ಪ್ರೊ ಕಬಡ್ಡಿ ಲೀಗ್: ಗುಜರಾತ್ ವಿರುದ್ದ ಪಲ್ಟನ್ ಪಲ್ಟಿ

Update: 2018-10-30 18:39 GMT

ಪಾಟ್ನಾ, ಅ.30: ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಗುಜರಾತ್ ಫೋರ್ಚುನ್ ಜೈಂಟ್ಸ್ ತಂಡದ ವಿರುದ್ದ 37-27 ಅಂತರದಿಂದ ಸೋತು ಪಲ್ಟಿಯಾಗಿದೆ.

ಈ ಗೆಲುವಿನ ಮೂಲಕ ಗುಜರಾತ್ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದೆ.

ಪುಣೇರಿ ತಂಡದ ನಿತಿನ್ ಥೋಮರ್ ಆರನೇ ಆವೃತ್ತಿಯ ಲೀಗ್‌ನಲ್ಲಿ 100 ರೈಡ್ ಪಾಯಿಂಟ್ಸ್ ಪಡೆದರು. ಆರು ಅಂಕ ಗಳಿಸಿದ್ದ ಥೋಮರ್ ಕೊನೆಯಲ್ಲಿ ಗಾಯಗೊಂಡು ನಿವೃತ್ತಿಯಾದರು. ಗುಜರಾತ್ ಪರ ಸಚಿನ್ 10 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಪುಣೇರಿ ತಂಡ ಮೊದಲಾರ್ಧದಲ್ಲಿ 8-10 ಹಿನ್ನಡೆಯಲ್ಲಿತ್ತು. ಥೋಮರ್ ಗಾಯಗೊಂಡ ಕಾರಣ ಪುಣೇರಿ 15ನೇ ನಿಮಿಷದಲ್ಲಿ ಆಲೌಟಾಯಿತು. ಟೈಟಾನ್ಸ್‌ಗೆ ಜಯ: ದಿನದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು 53-32 ಅಂತರದಿಂದ ಹೀನಾಯವಾಗಿ ಸೋಲಿಸಿತು.

ತೆಲುಗು ತಂಡದ ರಾಹುಲ್ ಚೌಧರಿ ಒಟ್ಟು 17 ರೈಡ್ ಪಾಯಿಂಟ್ ಪಡೆದು ತಂಡದ ದೊಡ್ಡ ಅಂತರದ ಗೆಲುವಿಗೆ ನೆರವಾದರು. ಈ ವರ್ಷದ ಕಬಡ್ಡಿ ಲೀಗ್‌ನಲ್ಲಿ ಮೊದಲ ಬಾರಿ ಸೂಪರ್-10 ಗಳಿಸಿದರು. ನಾಯಕ ವಿಶಾಲ್ ಒಟ್ಟು 9 ಅಂಕ ಗಳಿಸಿದರು.

 ಪಾಟ್ನಾ ಸ್ಪರ್ಧೆಯ ಮೊದಲ 10 ನಿಮಿಷಗಳನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಹೋರಾಟವನ್ನೇ ನೀಡಲಿಲ್ಲ. ಭರ್ಜರಿ ಜಯ ಸಾಧಿಸಿರುವ ಟೈಟಾನ್ಸ್ ಒಟ್ಟು 22 ಅಂಕ ಗಳಿಸಿ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News