ತಿರುಗೇಟು ನೀಡಲು ಸಜ್ಜಾಗಿರುವ ಟೀಮ್ ಇಂಡಿಯಾ

Update: 2018-10-28 18:58 GMT

ಮುಂಬೈ,ಅ.28: ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವೆ ನಾಲ್ಕನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಸೋಮವಾರ ನಡೆಯಲಿದೆ.

ಪುಣೆಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 43 ರನ್‌ಗಳ ಜಯ ಗಳಿಸಿದ ವೆಸ್ಟ್‌ಇಂಡೀಸ್ ತಂಡ ಫಾರ್ಮ್‌ಗೆ ಮರಳಿದೆ. ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಸೋಲು ಅನುಭವಿಸಿದ್ದ ವೆಸ್ಟ್‌ಇಂಡೀಸ್ ತಂಡ ಎರಡನೇ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿ ಎಡವಿತ್ತು. ಟೀಮ್ ಇಂಡಿಯಾಕ್ಕೆ ಗೆಲುವು ನಿರಾಕರಿಸಿತ್ತು. ಪಂದ್ಯ ಟೈ ಆಗಿತ್ತು. ಎರಡು ಬಾರಿ 320ಕ್ಕೂ ಅಧಿಕ ರನ್ ದಾಖಲಿಸಿದ್ದ ವಿಂಡೀಸ್ ತಂಡ ಮೂರನೇ ಪಂದ್ಯದಲ್ಲಿ 283 ರನ್ ಗಳಿಸಿತ್ತು. ಇದರೊಂದಿಗೆ ವೆಸ್ಟ್‌ಇಂಡೀಸ್ ತಂಡ ಅಪಾಯಕಾರಿಯಾಗಿ ಪರಿಣಮಿಸಿದೆ.

     ಐದು ಪಂದ್ಯಗಳ ಸರಣಿಯಲ್ಲಿ ಇನ್ನೆರಡು ಪಂದ್ಯಗಳು ಆಡಲು ಬಾಕಿ ಇವೆ. ಸರಣಿ ಗೆಲುವು ದಾಖಲಿಸಲು ಉಭಯ ತಂಡಗಳಿಗೆ ಸಮಾನ ಅವಕಾಶ ಇದೆ. ಈ ಕಾರಣದಿಂದಾಗಿ ಸರಣಿ ಗೆಲುವಿಗೆ ಭಾರತ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ದುರ್ಬಲ ಬೌಲಿಂಗ್ ಹಾಗೂ ತಂಡದ ಮಧ್ಯಮ ಸರದಿಯ ಬ್ಯಾಟಿಂಗ್ ವೈಫಲ್ಯದ ಹಿನ್ನೆಲೆಯಲ್ಲಿ ಭಾರತದ ತಂಡ ಸೋಲು ಅನುಭವಿಸಿದೆ. ನಾಯಕ ವಿರಾಟ್ ಕೊಹ್ಲಿ ಸರಣಿಯಲ್ಲಿ ಹ್ಯಾಟ್ರಿಕ್ ಶತಕ ದಾಖಲಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಉಪನಾಯಕ ರೋಹಿತ್ ಶರ್ಮಾ ಕಳೆದ ಎರಡು ಪಂದ್ಯಗಳಲ್ಲಿ ಚೆನ್ನಾಗಿ ಆಡಿಲ್ಲ. ಆರಂಭಿಕ ದಾಂಡಿಗ ಶಿಖರ್ ಧವನ್ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡು ಬಂದಿದೆ. ಮುಂದಿನ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟಲು ಭಾರತ ಎದುರು ನೋಡುತ್ತಿದೆ. ಆದರೆ ತಂಡದ ನಂ. 5, 6 ಮತ್ತು 7ನೇ ಕ್ರಮಾಂಕದ ಬ್ಯಾಟಿಂಗ್ ಬಲಿಷ್ಠವಾಗಿಲ್ಲ. ಈ ಸ್ಥಾನಗಳಿಗೆ ಶೋಧ ಇನ್ನೂ ಮುಂದುವರಿಸಬೇಕಾಗಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪರ್ ಆಗಿ ಇನ್ನೂ ಮಿಂಚುತ್ತಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ಅವರ ಹೆಲಿಕಾಪ್ಟರ್ ಶಾಟ್ ಕಣ್ಮರೆಯಾಗಿದೆ.

►ಬಲಿಷ್ಠ ತಂಡವಾಗಿ ರೂಪುಗೊಂಡ ವಿಂಡೀಸ್: ಟೆಸ್ಟ್‌ನಲ್ಲಿ ಭಾರತಕ್ಕೆ ಸುಲಭವಾಗಿ ಮಣಿದ ವೆಸ್ಟ್ ಇಂಡೀಸ್ ತಂಡ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿ ರೂಪಗೊಂಡಿದೆ. ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಚೆನ್ನಾಗಿದೆ. ಎರಡು ಬಾರಿ 300ಕ್ಕೂ ಅಧಿಕ ರನ್ ದಾಖಲಿಸಿದ ವೆಸ್ಟ್‌ಇಂಡೀಸ್ ತಂಡ ಕಳೆದ ಪಂದ್ಯದಲ್ಲಿ 300 ರನ್ ದಾಖಲಿಸುವ ಯತ್ನದಲ್ಲಿ 17 ರನ್‌ಗಳ ಕೊರತೆ ಎದುರಿಸಿತ್ತು. ಪುಣೆಯಲ್ಲಿ ಅಗ್ರ ಸರದಿಯ 3 ವಿಕೆಟ್‌ಗಳನ್ನು ವಿಂಡೀಸ್ ಬೇಗನೆ ಕಳೆದುಕೊಂಡಿತ್ತು. ನಾಲ್ಕನೇ ವಿಕೆಟ್‌ಗೆ ಹೆಟ್ಮೆಯರ್ ಮತ್ತು ಹೋಪ್ 45 ಎಸೆತಗಳಲ್ಲಿ 56 ರನ್ ಸೇರಿಸಿದರು. ಇವರು ವಿಶಾಖಪಟ್ಟಣದಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ 144 ರನ್‌ಗಳ ಜೊತೆಯಾಟ ನೀಡಿದ್ದರು. ನಾಯಕ ಜೇಸನ್ ಹೋಲ್ಡರ್ ಮತ್ತು ಶಾಯ್ ಹೋಪ್ 6ನೇ ವಿಕೆಟ್‌ಗೆ 76 ರನ್‌ಗಳ ಜೊತೆಯಾಟ ನೀಡಿದರು.

    ಭಾರತದ ವೇಗದ ಬೌಲಿಂಗ್ ದಾಳಿಗೆ ವಿಂಡೀಸ್‌ನ ಅಗ್ರ ಸರದಿಯ ದಾಂಡಿಗರು ಮತ್ತು ಸ್ಪಿನ್ ದಾಳಿಗೆ ಮಧ್ಯಮ ಸರದಿಯ ದಾಂಡಿಗರು ರನ್ ಗಳಿಸಲು ಪರದಾಡಿದ್ದರು. ಆದರೆ ಶಾಯ್ ಹೋಪ್ ಅರ್ಧಶತಕ ಮತ್ತು ಕೊನೆಯಲ್ಲಿ ನರ್ಸೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ವಿಂಡೀಸ್ ತಂಡದ ಮೊತ್ತವನ್ನು ಏರಿಸಿದ್ದರು. ವೆಸ್ಟ್ ಇಂಡೀಸ್‌ಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶಾಯ್ ಹೋಪ್ 95 ರನ್(113ಎ, 6ಬೌ,3ಸಿ) ಕೊಡುಗೆ ನೀಡುವ ಮೂಲಕ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು. ನರ್ಸೆ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಹೋಪ್ ಸತತ ಅರ್ಧಶತಕ ದಾಖಲಿಸಿ ತಂಡದ ಸ್ಕೋರ್‌ನ್ನು 283ಕ್ಕೆ ತಲುಪಿಸಲು ಸಹಾಯ ಮಾಡಿದ್ದರು.

►ಜಡೇಜ ವಾಪಸ್: ನಾಲ್ಕನೇ ಏಕದಿನ ಪಂದ್ಯಕ್ಕೆ ಆಲ್‌ರೌಂಡರ್ ರವೀಂದ್ರ ಜಡೇಜ ವಾಪಸಾಗಲಿದ್ದಾರೆ. ಯುವ ವೇಗಿ ಖಲೀಲ್ ಅಹ್ಮದ್ 10 ಓವರ್‌ಗಳಲ್ಲಿ 65 ರನ್ ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲಿ ಅವರಿಗೆ 4ನೇ ಪಂದ್ಯದಲ್ಲಿ ಅವಕಾಶ ಸಿಗುವುದು ಕಷ್ಟ. ಕೇದಾರ್ ಜಾಧವ್ ತಂಡಕ್ಕೆ ವಾಪಸಾಗಲಿದ್ದಾರೆ.

ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಕೇದಾರ್ ಜಾಧವ್ ನಡುವೆ 5ನೇ ಸ್ಥಾನಕ್ಕಾಗಿ ಪೈಪೋಟಿ ಕಂಡು ಬಂದಿದೆ.

ಪಂದ್ಯದ ಸಮಯ ಅಪರಾಹ್ನ: 1:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News