ಮಾಲ್ದೀವ್ಸ್‌ನಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಯಲ್ಲಿ ಭಾರತದ ಪಾತ್ರ ಮಹತ್ತರ : ಅಬ್ದುಲ್ ಗಯೂಮ್

Update: 2018-10-28 13:51 GMT

ಹೊಸದಿಲ್ಲಿ, ಅ.28: ಮಾಲ್ದೀವ್ಸ್‌ನಲ್ಲಿ ಅಧಿಕಾರದಲ್ಲಿದ್ದ ಆಡಳಿತದ ಮೇಲೆ ನಿರಂತರ ಒತ್ತಡ ಹೇರುವ ಮೂಲಕ ಪ್ರಜಾಪ್ರಭುತ್ವದ ಮರುಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಹೇಳಿದ್ದಾರೆ.

ಅಬ್ದುಲ್ಲಾ ಯಮೀನ್ ಸರಕಾರ ಮಾಲ್ದೀವ್ಸ್‌ಗೆ ಭಾರೀ ಹಾನಿ ಎಸಗಿದೆ. ಆದರೂ ಪ್ರಜಾಪ್ರಭುತ್ವ ಶಕ್ತಿಗಳು ಶತ್ರುಗಳ ವಿರುದ್ಧ ಮೇಲುಗೈ ಸಾಧಿಸಿವೆ ಎಂದು ಗಯೂಮ್ ಹೇಳಿದರು. ಭಾರತಕ್ಕೆ ಭೇಟಿ ನೀಡಿರುವ ಅವರು ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಮಾಲ್ದೀವ್ಸ್‌ನ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆ ಕುಸಿದಿದ್ದು ದೇಶದ ಜನರ ಆತ್ಮವಿಶ್ವಾಸವೂ ಕೆಳಮಟ್ಟಕ್ಕೆ ತಲುಪಿತ್ತು. ಆದರೆ ಜನತೆ ಸ್ವಯಂ ಪರಿಹಾರ ಮಾರ್ಗಗಳನ್ನು ಕಂಡುಕೊಂಡಿರುವುದು ಚುನಾವಣಾ ಫಲಿತಾಂಶದಿಂದ ವ್ಯಕ್ತವಾಗಿದೆ. ದೇಶಕ್ಕೆ ಭಾರೀ ಹಾನಿಯಾಗಿದ್ದರೂ ಸಂವಿಧಾನ, ಸಾಂವಿಧಾನಿಕ ಸಂಸ್ಥೆಗಳು ಹಾಗೂ ಸಂವಿಧಾನ ನೀಡಿರುವ ಪೌರರ ಹಕ್ಕುಗಳು ನೂತನ ಸಮ್ಮಿಶ್ರ ಸರಕಾರದಲ್ಲಿ ಸುಭದ್ರ ಮತ್ತು ಸಶಕ್ತವಾಗಿರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಸೆ.23ರಂದು ಅಧ್ಯಕ್ಷ ಹುದ್ದೆಗೆ ನಡೆದಿದ್ದ ಚುನಾವಣೆಯಲ್ಲಿ ಅಬ್ದುಲ್ಲಾ ಯಮೀನ್ ಆಘಾತಕಾರಿ ಸೋಲುಂಡಿದ್ದು ವಿಪಕ್ಷಗಳ ಸಂಯುಕ್ತ ಅಭ್ಯರ್ಥಿ ಇಬ್ರಾಹಿಂ ಮುಹಮ್ಮದ್ ಸಾಲಿಹ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಫಲಿತಾಂಶವನ್ನು ವಿರೋಧಿಸಿದ್ದ ಯಮೀನ್ ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ ಸುಪ್ರೀಂಕೋರ್ಟ್ ಚುನಾವಣಾ ಫಲಿತಾಂಶವನ್ನು ಎತ್ತಿಹಿಡಿದಿರುವ ಕಾರಣ ನವೆಂಬರ್ 17ರಂದು ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಬೇಕಿದೆ. ಮೂರು ದಶಕಗಳ ಕಾಲ ಮಾಲ್ದೀವ್ಸ್‌ನ ಅಧ್ಯಕ್ಷರಾಗಿದ್ದ ಗಯೂಮ್ 2008ರಲ್ಲಿ ನಡೆದಿದ್ದ ದೇಶದ ಪ್ರಪ್ರಥಮ ಬಹುಪಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಬಳಿಕ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಅಬ್ದುಲ್ಲಾ ಯಮೀನ್ ಕಳೆದ ಫೆಬ್ರವರಿಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರಲ್ಲದೆ ತಮ್ಮ ರಾಜಕೀಯ ವಿರೋಧಿಗಳನ್ನು ಜೈಲಿಗಟ್ಟಿದ್ದರು. ಜೈಲು ಸೇರಿದ್ದ ಗಯೂಮ್ ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದಾರೆ. ಯಮೀನ್ ಚೀನಾದ ಪರ ಒಲವು ಹೊಂದಿದ್ದರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಯೂಮ್, ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಚೀನಾ ನೀಡಿದ ಸಹಕಾರವನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಚೀನಾವು ಮಾಲ್ದೀವ್ಸ್‌ನ ಜನತೆಯ ಆಶಯಗಳನ್ನು ಗೌರವಿಸುತ್ತದೆ ಎಂಬ ವಿಶ್ವಾಸವಿದೆ ಎಂದರು. ಮಾಲ್ದೀವ್ಸ್‌ನಲ್ಲಿ ತುರ್ತುಪರಿಸ್ಥಿತಿ ವಿಧಿಸಿದ ಬಳಿಕ ಭಾರತ ಅಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆನ ನಿಟ್ಟಿನಲ್ಲಿ ಧನಾತ್ಮಕ ಪಾತ್ರ ವಹಿಸಿದೆ. ಇತರ ಮಿತ್ರ ರಾಷ್ಟ್ರಗಳ ಜೊತೆಗೂಡಿ ಮಾಲ್ದೀವ್ಸ್‌ನ ಆಡಳಿತದ ಮೇಲೆ ನಿರಂತರ ಒತ್ತಡ ಹೇರಿದೆ. ಮಾಲ್ದೀವ್ಸ್‌ನ ಪ್ರಕರಣವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಜೀವಂತವಾಗಿರಿಸುವ ಮೂಲಕ ಯಮೀನ್ ಆಡಳಿತದ ಮೇಲೆ ಒತ್ತಡ ಹಾಕುವಲ್ಲಿ ಭಾರತ ಸಫಲವಾಗಿದೆ ಎಂದು ಗಯೂಮ್ ತಿಳಿಸಿದರು. ಭಾರತವು ಮಾಲ್ದೀವ್ಸ್‌ನ ಅತ್ಯಂತ ಪರಮಾಪ್ತ ಹಾಗೂ ನಂಬಿಗಸ್ತ ಮಿತ್ರರಾಷ್ಟ್ರ ಎಂದು ಬಣ್ಣಿಸಿದ ಅವರು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸ್ಥಿರತೆ ನೆಲೆಸುವುದು ಮಾಲ್ದೀವ್ಸ್‌ನ ನೆರೆರಾಷ್ಟ್ರಗಳ ಹಿತಾಸಕ್ತಿಗೆ ಪೂರಕವಾಗಿದೆ. ಮಾಲ್ದೀವ್ಸ್‌ನ ನೂತನ ಸಮ್ಮಿಶ್ರ ಸರಕಾರ ಈ ನಿಟ್ಟಿನಲ್ಲಿ ಪೂರಕ ಉಪಕ್ರಮಗಳನ್ನು ಆರಂಭಿಸುವ ವಿಶ್ವಾಸವಿದೆ. ದೇಶದಲ್ಲಿ ಶಾಂತಿ, ಸ್ಥಿರತೆ, ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ನೆಲೆಸುವುದು ಸರಕಾರದ ಬದ್ಧತೆಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News