ಪತಂಜಲಿ ಬಾಬಾ ಇನ್ನಾದರೂ ಬುದ್ಧಿ ಕಲಿಯುವರೇ?

ಈ ದೇಶದ ಕಾನೂನನ್ನು ಗೌರವಿಸಲು ಪತಂಜಲಿ ಬಾಬಾ ಇನ್ನಾದರೂ ಕಲಿಯುವರೇ? ಅಥವಾ ತಮ್ಮ ಹಳೇ ಚಾಳಿಯನ್ನೇ ಮುಂದುವರಿಸುವರೇ? ಎಂಬುದು ಮುಂದೆ ನೋಡಬೇಕಾದ ಪ್ರಶ್ನೆಗಳಾದರೂ ಇಂತಹ ಡೋಂಗಿ ಬಾಬಾರನ್ನು ಕುರುಡಾಗಿ ಆರಾಧಿಸುವ ದೇಶದ ಜನತೆ ಇನ್ನಾದರೂ ಈ ಪ್ರಕರಣದಿಂದ ಪಾಠ ಕಲಿಯುತ್ತಾರೆಯೇ?.

Update: 2024-04-28 05:38 GMT

ಜಾಹೀರಾತುಗಳು ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಮುದುಕರವರೆಗೂ ಜಾಹೀರಾತುಗಳು ಬಲು ಇಷ್ಟ. ಬಣ್ಣ ಬಣ್ಣದ ಮಾತುಗಳನ್ನು ಜಾಣತನದಲ್ಲಿ ಹೇಳುತ್ತಾ ಮರುಳು ಮಾಡುವ ಜಾಹೀರಾತುಗಳು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗಗಳು. ಜಾಹೀರಾತುಗಳು ನಮ್ಮನ್ನು ಟಿವಿ, ಮೊಬೈಲ್, ಸುದ್ದಿ ಪತ್ರಿಕೆ, ರೇಡಿಯೊ, ದಾರಿ ಬದಿಯ ಬ್ಯಾನರ್ ಗಳಿಂದ ಹಿಡಿದು, ತಿಂದು ಕೈ ಒರೆಸಿಕೊಳ್ಳುವ ಟಿಶ್ಯೂ ಪೇಪರ್‌ವರೆಗೂ ಆಕ್ರಮಿಸಿಕೊಂಡಿವೆ. ಜಾಹೀರಾತುಗಳ ಮೂಲ ಉದ್ದೇಶ ಉತ್ಪನ್ನಗಳ ಮಾರಾಟ. ಕಂಪೆನಿಗಳಿಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಇರಾದೆ.

ಬದಲಾದ ಜೀವನಶೈಲಿಯಿಂದ ಅಸಾಂಕ್ರಾಮಿಕ ರೋಗಗಳು ದಿನೇ ದಿನೇ ಹೆಚ್ಚುತ್ತಿವೆ. ಇವುಗಳ ನಿಯಂತ್ರಣ ಮಾತ್ರ ಸಾಧ್ಯ. ನಿರ್ಮೂಲನೆ ಅಸಾಧ್ಯ. ಈ ಕಾಯಿಲೆಗಳಿಂದ ಬಳಲುವವರು ನಿಯಮಿತವಾಗಿ ಔಷಧ ಸೇವಿಸಬೇಕು. ಜೀವನಶೈಲಿ ಬದಲಿಸಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಇವೆಲ್ಲವುಗಳನ್ನು ಮಾಡುವುದು, ಕಟ್ಟುನಿಟ್ಟಾಗಿ ಸಂಪಾದಿಸುವುದು ನಮ್ಮ ಜನರಿಗೆ ಬೇಕಿಲ್ಲ. ದೇಹದಂಡಿಸದ ಸರಳ ವಿಧಾನ ಹುಡುಕುವಾಗ ಅವರಿಗೆ ಆಕರ್ಷಕವಾಗಿ ಕಂಡಿದ್ದು ಪತಂಜಲಿಯ ಜಾಹೀರಾತು. ಆಧುನಿಕ ವೈದ್ಯವಿಜ್ಞಾನಿಗಳು, ಹಗಲಿರುಳು ನಿದ್ದೆಗೆಟ್ಟು ಸಾಕಷ್ಟು ಸಂಶೋಧನೆಯಲ್ಲಿ ತೊಡಗಿದ್ದರೂ, ಅಸಾಂಕ್ರಾಮಿಕ ರೋಗಗಳ ನಿರ್ಮೂಲನೆಗೆ ಸೂಕ್ತ ಚಿಕಿತ್ಸೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಪತಂಜಲಿ, ಜನರ ದೌರ್ಬಲ್ಯಗಳನ್ನೇ ಬಳಸಿಕೊಂಡು ಜಾಹೀರಾತು ನೀಡಿ, ಈ ರೋಗಗಳ ನಿರ್ಮೂಲನೆಗೆ ನಮ್ಮಲ್ಲಿ ಗ್ಯಾರಂಟಿ ಔಷಧವಿದೆಯೆಂದು ಜನರಿಗೆ ಮೋಡಿ ಮಾಡಿದ್ದು, ಮರುಳು ಮಾಡುತ್ತಿರುವುದು... ಹಗಲು ದರೋಡೆಗೆ ಹಿಡಿದ ಕನ್ನಡಿಯಾಗಿದೆ.

ದುಡ್ಡು ಕೊಟ್ಟು, ಕೆಲವರಿಂದ ತಮಗೆ ಅನುಕೂಲವಾಗುವಂತಹ ಹೇಳಿಕೆ ಪಡೆದು, ಪತ್ರಿಕೆಗಳಲ್ಲಿ ಪ್ರಕಟ. ಹೊಸ ಬೇಟೆಗೆ ಓಟ. ಈ ಕಳ್ಳಾಟ ಕಂಡ ಭಾರತೀಯ ವೈದ್ಯಕೀಯ ಸಂಘ ಆಯುರ್ವೇದ ಲಿಮಿಟೆಡ್ ಫರ್ಮಿನ ನಡೆಯನ್ನು ಕಂಡು ಕೆಂಡಾಮಂಡಲವಾಗಿತ್ತು. ಪತಂಜಲಿ ಸಮೂಹ ಜನಸಾಮಾನ್ಯರಿಗೆ ಸಂಜೀವಿನಿಯೆಂಬಂತೆ ಯೋಗ ಪಟು ರಾಮ್‌ದೇವ್ ಬಿಂಬಿಸುತ್ತಿದ್ದರು. ಕೆಲವೊಂದು ರೋಗಗಳಿಗೆ ಚಿಕಿತ್ಸೆಯೇ ಇಲ್ಲವೆಂಬ ಆಧುನಿಕ ವೈದ್ಯಶಾಸ್ತ್ರದ ಧೋರಣೆಯ ವಿರುದ್ಧ ಅಬ್ಬರದಿ ಗುಡುಗಿ, ಅದರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ‘ಸ್ಟುಪಿಡ್ ಸಾಯನ್ಸ್’ ಎಂದಿದ್ದರು. ಕೋವಿಡ್-19 ಲಸಿಕೆ ಬೋಗಸ್ ಎಂದೆಲ್ಲಾ ಬಾಯಿಗೆ ಬಂದಂತೆ ಹೇಳಿದಾಗಲೂ, ಕೇಂದ್ರ ಸರಕಾರ ಮತ್ತು ಎನ್‌ಎಮ್‌ಸಿ ಜಾಣ ಕಿವುಡುತನ ಪ್ರದರ್ಶಿಸಿದಾಗ, ಐಎಮ್‌ಎ ಅನಿವಾರ್ಯವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿತು.

ಪುರಾತನ ಕಾಲದ ವೈದ್ಯ ಪದ್ಧತಿ ಆಯುರ್ವೇದದ ಬಗ್ಗೆ ಎಲ್ಲ ಆಧುನಿಕ ವೈದ್ಯ ಪದ್ಧತಿಯ ವೈದ್ಯರಿಗೆ ಅಪಾರ ಗೌರವವಿದೆ. ಆಯುರ್ವೇದ ಮತ್ತು ಅಲೋಪಥಿ ವೈದ್ಯಪದ್ಧತಿಯ ಎರಡು ಕವಲುಗಳಾಗಿದ್ದು, ರೋಗಿಗಳಿಗೆ ಗುಣ ಪಡಿಸುವುದೇ ಅಂತಿಮ ಗುರಿಯಾಗಿರುತ್ತದೆ. ಆದರೆ, ಪತಂಜಲಿ ಪ್ರೊಡಕ್ಟ್‌ಗಳ ಪೈಪೋಟಿ ಮಾರಾಟದಲ್ಲಿ ವ್ಯಾಪಾರಿ ಬಾಬಾ ರಾಮದೇವ್ ಆಯುರ್ವೇದ ಪದ್ಧತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಯೋಗದಿಂದ ಎಲ್ಲ ಅಂಗಾಂಗಗಳಿಗೆ ತರಬೇತಿ ಕೊಡಲು ಸಾಧ್ಯ ಎನ್ನುವ ಬಾಬಾ, ತಮ್ಮ ನಾಲಿಗೆಯ ಮೇಲೆ ಹಿಡಿತ ಸಾಧಿಸಲು, ಅದಕ್ಕೆ ಯೋಗ ತರಬೇತಿ ಕೊಡಬೇಕಿತ್ತು. ಪರಿಣತಿ, ಪಾಂಡಿತ್ಯ ಇಲ್ಲದ ಕ್ಷೇತ್ರದಲ್ಲಿ ಮೂಗು ತೂರಿಸಬಾರದು. ಮಾತನಾಡಲೂ ಹೋಗಬಾರದು. ದೇಶದ ಸೂತ್ರಧಾರಿಗಳಿಗೆ ಆಶೀರ್ವಾದ ಮಾಡುವ ಪೋಸುಗಳ ಪೋಟೊಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ‘ತನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂದು ನಂಬಿದ್ದರು ರಾಮ್‌ದೇವ್.

ಜನರ ಸಂಕಷ್ಟ ಕಾಲದಲ್ಲಿ ಅವರ ಅಸಹಾಯಕತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಹಣ ಪೀಕುವ ದುಷ್ಟ ದುರುಳರಿಗಿಂತಲೂ ದುರಿತ ಕಾಲದಲ್ಲಿ ಜನರ ಜೀವಭಯದ ಹಾಗೂ ಮೌಢ್ಯದ ದೌರ್ಬಲ್ಯವನ್ನೇ ದಾಳವಾಗಿಸಿಕೊಂಡು ಅವರಲ್ಲಿ ಮತ್ತಷ್ಟು ದಿಗಿಲು ಹುಟ್ಟಿಸಿ, ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುವ, ಇಂತಹವರಿಂದ ಸಮಾಜ ಇನ್ನೂ ಪಾಠ ಕಲಿತಂತಿಲ್ಲ.

‘ಜಾತಸ್ಯ ಮರಣಂ ಧ್ರುವಂ’ ಎಂಬುದು ಅವರಿಗೆ ಗೊತ್ತಿಲ್ಲವೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬ ಸತ್ಯ ಸೂತ್ರದಲ್ಲಿ ಜಗತ್ತು ಬಾಳುತ್ತಿದೆ. ಇಲ್ಲದಿದ್ದರೆ ಭೂಮಿಯಲ್ಲಿ ಮನುಷ್ಯ ನಿಲ್ಲಲೂ ಜಾಗ ಸಿಗುತ್ತಿರಲಿಲ್ಲ.

ಕೊರೋನ ಸಂದರ್ಭದಲ್ಲಿ ರಾಮ್‌ದೇವ್ ವೈದ್ಯರ ಮೇಲಷ್ಟೇ ಅಲ್ಲ, ಟಾಸ್ಕ್‌ಫೋರ್ಸ್ ಮೇಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಹಾಮಂಡಳಿಯ ಮೇಲೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ಮೇಲೆ ಎಗ್ಗಿಲ್ಲದೇ ಎಗರಾಡುತ್ತಾರೆ. ದಿನಕ್ಕೊಂದು ಹೊಸ ನಾಟಕ ಆಡುತ್ತಲೇ ಇರುತ್ತಾರೆ. 5,000 ವರ್ಷಗಳ ಇತಿಹಾಸ ಹೊಂದಿದ ಭಾರತೀಯ ವೈದ್ಯ ಪದ್ಧತಿ ಆಯುರ್ವೇದದ ಮಾನ ಹರಾಜು ಹಾಕುವುದರೊಂದಿಗೆ, ಇಡೀ ಜಗತ್ತೇ ಒಪ್ಪಿಕೊಂಡ ಎವ್ಹಿಡೆನ್ಸ್ ಬೇಸ್ಡ್ ಮಾಡರ್ನ್ ಮೆಡಿಸಿನ್‌ಗೆ ಸವಾಲು ಹಾಕಿದ್ದಾರೆ.

ನಾನು ಅನುಸರಿಸುತ್ತಿರುವ ಪದ್ಧತಿಯೇ ಶ್ರೇಷ್ಠ ಅನ್ನುವುದು ಕೆಲವು ಸಲ ಸೀಮಿತ ಚೌಕಟ್ಟಿನೊಳಗಣ ತೀರ್ಮಾನ ಎನಿಸಿಬಿಡುತ್ತದೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ. ನಮ್ಮ ಮೂಗಿನ ನೇರಕ್ಕೆ ಯೋಚಿಸುವುದರಿಂದ ತೊಂದರೆಗೊಳಗಾಗುವುದು ರೋಗಿಯೇ ಹೊರತು ವೈದ್ಯನಲ್ಲ. ಸರಿಯಾಗಿ ಚಿಕಿತ್ಸೆ ಕೊಡದ ವೈದ್ಯರನ್ನು ಟೀಕಿಸಿದರೆ ತಪ್ಪಲ್ಲ. ಆದರೆ, ಒಂದು ಜನಪ್ರಿಯ ವೈದ್ಯ ಪದ್ಧತಿಯತ್ತ ಬೊಟ್ಟು ಮಾಡಿ ತೋರಿಸುವುದು ಸಮಂಜಸವಲ್ಲ.

ವಿಪರ್ಯಾಸವೆಂದರೆ, ಬಾಬಾ ರಾಮ್‌ದೇವ್, ಅವರ ಹಿಂಬಾಲಕರು ಅನಾರೋಗ್ಯದಿಂದ ಅಸ್ವಸ್ಥರಾದಾಗ ಏಮ್ಸ್ ನಂತಹ ಅಲೋಪತಿ ಆಸ್ಪತ್ರೆಗೆ ಸೇರಿಕೊಂಡು ಚಿಕಿತ್ಸೆ ಪಡೆಯುತ್ತಿರುವುದು ‘ಶಾಸ್ತ್ರ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಅನ್ನುವ ಗಾದೆಯ ಹಾಗಿದೆ. ಯೋಗವಿದ್ಯೆಯಿಂದ ಈತ ಅಂತರ್‌ರಾಷ್ಟ್ರೀಯ ಮಟ್ಟದ ಸೆಲೆಬ್ರೆಟಿ. ಸಾವಿರಾರು ಕೋಟಿ ರೂ. ವ್ಯವಹಾರದ ಪತಂಜಲಿ ಔಷಧ ಕಂಪೆನಿಯ ಧಣಿ. ಇವರನ್ನು ಕುರುಡಾಗಿ ಆರಾಧಿಸುವ ಭಕ್ತರ ದಂಡು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇನ್ನೂ ಇದೆ. ಪತಂಜಲಿ ಪ್ರೊಡಕ್ಟ್‌ಗಳನ್ನು ಪ್ರಮೋಟ್ ಮಾಡಲು, ಅಲೋಪಥಿಯನ್ನು ಡಿಗ್ರೇಡ್ ಮಾಡಿ ಮಾತನಾಡುವುದನ್ನು ಈ ದೇಶವನ್ನು ಆಳುವವರು ಕೇಳಿಯೂ ಕೇಳದಂತೆ ವರ್ತಿಸುತ್ತಿದ್ದಾರೆ.

ನಮ್ಮ ಸರಕಾರ ಒಂದೆಡೆ ನಕಲಿ ವೈದ್ಯರ ಹಾವಳಿ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಬಾಬಾ ರಾಮ್‌ದೇವ್‌ರಂತಹ ‘ಪ್ರತಿಭೆ’ಗೆ ನೀರು ಗೊಬ್ಬರ ಹಾಕಿ ಆರೈಕೆ ಮಾಡುತ್ತಿದೆ. ರಕ್ಷಣೆ ನೀಡುತ್ತಿದೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವ ಸರಕಾರ ಬಾಬಾರ ಮೇಲೆ ಕ್ರಮ ತೆಗೆದುಕೊಳ್ಳಲು ಮೀನಮೇಷ ಮಾಡುತ್ತಿರುವುದೇಕೆ? ಕ್ರಮ ತೆಗೆದುಕೊಳ್ಳಲು ಆಗ್ರಹಿಸುತ್ತಿರುವ ವೈದ್ಯರ ಕೂಗು ನಮ್ಮನ್ನಾಳುವ ಪ್ರಭುಗಳ ಕಿವಿಯ ತಮ್ಮಟೆಯನ್ನು ತಟ್ಟುತ್ತಿಲ್ಲವೇಕೆ? ಪ್ರಧಾನ ಮಂತ್ರಿಗಳು ‘ಕೊರೋನ ವಾರಿಯರ್ಸ್’ ಎಂದು ವೈದ್ಯರಿಗೆ ಹೇಳಿದ್ದರು. ಅವರ ಮೇಲೆ ಹೂ ಮಳೆ ಸುರಿಸಿದ್ದರು. ಆದರೆ ವೈದ್ಯ ವೃತ್ತಿಯ ಬಗ್ಗೆ, ವೈದ್ಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ವೈದ್ಯಕೀಯ ಗಂಧ, ಗಾಳಿ ಗೊತ್ತಿಲ್ಲದ ಬಾಬಾ ಹೇಳಿದಾಗ ಇವರಲ್ಲಿ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.

ಜೀವನಶೈಲಿ, ಆನುವಂಶಿಕ ಮತ್ತು ಗುಣಪಡಿಸಲಾಗದ ಕಾಯಿಲೆಗಳಿಗೆ ಅಲೋಪಥಿಯಲ್ಲಿ ಅಷ್ಟೇ ಅಲ್ಲ, ಯಾವುದೇ ವೈದ್ಯಪದ್ಧತಿಯಲ್ಲಿ ಔಷಧ ಇಲ್ಲ ಎಂಬ ಕಟು ಸತ್ಯದ ಅರಿವು ಪತಂಜಲಿ ಬಾಬಾಗೆ ಇನ್ನೂ ಬಂದಂತಿಲ್ಲ. ಅಲೋಪಥಿಯಲ್ಲಿ ಅವುಗಳ ನಿರ್ಮೂಲನೆಗೆ ಔಷಧಿಗಳಿಲ್ಲ. ನಿಜ. ಆದರೆ ನಿಯಂತ್ರಣಕ್ಕೆ ಸಾಕಷ್ಟು ಔಷಧಗಳಿವೆ. ಇದರಿಂದ ಮನುಷ್ಯರು ಉತ್ಪಾದಕ ಜೀವಿಗಳಾಗಿ ಸಹ್ಯ ಜೀವನ ಸಾಗಿಸಬಹುದಾಗಿದೆ. ಇದು ಪತಂಜಲಿ ಪ್ರೊಡಕ್ಟ್ ಗಳಿಂದ ಸಾಧ್ಯವೇ ?

ಪತಂಜಲಿ ಆಯುರ್ವೇದ ಪ್ರೊಡಕ್ಟ್‌ಗಳು ಎಲ್ಲ ರೋಗಗಳನ್ನು ಬೇರು ಸಹಿತ ನಿರ್ಮೂಲನೆ ಮಾಡುವುದು ಎಂಬ ಆಧಾರರಹಿತ, ಒರೆಗೆ ಹಚ್ಚಿ ಖಚಿತವಾಗಿರದ ಮಾಹಿತಿಗಳ ಹಸಿ ಸುಳ್ಳು ಹೇಳಿ ಹಾದಿ ತಪ್ಪಿಸುತ್ತಿರುವುದರ ಬಗ್ಗೆ ಐಎಮ್‌ಎ ದೂರು ದಾಖಲಿಸಿದ್ದನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯದ ವಿಭಾಗಿಯ ಪೀಠ ಇಂತಹ ಹಾದಿ ತಪ್ಪಿಸುವ, ಅಂಗೈಯಲ್ಲಿ ಅರಮನೆ ತೋರಿಸುವ, ಸುಳ್ಳು ಆಶ್ವಾಸನೆ ನೀಡುವ ಜಾಹೀರಾತುಗಳಿಗೆ ಸ್ಪಷ್ಟೀಕರಣ ನೀಡಲು ಹೇಳಿದ್ದಲ್ಲದೆ, ಇನ್ನು ಮುಂದೆ ಇಂಥ ಜಾಹೀರಾತುಗಳಿಗೆ ತಡೆ ಹಾಕಬೇಕು. ಇಲ್ಲದಿದ್ದಲ್ಲಿ ಜಾಹೀರಾತಿನಲ್ಲಿ ಪ್ರಚುರ ಪಡಿಸುವ ಪ್ರತಿಯೊಂದು ಉತ್ಪನ್ನಗಳ ಮೇಲೂ ಒಂದು ಕೋಟಿ ರೂ. ದಂಡ ವಿಧಿಸುವುದು ಅನಿವಾರ್ಯ ಎಂದು ಆದೇಶಿಸಿದರೂ ಕ್ಯಾರೇ ಎನ್ನದ ಪತಂಜಲಿ ತನ್ನ ಚಾಳಿಯನ್ನು ಮುಂದುವರಿಸಿದಾಗ ಸರ್ವೋಚ್ಚ ನ್ಯಾಯಾಲಯ ಗರಂ ಆಗಿ ನ್ಯಾಯಾಂಗ ನಿಂದನೆ ನೋಟಿಸು ಜಾರಿ ಮಾಡಿ ಖುದ್ದಾಗಿ ಹಾಜರಾಗಲು ತಿಳಿಸಿತ್ತು.

ಬಾಬಾ ರಾಮ್ ದೇವ್ ಮತ್ತು ಬಾಲಕೃಷ್ಣರು ಸಲ್ಲಿಸಿದ್ದ ಅಸಂಬದ್ಧ ಮತ್ತು ಅಸಮರ್ಪಕ ಅಫಿಡವಿಟ್‌ಗೆ ಸರ್ವೋಚ್ಚ ನ್ಯಾಯಾಲಯ ಕೆಂಡಮಂಡಲವಾಗಿದೆ. ‘‘ನಾವೇನೂ ಕುರುಡರಲ್ಲ, ದೇಶ ಸೇವೆಯ ನೆಪ ಕೊಡಬೇಡಿ .....ಈ ಪ್ರಕರಣದಲ್ಲಿ ಉದಾರಿಯಾಗಿರಲು ಬಯಸುವುದಿಲ್ಲ’’ ಎಂದು ಹೇಳಿ ಕ್ಷಮೆಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ದ್ವಿಸದಸ್ಯ ಪೀಠವು, ಈ ವಿಚಾರದಲ್ಲಿ ಕೇಂದ್ರ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿತು. ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಕಾಯ್ದೆ 1954ರ ಅಡಿಯಲ್ಲಿ ಪತಂಜಲಿ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲವಾದ ಉತ್ತರಾಖಂಡ ರಾಜ್ಯದ ಅಧಿಕಾರಿಗಳನ್ನು, ಸರಕಾರವನ್ನು ನ್ಯಾಯಾಲಯವು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದೆ. ತಪ್ಪು ದಾರಿಗೆಳೆಯುವ ಜಾಹೀರಾತಿಗಾಗಿ ರಾಮ್ ದೇವ್ ವಿರುದ್ಧ ಕೇರಳ ಔಷಧಿ ನಿಯಂತ್ರಣ ಮಂಡಳಿ ಕೇಸು ದಾಖಲಿಸಿದೆ.

ಸನ್ಯಾಸಿ ವೇಷದಲ್ಲಿದ್ದು ಅತ್ತ ಸನ್ಯಾಸಿಯೂ ಅಲ್ಲದ,ಇತ್ತ ವೈದ್ಯನೂ, ಉದ್ಯಮಿಯೂ ಅಲ್ಲದ ರಾಮ್‌ದೇವ್ ಮುಖವಾಡ ಕೊನೆಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಬಟಾ ಬಯಲಾಗಿದೆ. ಇಬ್ಬರೂ ಕೈ ಮುಗಿದು ಕ್ಷಮೆ ಯಾಚಿಸಿದ್ದಾರೆ. ‘‘ನಿಮ್ಮ ಕ್ಷಮೆ ಯಾಚನೆ ಬಗ್ಗೆ ಆಲೋಚಿಸುತ್ತೇವೆ. ನಿಮ್ಮನ್ನು ಕುಣಿಕೆಯಿಂದ ಬಿಡಿಸಲಾಗಿದೆ ಎಂದು ನಾವು ಹೇಳುತ್ತಿಲ್ಲ. ಬಹಿರಂಗವಾಗಿ ದೇಶದ ಕ್ಷಮೆ ಕೇಳಿ’’ ಎಂದು ಎಚ್ಚರಿಕೆ ಧಾಟಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಚಾಟಿ ಬೀಸಿದೆ.

ಈ ದೇಶದ ಕಾನೂನನ್ನು ಗೌರವಿಸಲು ಪತಂಜಲಿ ಬಾಬಾ ಇನ್ನಾದರೂ ಕಲಿಯುವರೇ? ಅಥವಾ ತಮ್ಮ ಹಳೇ ಚಾಳಿಯನ್ನೇ ಮುಂದುವರಿಸುವರೇ? ಎಂಬುದು ಮುಂದೆ ನೋಡಬೇಕಾದ ಪ್ರಶ್ನೆಗಳಾದರೂ ಇಂತಹ ಡೋಂಗಿ ಬಾಬಾರನ್ನು ಕುರುಡಾಗಿ ಆರಾಧಿಸುವ ದೇಶದ ಜನತೆ ಇನ್ನಾದರೂ ಈ ಪ್ರಕರಣದಿಂದ ಪಾಠ ಕಲಿಯುತ್ತಾರೆಯೇ?.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor

Similar News