ಕನ್ನಡ ಭಾಷೆಯ ಅಭಿವೃದ್ಧಿಗೆ ನ್ಯಾಯಾಲಯಗಳು ಜತೆಗೂಡಲಿ: ಪ್ರೊ.ನಿಸಾರ್ ಅಹ್ಮದ್
ಬೆಂಗಳೂರು, ನ.1: ಕನ್ನಡ ಅಭಿವೃದ್ಧಿಗಾಗಿ ಕಾನೂನು ರೂಪಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳ ಕನ್ನಡ ಪರವಾಗಿ ನಿಲ್ಲಬೇಕಿದೆ ಎಂದು ಹಿರಿಯ ಕವಿ ಪದ್ಮಶ್ರಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ತಿಳಿಸಿದರು.
ಗುರುವಾರ ಸಪ್ನ ಬುಕ್‌ಹೌಸ್ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ, ಕನ್ನಡ ರಾಜ್ಯೋತ್ಸವ ಪ್ರಯುಕ್ತ ’ಕನ್ನಡ-ಅಂದು-ಇಂದು-ಮುಂದು’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಲಾ ಶಿಕ್ಷಣದಿಂದಲೇ ಕನ್ನಡ ಭಾಷೆ ಕಡ್ಡಾಯ, ಸರೋಜಿನಿ ಮಹಿಷಿ ವರದಿ ಜಾರಿ ಸೇರಿದಂತೆ ಕನ್ನಡ ಪರವಾದ ವಿಷಯಗಳಲ್ಲಿ ನ್ಯಾಯಾಲಯಗಳ ತೀರ್ಪು ಕನ್ನಡ ಭಾಷೆಯ ಉಳಿವಿಗೆ ವ್ಯತಿರಿಕ್ತವಾಗಿದೆ. ಕನ್ನಡ ಭಾಷಾ ಅಭಿವೃದ್ಧಿಗೆ ಯಾವ ಮಾರ್ಗ ಅನುಸರಿಸಬೇಕು ಎನ್ನುವ ಪ್ರಶ್ನೆ ಎದ್ದಿದೆ. ಹೀಗಾಗಿ ನ್ಯಾಯಾಲಯಗಳು ಆಯಾ ಪ್ರಾದೇಶಿಕ ಭಾಷೆಯ ಪರವಾಗಿ ಧ್ವನಿಗೂಡಿಸಬೇಕೆಂದು ಅವರು ಹೇಳಿದರು.
ಕನ್ನಡ ನಾಡಿನ ಸೊಗಡನ್ನು ಉಳಿಸಿಕೊಳ್ಳಲು ನಾವು ಸಂಪೂರ್ಣ ವಿಫಲರಾಗಿದ್ದೇವೆ. ಗದಗ ಜಿಲ್ಲೆಯಲ್ಲಿ ತಯಾರಿಸುವ ಪಾದರಕ್ಷೆ ಅನ್ನು ಕೊಲ್ಲಾಪುರ ಚಪ್ಪಲಿಯೆಂದು, ಇಲ್ಲೆ ಸಿದ್ಧಗೊಳಿಸಿದ ಸೀರೆಯನ್ನು ಮಹಾರಾಷ್ಟ್ರದ ಸೀರೆ ಎಂದೇಳಿ ಮಾರಾಟ ಮಾಡಲಾಗುತ್ತಿದೆ. ಇಂತಹ ಮನಸ್ಥಿತಿ ಬದಲಾಯಿಸಿಕೊಂಡು, ಕನ್ನಡದ ಅಸ್ಮಿತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಅವರು ಆಶಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಕನ್ನಡ ಭಾಷೆ ಅಭಿವೃದ್ಧಿಗೆ ’ ಪ್ರತ್ಯೇಕ ಭಾಷಾ ಕಾಯ್ದೆ’ ಜಾರಿಗೆ ಚಿಂತನೆ ನಡೆಸಲಾಗಿದೆ.ಆದರೆ, ಹೊರರಾಜ್ಯದ ಐಎಎಸ್ ಅಧಿಕಾರಿಗಳು ಈ ಕಾಯ್ದೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ವಿಷಾದಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಬೆಂಗಳೂರಿನಲ್ಲಿ ಕೆಲ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ, ದಂಡ ವಿಧಿಸುವ ನಿಯಮ ಇದೆ. ಅದೇ ರೀತಿ ಕೆಲ ಕಂಪೆನಿಗಳಲ್ಲೂ ಇದೇ ಪರಿಸ್ಥಿತಿ ಇದೆ. ಇಂತಹ ಶಾಲೆ, ಕಂಪೆನಿಗಳ ವಿರುದ್ದ ಕಠಿಣ ಕಾನೂನು ಜಾರಿ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ದೇಶದೊಳಗೆ ಪುಸ್ತಕ ಸಾಹಿತ್ಯ ಮರೆಯಾಗುವ ಸ್ಥಿತಿಯಲ್ಲಿವೆ ಎನ್ನುವ ಮಾತುಗಳಿವೆ. ಯುವ ಪೀಳಿಗೆ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿಯೆ ಹೆಚ್ಚಾಗಿ ಓದುವುದು, ಬರೆಯುವುದು ಮಾಡುತ್ತಿದ್ದಾರೆ. ಈ ಹೊಸ ಲೇಖಕರಿಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಪ್ನ ಬುಕ್‌ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ, ದೊಡ್ಡೆಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.