ನಾಲ್ಕರ ಬಾಲೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ !

Update: 2018-10-28 05:05 GMT

ಭೋಪಾಲ್, ಅ. 28: ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿ ನಾಲೆಗೆ ಎಸೆದ ಅಮಾನವೀಯ ಘಟನೆ ಮಧ್ಯಪ್ರದೇಶದ ರಾಜಧಾನಿಯಲ್ಲಿ ನಡೆದಿದೆ.

ಬಾಲಕಿಯ ಶವ, ಭೋಪಾಲ್ ನಗರದಿಂದ ಎಂಟು ಕಿಲೋಮೀಟರ್ ದೂರದ ನಾಲೆಯಲ್ಲಿ ಪತ್ತೆಯಾಗಿದೆ. ಮೃತ ಬಾಲಕಿಯ ತಂದೆ ಗುತ್ತಿಗೆದಾರರಾಗಿದ್ದು, ಅವರ ಕೈಕೆಳಗೆ ಕೆಲಸ ಮಾಡುವ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಹನಿ ಅತ್ವಾಲ್ ಎಂಬಾತ ತಲೆಮರೆಸಿಕೊಂಡಿದ್ದು, ಈತನ ಮಾಹಿತಿ ನೀಡಿದಲ್ಲಿ 20 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ. ಮಂದಸಾರ್ ಜಿಲ್ಲೆಯ ಮಲ್ಹಾರ್‌ಗಢ ಎಂಬಲ್ಲಿ ಆರು ವರ್ಷದ ತನ್ನ ಸಹೋದರಿಯ ಪುತ್ರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ನೀರಿನ ಟ್ಯಾಂಕಿಯಲ್ಲಿ ಎಸೆದ ಅಪರಾಧ ಈತನ ಮೇಲಿದೆ.

ನಾಲ್ಕು ವರ್ಷದ ಬಾಲಕಿ ದ್ವಾರಕಾಪುರಿಯ ನಿವಾಸಿಯಾಗಿದ್ದು, ಪಕ್ಕದಲ್ಲಿ ಟ್ಯೂಷನ್‌ಗೆ ಹೋದ ಸಂದರ್ಭ ಗುರುವಾರದಿಂದ ನಾಪತ್ತೆಯಾಗಿದ್ದಳು. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ, ತನಿಖೆ ನಡೆಸಿದಾಗ, 22 ವರ್ಷದ ಹನಿ ಅತ್ವಾಲ್, ಬಾಲಕಿಯನ್ನು ಅಪಹರಿಸಿದ್ದು ತಿಳಿದುಬಂದಿತ್ತು. ಬಾಲಕಿಯ ತಂದೆಯ ಜತೆಗೇ ಅತ್ವಾಲ್ ಕೂಡಾ ಸ್ವೀಪರ್ ಕೆಲಸ ಮಾಡುತ್ತಿದ್ದ. ಶನಿವಾರ ಬಾಲಕಿಯ ಶವ ಕೃಷ್ಣಾಪುರ ಸೇತುವೆ ಬಳಿ ಪತ್ತೆಯಾಗಿದೆ.

ಬಾಲಕಿಯ ಶವದ ಪರೀಕ್ಷೆ ನಡೆಸಿದಾಗ, ಆಕೆಯ ಗುಪ್ತಾಂಗದಲ್ಲಿ ಗಾಯವಾಗಿರುವುದು ಕಂಡುಬಂದಿದೆ. ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸುವ ಮುನ್ನ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆದಿರುವುದನ್ನು ಅಟಾಪ್ಸಿ ನಡೆಸಿದ ವೈದ್ಯರು ದೃಢಪಡಿಸಿದ್ದಾರೆ.

ಐದು ವರ್ಷದ ಹಿಂದೆ ಈತ 17 ವರ್ಷದವನಿದ್ದಾಗ, ತನ್ನ ಆರು ವರ್ಷದ ಸಹೋದರಿಯ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿದ್ದ. ಬಳಿಕ ನೀರಿನ ಟ್ಯಾಂಕ್‌ಗೆ ಶವವನ್ನು ಎಸೆದು, ಟ್ಯಾಂಕ್ ಮೇಲೆ ಮಲಗಿ, ಯಾರಿಗೂ ಶವ ದೊರಕದಂತೆ ತಂತ್ರ ಹೂಡಿದ್ದ. ನಂತರ ಆತನನ್ನು ಬಂಧಿಸಲಾಗಿತ್ತು. ಆದರೆ ಬಾಲಾಪರಾಧಿ ಎಂಬ ಕಾರಣಕ್ಕೆ ಕಠಿಣ ಶಿಕ್ಷೆಯಿಂದ ಪಾರಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News