಿ ಆಗಿದ್ದಾರೆ.

1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ತುರ್ತು ಪರಿಸ್ಥಿತಿ ಬಳಿಕ 1977ರಲ್ಲಿ ನಡೆದ ಚುನಾವಣೆಯಲ್ಲಿ ಜ್ಯೋತಿ ಬಸು ನೇತೃತ್ವದ ಎಡರಂಗದ ಪಕ್ಷಗಳು ವಿಧಾನಸಭೆಯಲ್ಲಿ 243 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್‌ನಿಂದ ಅಧಿಕಾರ ಕಿತ್ತುಕೊಂಡವು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ಬೆಳೆದಿದ್ದೇ ವಿಸ್ಮಯ. 2011ರಲ್ಲಿ ರಾಜಕೀಯ ನೆಲೆ ಕಳೆದುಕೊಂಡ ಎಡರಂಗದ ನಾಯಕರು ಹಿಂಬಾಗಿಲಲ್ಲಿ ಬಲಪಂಥೀಯ ನಾಯಕರಿಗೆ ಪ್ರವೇಶ ನೀಡಿದ್ದು ಗುಟ್ಟೇನಲ್ಲ. ರಾಜಕೀಯದ ಉದ್ದಕ್ಕೂ ಮಮತಾ ಅವರನ್ನು ವಿರೋಧಿಸಿಕೊಂಡು ಬಂದಿದ್ದ ಕಾರ್ಯಕರ್ತರೂ ಬೇರೆ ದಾರಿ ಇಲ್ಲದೆ ಬಿಜೆಪಿಗೆ ವಲಸೆ ಹೋದರು. ಎಡರಂಗದ ‘ವೋಟ್ ಬ್ಯಾಂಕ್’ ನಿಷ್ಠೆ ಬದಲಿಸಿತು. ತನ್ನ ಅಧಿಕಾರ ಹೋದರೂ ಚಿಂತೆಯಿಲ್ಲ, ಮಮತಾ ಬ್ಯಾನರ್ಜಿ ಅಧಿಕಾರದಿಂದ ತೊಲಗಬೇಕೆಂಬ ಧೋರಣೆ ಎಡ ಪಕ್ಷಗಳದ್ದು. ಅದನ್ನು ಬಹಿರಂಗವಾಗಿ ಹೇಳಲಿಲ್ಲ. ಆದರೆ, ಎಡ ಪಕ್ಷಗಳ ಸೋಲಿನ ಲಾಭವನ್ನು ಕಾಂಗ್ರೆಸ್ ಪಡೆಯಲಿಲ್ಲ.

ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲು ಆ ಪಕ್ಷದ ನಾಯಕರು ಇಟ್ಟ ತಪ್ಪು ಹೆಜ್ಜೆಗಳೇ ಕಾರಣ. ದಿಲ್ಲಿಯ ವರಿಷ್ಠರಿಗೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂದುತಿಳಿಯುವುದಿಲ್ಲ. ಆಯಾ ರಾಜ್ಯಗಳ ಉಸ್ತುವಾರಿಗಳ ವರದಿಗಳನ್ನೇ ಅವಲಂಬಿಸುತ್ತಾರೆ. ಅವರು ಹೇಳಿದ್ದೇ ಅಂತಿಮ. ಹೀಗಾಗಿ, ಕಾಂಗ್ರೆಸ್ ಮುಗ್ಗರಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಆಗಿದ್ದೂ ಇದೇ.

ವಿರೋಧ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟ ಸ್ಥಾಪಿಸಿದ್ದರೂ ಪಶ್ಚಿಮ ಬಂಗಾಳದಲ್ಲಿ ಮಿತ್ರ ಪಕ್ಷಗಳು ಪರಸ್ಪರ ಎದುರಾಳಿಗಳಾಗಿವೆ.

ಈ ಪಕ್ಷಗಳ ನಡುವೆ ಒಪ್ಪಂದ ಏರ್ಪಡದಿರುವುದಕ್ಕೆ ಟಿಎಂಸಿ ನಾಯಕರು ಕಾಂಗ್ರೆಸ್ ನಾಯಕರ ಮೇಲೆ, ಕಾಂಗ್ರೆಸ್ ನಾಯಕರು ಟಿಎಂಸಿ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ. ಮಿತ್ರ ಪಕ್ಷಗಳ ನಡುವೆ ಸೀಟು ಹಂಚಿಕೆಯಾಗಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ನಡುವೆ ನೇರ ಹಣಾಹಣಿ ನಡೆದಿದ್ದರೆ ಲೋಕಸಭೆ ಚುನಾವಣೆ ರೋಚಕವಾಗಿರುತಿತ್ತು.

ಪಶ್ಚಿಮ ಬಂಗಾಳದಲ್ಲಿ ಇರುವುದು ಒಟ್ಟು 42 ಲೋಕಸಭೆ ಕ್ಷೇತ್ರಗಳು. ಎಲ್ಲ ಕ್ಷೇತ್ರಗಳಲ್ಲೂ ಟಿಎಂಸಿ ಕಣಕ್ಕಿಳಿದಿದೆ. ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಇದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಆನಂತರದ ಸ್ಥಾನದಲ್ಲಿವೆ. ತೀರ ಇತ್ತೀಚಿನವರೆಗೆ ಬಿಜೆಪಿ ಹಾಗೂ ಎಡ ಪಕ್ಷಗಳ ನಾಯಕರು ಪರಸ್ಪರ ಮೃದು ಧೋರಣೆ ತಳೆದಿದ್ದರು. ಈ ಸಲ ಕಟುವಾಗಿ ನಡೆದುಕೊಳ್ಳುತ್ತಿದ್ದಾರೆ. ಪರಸ್ಪರರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಬಂಗಾಳದಲ್ಲಿ ಇನ್ನೊಂದು ಬೆಳವಣಿಗೆ ಆಗಿದೆ. 2022ರ ಮುನ್ಸಿಪಾಲಿಟಿ ಹಾಗೂ 2023ರ ಪಂಚಾಯತ್ ಚುನಾವಣೆಯಲ್ಲಿ, ಕಳೆದುಕೊಂಡಿದ್ದ ಭಾಗಶಃ ಮತಗಳನ್ನು ಮರಳಿ ಪಡೆಯಲು ಎಡ ಪಕ್ಷಗಳು ಸಫಲವಾಗಿವೆ. ಈ ಚುನಾವಣೆಯಲ್ಲಿ ಇದು ಪುನರಾವರ್ತನೆಯಾದರೆ ಕೆಲವೆಡೆಯಾದರೂ ಕಾಂಗ್ರೆಸ್ ಎಡ ಪಕ್ಷಗಳಿಗೆ ಲಾಭವಾಗಬಹುದು. ಹಾಗಾದರೆ, ಟಿಎಂಸಿಗಿಂತ ಬಿಜೆಪಿ ಗೆಲುವಿನ ಓಟಕ್ಕೆ ಕಡಿವಾಣ ಬೀಳಬಹುದು.

ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದಲ್ಲಿ ಅಬ್ಬರವೇನೂ ಕಾಣುತ್ತಿಲ್ಲ.

ಬಿಜೆಪಿ, ಮಮತಾ ಬ್ಯಾನರ್ಜಿ ಸರಕಾರದ ಹಗರಣಗಳನ್ನೇ ಜನರ ಮುಂದೆ ಇಡುತ್ತಿದೆ. ಶಾಲಾ ಶಿಕ್ಷಕರ ನೇಮಕಾತಿ ಹಗರಣ, ಪಡಿತರ ಹಗರಣ ಸೇರಿದಂತೆ ಹಲವು ಹಗರಣಗಳನ್ನು ಪಟ್ಟಿ ಮಾಡುತ್ತಿದೆ. ಭ್ರಷ್ಟಾಚಾರ ಮುಚ್ಚಿಕೊಳ್ಳಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಟಿಎಂಸಿ ಕಾರ್ಯಕರ್ತರು ನಡೆಸಿದ ಹಲ್ಲೆಯನ್ನು ಬಿಜೆಪಿ ನಾಯಕರು ಪ್ರಸ್ತಾಪಿಸುತ್ತಿದ್ದಾರೆ. ಬಂಗಾಳದ ಅಭಿವೃದ್ಧಿಯನ್ನೇ ಮುಂದು ಮಾಡಿ ಎಲ್ಲ ಪಕ್ಷಗಳು ಪ್ರಚಾರ ಮಾಡುತ್ತಿವೆ.

ಅಲ್ಪಸಂಖ್ಯಾತರ ಮತಗಳು ಒಟ್ಟಾರೆಯಾಗಿ ಟಿಎಂಸಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಸಿಎಎ ಮತ್ತು ಎನ್‌ಅರ್‌ಸಿ ಬಗ್ಗೆ ಹೆಚ್ಚು ಪ್ರಸ್ತಾಪಿಸುತ್ತಿಲ್ಲ. ಹಾಗೆ ವೈಯಕ್ತಿಕ ಟೀಕೆಗಳಿಂದ ದೂರ ಉಳಿದಿದೆ.

ಟಿಎಂಸಿಯು ಶಿಕ್ಷಕರ ನೇಮಕಾತಿ ಹಗರಣವನ್ನೇ ಬಿಜೆಪಿ ವಿರುದ್ಧ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. 25 ಸಾವಿರಕ್ಕೂ ಅಧಿಕ ಶಿಕ್ಷಕರನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿ ಕಲ್ಲು ಹಾಕುತ್ತಿದೆ ಎಂದು ಆರೋಪಿಸುತ್ತಿದೆ. ಬಿಜೆಪಿ ನಡೆಯಿಂದಾಗಿ ಶಿಕ್ಷಕರು ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ ಎಂದು ಪ್ರಚಾರ ಮಾಡುತ್ತಿದೆ. ಕೇಂದ್ರ ಸರಕಾರ ಸಂವಿಧಾನಾತ್ಮಕ ಸಂಸ್ಥೆಗಳನ್ನು ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕಲು ದುರ್ಬಳಕೆ ಮಾಡುತ್ತಿದೆ ಎಂದು ದೂರುತ್ತಿದೆ. ಇದರ ಜತೆಗೆ, ಮಹಿಳೆಯರಿಗಾಗಿ ತಾನು ಆರಂಭಿಸಿದ ಯೋಜನೆಗಳನ್ನು ಮನವರಿಕೆ ಮಾಡಿಕೊಡುತ್ತಿದೆ.

ಪಶ್ಚಿಮ ಬಂಗಾಳದ ಚುನಾವಣೆ ಇತರ ಎಲ್ಲ ರಾಜ್ಯಗಳಿಗಿಂತಲೂ ರೋಚಕ ಆಗಿದೆ. ಯಾವುದೇ ಪಕ್ಷ ಹೆಚ್ಚು ಸ್ಥಾನ ಪಡೆದರೂ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹೊನಕೆರೆ ನಂಜುಂಡೇಗೌಡ

contributor

Similar News