ಬಳಸಿ ಎಸೆಯಲ್ಪಡುವ ವಲಸೆ ಕಾರ್ಮಿಕರು

Update: 2018-10-28 18:50 GMT

ಆಸ್ಟ್ರೇಲಿಯ, ಅಮೆರಿಕಗಳಲ್ಲಿ ಅಮಾಯಕ ಭಾರತೀಯರ ಮೇಲೆ ಹಲ್ಲೆ ನಡೆದಾಗ ಅದನ್ನು ಜನಾಂಗೀಯ ದೌರ್ಜನ್ಯ ಎಂದು ಕರೆದು, ಭಾರತ ತೀವ್ರ ಭಾಷೆಯಲ್ಲಿ ಖಂಡಿಸುತ್ತದೆ ಮತ್ತು ಆ ಕುರಿತು ಆ ದೇಶಗಳಿಗೆ ತನ್ನ ಕಳವಳವನ್ನು ಅರುಹುತ್ತದೆ. ಒಂದು ಸಮುದಾಯ ವನ್ನು ಪ್ರತಿನಿಧಿಸಿದ ಕಾರಣಕ್ಕಾಗಿ ಒಬ್ಬನ ಮೇಲೆ ಹಲ್ಲೆ ನಡೆದಿರುವುದನ್ನು ಜನಾಂಗೀಯ ದೌರ್ಜನ್ಯ ಎಂದು ಪರಿಗಣಿಸಬೇಕಾದರೆ ಆ ಘಟನೆ ವಿದೇಶದಲ್ಲಿ ಸಂಭವಿಸಬೇಕು ಎಂದು ನಮ್ಮ ಸರಕಾರ ನಂಬಿದಂತಿದೆ. ಆದರೆ ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದಿಂದ ಬಂದ ಕೂಲಿ ಕಾರ್ಮಿಕರ ವಿರುದ್ಧ ದಕ್ಷಿಣ ಕರ್ನಾಟಕದ ನಾಗರಿಕರು ಎಸಗುವ ದೌರ್ಜನ್ಯಗಳು, ನಿಂದನೆಗಳು ಈ ವ್ಯಾಪ್ತಿಗೆ ಒಳಪಡುವುದಿಲ್ಲ. ವಿಜಯಪುರದಂತಹ ಜಿಲ್ಲೆಗಳಿಂದ ಬೆಂಗಳೂರು, ಮಂಗಳೂರಿನಂತಹ ನಗರಗಳಿಗೆ ಕೂಲಿಗಾಗಿ ವಲಸೆ ಬಂದ ಜನರ ಜೊತೆಗೆ ಅಲ್ಲಿನ ಜನರು ವರ್ತಿಸುವ ರೀತಿ ಯಾಕೆ ಜನಾಂಗೀಯ ದೌರ್ಜನ್ಯವಾಗಿ ಪರಿಗಣನೆಗೆ ಒಳಗಾಗುತ್ತಿಲ್ಲ? ಈ ಬಗ್ಗೆ ರಾಜ್ಯ ಸರಕಾರವಾದರೂ ಯಾಕೆ ಕಳವಳ ವ್ಯಕ್ತಪಡಿಸುವುದಿಲ್ಲ. ಅವರ ಬದುಕುವ ಹಕ್ಕಿಗಾಗಿ ಯಾಕೆ ಒಂದು ಕಾನೂನನ್ನು ಈವರೆಗೆ ರೂಪಿಸಿಲ್ಲ? ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ, ಬಿಹಾರದಿಂದ ಮುಂಬೈಗೆ, ಹಾಗೆಯೇ ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರದಿಂದ ಗುಜರಾತ್‌ಗೆ ವಲಸೆ ಹೋಗುವ ಕೂಲಿಕಾರ್ಮಿಕರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಾಗೆ ನೋಡಿದರೆ, ಅನಿವಾಸಿ ಭಾರತೀಯರಿಗಿಂತ, ತಮ್ಮದೇ ದೇಶದೊಳಗಿರುವ ಈ ವಲಸೆ ಕೂಲಿಕಾರ್ಮಿಕರ ಸ್ಥಿತಿಯೇ ಭಯಾನಕವಾಗಿದೆ.

ಇತ್ತೀಚೆಗೆ ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ಮಕ್ಕಳ ಕಳ್ಳರು ಎಂದು ಆರೋಪಿಸಿ ಥಳಿತಕ್ಕೊಳಗಾದವರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರಾಗಿದ್ದಾರೆ. ಅವರ ವೇಷ ಭೂಷಣ, ಬಡತನ ಮತ್ತು ಅನ್ಯ ಭಾಷೆಯೇ ಅವರನ್ನು ಕಳ್ಳರಾಗಿ ಬಿಂಬಿಸುತ್ತದೆ. ಇಲ್ಲಿ ಜಾತಿ, ಧರ್ಮ, ವರ್ಗ, ಭಾಷೆ ಎಲ್ಲವೂ ಪೂರಕವಾಗಿ ಕೆಲಸ ಮಾಡುತ್ತದೆ. ಕರ್ನಾಟಕದಿಂದ ಲಕ್ಷಾಂತರ ಜನರು ಇತರ ರಾಜ್ಯಗಳಲ್ಲಿ ಬದುಕು ಅರಸಿ ಹೋಗಿದ್ದಾರೆ ಎನ್ನುವುದನ್ನು ನಾವು ಕೆಲವೊಮ್ಮೆ ಮರೆತು, ತಮಿಳರು, ತೆಲುಗರು, ಮಲಯಾಳಿಗಳ ಕುರಿತಂತೆ ಅಸಹನೆಯನ್ನು ಮೆರೆಯುತ್ತೇವೆ. ಹಾಗೆಂದು ಈ ಅಸಹನೆ ಶ್ರೀಮಂತ ವಲಯದ ಮೇಲೆ ವ್ಯಕ್ತವಾಗುವುದಿಲ್ಲ. ಬೀದಿಯಲ್ಲಿ ಹಣ್ಣು ಹಂಪಲು ಮಾರುವವರು, ಟೀ ಅಂಗಡಿ ಇಟ್ಟವರು, ಕಾರು ಚಾಲಕರು, ಬೀದಿ ಕಾರ್ಮಿಕರ ಮೇಲೆ ಹಲ್ಲೆ ನಡೆಸುವ ಮೂಲಕ ನಾವು ನಮ್ಮ ಅಸ್ಮಿತೆಯನ್ನು ಸಾಬೀತು ಮಾಡಲು ಯತ್ನಿಸುತ್ತೇವೆ. ಇದೇ ಸಂದರ್ಭದಲ್ಲಿ ಆ ಕಾರ್ಯವನ್ನು ಮರಾಠಿಗರು ಕನ್ನಡಿಗರ ಮೇಲೆ ಎಸಗಿದಾಗ ಮಾತ್ರ ಅವರನ್ನು ಖಳನಾಯಕರೆಂಬಂತೆ ನೋಡುತ್ತೇವೆ. ಇಂದು ನಮಗೆ ಈ ವಲಸೆ ಕಾರ್ಮಿಕರ ಬೆವರು, ಶ್ರಮ ಬೇಕು. ನಮ್ಮ ನಾಡಿನಲ್ಲಿ ನಿಂತಿರುವ ನೂರಾರು ಕಟ್ಟಡಗಳ ತಳಹದಿಯಲ್ಲಿ ಇವರ ನೋವು ದುಮ್ಮಾನಗಳಿವೆ. ಆದರೆ ನಮ್ಮವರಾಗಿ ಸ್ವೀಕರಿಸುವ ಸಂದರ್ಭದಲ್ಲಿ ಮಾತ್ರ, ಇವರನ್ನು ಕಳ್ಳರಂತೆ, ಅತ್ಯಾಚಾರಿಗಳಂತೆ ನೋಡುತ್ತೇವೆ.

ಗುಜರಾತ್‌ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಬಿಹಾರ ಮೂಲದ ವಲಸೆ ಕಾರ್ಮಿಕನೊಬ್ಬ 2018ರ ಸೆಪ್ಟಂಬರ್ 28ರಂದು ಒಂದು ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂಬ ಆರೋಪವನ್ನು ಸ್ಥಳೀಯರು ಮಾಡಿದರು. ಆ ನಂತರದಲ್ಲೇ ಗುಜರಾತಿನಲ್ಲಿ ಉತ್ತರ ಭಾರತದಿಂದ ಬಂದ ವಲಸೆ ಕಾರ್ಮಿಕರ ಮೇಲೆ ಸರಣಿ ದಾಳಿಗಳು ಪ್ರಾರಂಭವಾದವು. ಇದಕ್ಕೆ ಕಾಂಗ್ರೆಸ್ ಮತ್ತು ಕ್ಷತ್ರಿಯ ಠಾಕೂರ್ ಸೇನಾದ ಅಲ್ಪೇಶ್ ಠಾಕೂರ್ ಅವರೇ ಕಾರಣರೆಂದು ಆಡಳಿತಾರೂಢ ಬಿಜೆಪಿ ಸರಕಾರ ಕೂಡಲೇ ಆರೋಪಿಸಿತು. ದೌರ್ಜನ್ಯಕ್ಕೆ ಬಲಿಯಾದ ಮಗು ಠಾಕೂರ್ ಕುಟುಂಬದ್ದಾಗಿತ್ತು. ಸರಿ, ಅಲ್ಲಿಂದ ಅದು ರಾಜಕೀಯ, ಸಾಮಾಜಿಕ ಹೋರಾಟದ ರೂಪ ಪಡೆಯಿತು. ತಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುವ, ತಮ್ಮ ನೆಲವನ್ನು ದೋಚಲು ಬಂದಿರುವ ಉತ್ತರ ಪ್ರದೇಶದ ಭಯ್ಯೋಗಳ ಮೇಲೆ ಪ್ರತೀಕಾರವನ್ನು ತೀರಿಸಿಕೊಳ್ಳುವುದಕ್ಕೆ ಅದು ಬಳಸಲ್ಪಟ್ಟಿತು. ಸಾಲುಸಾಲಾಗಿ ಉತ್ತರ ಪ್ರದೇಶವೂ ಸೇರಿದಂತೆ ವಿವಿಧ ರಾಜ್ಯಗಳ ಕೂಲಿಕಾರ್ಮಿಕರ ಮೇಲೆ ಹಲ್ಲೆಗಳು ನಡೆದವು. ಈ ಹಲ್ಲೆಗಳಿಗೆ ಹೆದರಿ ಅವರು ಗುಜರಾತನ್ನು ಬಿಟ್ಟುಹೋಗಬೇಕಾದಂತಹ ಸ್ಥಿತಿ ನಿರ್ಮಾಣವಾಯಿತು. ಸಾಲು ಸಾಲಾಗಿ ಕಾರ್ಮಿಕರು ತಮ್ಮ ತವರಿಗೆ ಮರಳಲಾರಂಭಿಸಿದರು. ಇದರ ಬಿಸಿ ನಿಧಾನಕ್ಕೆ ಉದ್ಯಮಿಗಳನ್ನು ತಟ್ಟಿತು. ಕಟ್ಟಡ ಕೆಲಸವೂ ಸೇರಿದಂತೆ ಕೂಲಿ ಕೆಲಸಗಳಿಗೆ ಕಾರ್ಮಿಕರೇ ಸಿಗದಂತಹ ಸನ್ನಿವೇಶ ನಿರ್ಮಾ ಣವಾಯಿತು.

ಗುಜರಾತಿನಲ್ಲಿ ಉತ್ತರ ಭಾರತದ ಕಾರ್ಮಿಕರು ರಾಜ್ಯವನ್ನು ತೊರೆದುಹೋಗುವ ಪ್ರಕ್ರಿಯೆ ನಿಲ್ಲದೆ ಮುಂದುವರಿಯುತ್ತಿದ್ದುದನ್ನು ಕಂಡು ಕಂಗೆಟ್ಟ ಅಲ್ಲಿನ ಉದ್ಯಮಗಳ ಗಣ್ಯರು ಕಾರ್ಮಿಕರು ಗುಜರಾತನ್ನು ಬಿಟ್ಟು ಹೋಗಬಾರದೆಂದು ಮನವಿ ಮಾಡಲಾರಂಭಿಸಿದರು. ಸತತ ಮೂರುದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದ ಅಥವಾ ಒಂದಲ್ಲ ಒಂದು ಅಡಚಣೆ ಅನುಭವಿಸಿದ್ದ ಎಲ್ಲಾ ಕೈಗಾರಿಕಾ ವಸಾಹತುಗಳಿಗೆ ಮತ್ತು ಕಾರ್ಖಾನೆಗಳಿಗೆ ಪೊಲೀಸರನ್ನೂ ಒಳಗೊಂಡಂತೆ ಹಲವು ಬಗೆಯ ಭದ್ರತೆಗಳನ್ನು ನೀಡಲಾಯಿತು. ಗುಜರಾತಿನ ವಾಣಿಜ್ಯ ಮತ್ತು ಉದ್ದಿಮೆಗಳ ಸಂಘವು ಕೂಡಲೇ ಗುಜರಾತಿನ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿತು. ಇದಕ್ಕೆ ಗುಜರಾತಿನ ವ್ಯವಹಾರೋದ್ಯಮಗಳು ವಲಸಿಗರ ಶ್ರಮವನ್ನು ಅವಲಂಬಿಸಿರುವ ಅನಿವಾರ್ಯತೆಯ ಜೊತೆಜೊತೆಗೆ ಸದ್ಯದಲ್ಲೇ ಅಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನವು ಈ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸಬೇಕಾದ ಅಗತ್ಯವನ್ನು ನಿರ್ಮಿಸಿದೆ. 2019ರ ಜನವರಿಯಲ್ಲಿ ನಡೆಯಲಿರುವ ಈ ಸಮ್ಮೇಳನ ಮತ್ತು ಸಾಲು ಹಬ್ಬಗಳ ಈ ಋತುವಿನಲ್ಲಿ ರಾಜ್ಯದ ಜವಳಿ, ವಜ್ರ, ಔಷಧಿ ಮತ್ತು ಪ್ಯಾಕೇಜಿಂಗ್ ಹಾಗೂ ಇನ್ನಿತರ ಉದ್ದಿಮೆಗಳಿಗೆ ಯಾವುದೇ ಅಡ್ಡಿ-ಅಡಚಣೆಯುಂಟಾಗುವುದು ಗುಜರಾತ್ ಸರಕಾರಕ್ಕೆ ಬೇಕಿಲ್ಲ

ಗುಜರಾತಿನಲ್ಲಿ ನಿಧಾನವಾಗಿ ಬಿಕ್ಕಟ್ಟು ಶಮನವಾಗಬಹುದು. ಆದರೆ ಅದು ವಲಸೆ ಕಾರ್ಮಿಕರ ಜೀವನದ ಮತ್ತು ಕೆಲಸದ ಸ್ಥಿತಿಗತಿಗಳನ್ನೇನೂ ಉತ್ತಮಪಡಿಸುವುದಿಲ್ಲ. ಸ್ಥಳೀಯ ಕಾರ್ಮಿಕರ ಸ್ಥಿತಿಗತಿಗಳಿಗಿಂತ ವಲಸೆ ಕಾರ್ಮಿಕರ ಪರಿಸ್ಥಿತಿಗಳು ಅತ್ಯಂತ ಶೋಚನೀಯವಾಗಿರುತ್ತವೆ. ಅತಂತ್ರವಾಗಿರುತ್ತವೆ. ಸಾರ್ವಜನಿಕ ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವುದರಲ್ಲಾಗಲೀ, ತಮ್ಮ ಕೂಲಿ ಮತ್ತು ಕೆಲಸದ ಸ್ಥಿತಿಗತಿಗಳ ಬಗ್ಗೆ ಮಾಲಕರ ಜೊತೆ ಚೌಕಾಶಿ ಮಾಡುವ ಸಾಮರ್ಥ್ಯದಲ್ಲಾಗಲೀ ವಲಸೆ ಕಾರ್ಮಿಕರ ಪರಿಸ್ಥಿತಿ ಸ್ಥಳೀಯರ ಪರಿಸ್ಥಿತಿಗಳಿಗಿಂತ ಅತಂತ್ರವಾಗಿರುತ್ತದೆ. ಸ್ಥಳೀಯರು ಅವರನ್ನು ಹೊರಗಿನವರೆಂದು ನೋಡುತ್ತಾರೆ. ಹಲವಾರು ಕಾರಣಗಳಿಂದಾಗಿ ಸ್ಥಾಪಿತ ಕಾರ್ಮಿಕ ಸಂಘಟನೆಗಳಿಂದಲೂ ಅವರಿಗೆ ಹೆಚ್ಚಿನ ಅನುಕೂಲತೆಗಳು ದಕ್ಕುವುದಿಲ್ಲ. ಕಾರ್ಮಿಕ ಕಾರ್ಯಕರ್ತರು ತೋರಿಸಿಕೊಟ್ಟಿರುವಂತೆ ಅವರಿಗೆ ಸ್ಥಳೀಯ ಸಂಸ್ಥೆಗಳಲ್ಲಾಗಲೀ ಅಥವಾ ಸೇವೆಗಳಲ್ಲಿ ಅಸ್ತಿತ್ವವಾಗಲೀ ಪ್ರಾತಿನಿಧ್ಯವಾಗಲೀ ಇರುವುದಿಲ್ಲ.

ವಲಸೆ ಕಾರ್ಮಿಕರೂ ತಮ್ಮ ರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಪ್ರಾದೇಶಿಕ ಗುರುತುಳ್ಳ ಸಂಘಸಂಸ್ಥೆಗಳಲ್ಲಿ ಸೇರಬಯಸುತ್ತಾರೆ. ದೇಶದ ರಾಜಕೀಯ ವರ್ಗ ಮತ್ತು ನಾಗರಿಕ ಸಮಾಜವು ವಲಸೆ ಕಾರ್ಮಿಕರ ಬಗ್ಗೆ ತನ್ನ ಸಿನಿಕ ಮತ್ತು ಬಳಸಿಬಿಸಾಡುವ ದೃಷ್ಟಿಕೋನವನ್ನು ಬಿಡಬೇಕು. ಕೈಗಾರಿಕೆಗಳು ಮತ್ತು ಸೇವಾ ವಲಯಗಳು ಈ ವಲಸೆ ಕಾರ್ಮಿಕರ ಶ್ರಮದ ಮೇಲೆಯೇ ನಡೆಯುತ್ತಿದ್ದರೂ, ದೊಂಬಿ ಮತ್ತು ಗಲಭೆಗಳು ನಡೆಯುವ ಸಂದರ್ಭದಲ್ಲಿ, ಅವು ಬಲಾಢ್ಯರ ಹಿತಾಸಕ್ತಿಗಳಿಗೆ ಪೂರಕವಾಗಿದ್ದಲ್ಲಿ, ವಲಸೆ ಕಾರ್ಮಿಕರನ್ನು ರಕ್ಷಿಸಲು ಯಾರೂ ಮುಂದಾಗುವುದಿಲ್ಲ.

ನಾಗರಿಕರಿಗೆ ದೇಶದ ಯಾವುದೇ ಭಾಗಗಳಿಗೆ ವಲಸೆ ಹೋಗುವ ಮೂಲಭೂತ ಹಕ್ಕುಗಳಿದ್ದು ಅವರ ಸಾಂವಿಧಾನಿಕ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಸಮಾನವಾಗಿ ರಕ್ಷಿಸಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಲಸೆ ಕಾರ್ಮಿಕರನ್ನು ತಮಗೆ ಅಗತ್ಯವಿರುವ ಶ್ರಮ ಮತ್ತು ಸೇವೆಯನ್ನು ಕೊಡುವವರನ್ನಾಗಿ ಮಾತ್ರ ಪರಿಗಣಿಸಿ; ಬೇಕೆಂದಾಗ ಬಳಸುವ ಮತ್ತು ಬೇಡವೆಂದಾಗ ಬಿಸಾಡುವ ಧೋರಣೆಯನ್ನು ಬಿಡಬೇಕು. ವಲಸೆ ಕಾರ್ಮಿಕರು ವರ್ಷದ ಕೆಲ ಅವಧಿಯಲ್ಲಿ ಮಾತ್ರ ಕೆಲಸ ಮಾಡುವವರಾಗಿದ್ದರೂ, ತಾತ್ಕಾಲಿಕ ಅವಧಿಯವರಾಗಿದ್ದರೂ ಅಥವಾ ದೀರ್ಘಕಾಲದ ಸೇವೆಯಲ್ಲಿದ್ದರೂ ಶೋಷಣೆ ಮತ್ತು ಅಭದ್ರತೆಗೆ ತುತ್ತಾಗುತ್ತಾರೆಂಬುದನ್ನು ಮರೆಯಬಾರದು. ದೇಶದ ಸಾರ್ವಜನಿಕ ನೀತಿಗಳು ಮತ್ತು ಮಧ್ಯಪ್ರವೇಶಗಳು ಮುಕ್ತವಾಗಿ ದೇಶದೆಲ್ಲೆಡೆ ನೆಲೆಸುವ ಅವರ ಹಕ್ಕನ್ನು ರಕ್ಷಿಸುವ ಜೊತೆ ಜೊತೆಗೆ ಮೇಲಿನ ಅಂಶದ ಬಗ್ಗೆಯೂ ಗಮನಹರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News