ಮುಸ್ಲಿಮರ ವಿಶ್ವಾಸ ಗಳಿಸಲು ಎನ್‌ಡಿಎ ಯಿಂದ ಹೆಚ್ಚಿನ ಪ್ರಯತ್ನ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ಅಧ್ಯಕ್ಷ

Update: 2018-10-28 16:11 GMT

ಹೊಸದಿಲ್ಲಿ,ಅ.28: ಕೇಂದ್ರದಲ್ಲಿಯ ಬಿಜೆಪಿ ನೇತೃತ್ವದ ಸರಕಾರವು ಅಲ್ಪಸಂಖ್ಯಾತರ ವಿಶ್ವಾಸವನ್ನು ಗಳಿಸಲು ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ ಮತ್ತು ಪಕ್ಷವು ಮುಸ್ಲಿಂ ವಿರೋಧಿ ಎಂಬ ಭಾವನೆಯನ್ನು ಬದಲಿಸುವಲ್ಲಿ ಗಣನೀಯ ಯಶಸ್ಸನ್ನು ಕಂಡಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಅನ್ಸಾರಿ ಅವರು ಹೇಳಿದ್ದಾರೆ.

ಪ್ರತಿಪಕ್ಷವು ಅಲ್ಪಸಂಖ್ಯಾತರಲ್ಲಿ ಬಿಜೆಪಿಯ ಬಗ್ಗೆ ಭೀತಿಯನ್ನು ಹರಡುವ ಅಪಪ್ರಚಾರದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಯಾವುದೇ ಭೇದವಿಲ್ಲದೆ ಅಭಿವೃದ್ಧಿಯನ್ನುಂಟು ಮಾಡಿದೆ,ಆದರೆ ಪ್ರತಿಪಕ್ಷವು ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಪಕ್ಷಕ್ಕೆ ಪ್ರತ್ಯೇಕ ಮಾನದಂಡವನ್ನು ನಿಗದಿಗೊಳಿಸಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅನ್ಸಾರಿ ಹೇಳಿದರು.

ಬಿಜೆಪಿಯ ವಿರುದ್ಧ ಅಪಪ್ರಚಾರ ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬದಲಾವಣೆಗಳಾಗಿವೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ಪಕ್ಷವು ಅಲ್ಪಸಂಖ್ಯಾತರಲ್ಲಿ ತನ್ನ ಬುನಾದಿಯನ್ನು ವಿಸ್ತರಿಸಿಕೊಳ್ಳುತ್ತಿದೆ ಎಂದ ಅವರು, ಬಿಜೆಪಿ ಇತರ ಪಕ್ಷಗಳಂತಲ್ಲ ಎನ್ನುವುದನ್ನು ಅಲ್ಪಸಂಖ್ಯಾತ ಸಮುದಾಯ ಮತ್ತು ಹಿಂದುಳಿದ ವರ್ಗಗಳು ಮೊದಲ ಬಾರಿಗೆ ಅರ್ಥ ಮಾಡಿಕೊಂಡಿವೆ. ಅದು ಪೊಳ್ಳು ಭರವಸೆಗಳ ಬದಲು ಕಾರ್ಯತಃ ಸಾಧನೆಯನ್ನು ಮಾಡುತ್ತಿದೆ ಎನ್ನುವುದು ಅವರಿಗೆ ಗೊತ್ತಾಗಿದೆ ಎಂದರು.

 ದೇಶದಲ್ಲಿ ಇತ್ತೀಚಿನ ಗುಂಪಿನಿಂದ ಥಳಿಸಿ ಹತ್ಯೆ ಘಟನೆಗಳ ಕುರಿತಂತೆ ಅವರು,ಇಂತಹ ಘಟನೆಗಳನ್ನು ಪಕ್ಷದ ನಾಯಕತ್ವವು ಖಂಡಿಸಿದೆ ಮತ್ತು ದುಷ್ಕರ್ಮಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಜಾರ್ಖಂಡ್‌ನಲ್ಲಿ ಮಾಂಸದ ವ್ಯಾಪಾರಿ ಅಲಿಮುದ್ದೀನ್ ಅನ್ಸಾರಿಯವರನ್ನು ಥಳಿಸಿ ಹತ್ಯೆಗೈದಿದ್ದ ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರಬಂದ ಸಂದರ್ಭದಲ್ಲಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರನ್ನು ಸನ್ಮಾನಿಸಿದ್ದ ಘಟನೆಯ ಕುರಿತಂತೆ ಅವರು,ಸಿನ್ಹಾ ಅವರ ನಡೆಯನ್ನು ಪಕ್ಷದಲ್ಲಿ ಯಾರೂ ಒಪ್ಪಿಕೊಂಡಿರಲಿಲ್ಲ ಎಂದು ತಿಳಿಸಿದರು.

ಬಿಜೆಪಿಯಿಂದ ಟಿಕೆಟ್ ಹಂಚಿಕೆಯಲ್ಲಿ ಮುಸ್ಲಿಮರಿಗೆ ಅಲ್ಪ ಪ್ರಾತಿನಿಧ್ಯದ ಕುರಿತು ಪ್ರಶ್ನೆಗೆ ಅನ್ಸಾರಿ,ಈ ವಿಷಯವನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಬಾರದು. ಪಕ್ಷವು ಧರ್ಮದ ಆಧಾರದಲ್ಲಿ ಟಿಕೆಟ್‌ಗಳನ್ನು ನೀಡುವುದಿಲ್ಲ,ವ್ಯಕ್ತಿಯ ಅರ್ಹತೆ ಮತ್ತು ಸಾಮರ್ಥ್ಯ ಆಧರಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News