ರೈಲು ಹಳಿಗಳು ಸಾರ್ವಜನಿಕರಿಗೆ ಒಳಿತನ್ನು ಮಾಡುತ್ತಿವೆಯೇ?

Update: 2018-11-02 06:45 GMT

ಅವಾಸ್ತವಿಕ ಪ್ರತಿಪಾದನೆಗಳು ಬೇರೆಯವರ ಮೇಲೆ ಗೂಬೆ ಹೊರಿಸುವುದಕ್ಕೆ ಬೇಕಾದ ಭೂಮಿಕೆಯನ್ನು ಒದಗಿಸುತ್ತಾ ತನ್ನ ಹೊಣೆಗಾರಿಕೆಯನ್ನು ಮರೆಮಾಚಿಸುತ್ತದೆ. ಈ ಪರಸ್ಪರ ಮೂದಲಿಕೆಗಳ ಆಟವನ್ನು ಜವಾಬ್ದಾರಿಯೆಂಬ ಹೆಸರಿನಲ್ಲಿ ನಡೆಸಲಾಗುತ್ತಿದೆ ಮಾತ್ರವಲ್ಲದೆ ಇದರಲ್ಲಿ ಸಾಕಷ್ಟು ರಾಜಕೀಯವೂ ಸೇರಿಕೊಂಡಿದೆ.


ರೈಲು ದುರಂತಗಳ ಬಗ್ಗೆ ನಡೆಯುವ ಚರ್ಚೆಗಳು ಬಹಳಷ್ಟು ಸಾರಿ ಪರಸ್ಪರರನ್ನು ಹೀಗೆಳೆಯುತ್ತಾ ಅವಾಸ್ತವಿಕ ನೆಲೆಯನ್ನು ಪ್ರವೇಶಿಸಿಬಿಡುತ್ತವೆ. ಅಕ್ಟೋಬರ್ 19ರಂದು ಅಮೃತ್‌ಸರ್ ಬಳಿ 60 ಜನರನ್ನು ಬಲಿ ತೆಗೆದುಕೊಂಡ ರೈಲು ದುರಂತದ ಬಗ್ಗೆಯೂ ಆಸಕ್ತ ಗುಂಪುಗಳು ಅದೇ ಬಗೆಯ ಪರಸ್ಪರ ಬೈಯ್ದೆಟಗಳಲ್ಲಿ ತೊಡಗಿಕೊಂಡಿವೆ. ಈ ದುರಂತವನ್ನು ತಡೆಯಲು ಏನೆಲ್ಲಾ ಮಾಡಬಹುದಾಗಿತ್ತೆಂಬ ಬಗ್ಗೆ ಹಲವಾರು ಪ್ರತಿಪಾದನೆಗಳು ಮತ್ತು ಹೇಳಿಕೆಗಳೂ ಸಹ ಹೊರಬಿದ್ದಿವೆ. ಒಂದು ವೇಳೆ ರೈಲಿನ ಮೋಟಾರ್‌ಮ್ಯಾನ್ ಇಂಜಿನನ್ನು ಸ್ವಲ್ಪನಿಧಾನಗೊಳಿಸಿದ್ದರೆ ಅಥವಾ ರೈಲು ಪೊಲೀಸರು ಇನ್ನೂ ಸ್ವಲ್ಪಜಾಗರೂಕರಾಗಿದ್ದರೆ ಈ ದುರಂತ ತಡೆಯಬಹುದಿತ್ತು ಅನ್ನುವುದರಿಂದ ಮೊದಲುಗೊಂಡು ದಸರಾ ಉತ್ಸಾಹಿಗಳು ರೈಲು ಹಳಿಯನ್ನು ಆತುಕೊಳ್ಳದೆ ಸ್ವಲ್ಪ ದೂರ ಕಾಯ್ದುಕೊಂಡಿದ್ದರೆ ಈ ದುರಂತವನ್ನು ತಡೆಯಬಹುದಿತ್ತು ಅನ್ನುವವರೆಗೆ ಈ ವಾದಗಳು ಹರಡಿಕೊಂಡಿವೆ.

ಈ ವಾದಗಳು ಕ್ರಮೇಣ ಎಂತಹ ಅಸಂಬದ್ಧ ಮಟ್ಟವನ್ನು ಮುಟ್ಟಿದವೆಂದರೆ ಆ ದಸರಾ ಉತ್ಸಾಹಿಗಳು ರೈಲು ಹಳಿಯ ಮೇಲೆ ಮೈಮರೆತು ‘ಸ್ವಂತಿ’ (ಸೆಲ್ಫಿ) ತೆಗೆದುಕೊಂಡಿದ್ದು ಕೂಡಾ ದುರಂತಕ್ಕೆ ಕಾರಣವೆಂಬಂತೆ ವಾದಿಸಲಾಗುತ್ತಿದೆ. ಅದೇ ರೀತಿ ಒಂದು ರಾಜಕೀಯ ಪಕ್ಷವೊಂದಕ್ಕೆ ಸೇರಿದ ಗಣ್ಯರು ಈ ಉತ್ಸವದಲ್ಲಿ ಭಾಗವಹಿಸಲು ಹೋಗದೇ ಇದ್ದಿದ್ದರೆ ಸಂದರ್ಭ ಭಿನ್ನವಾಗಿರುತ್ತೆಂಬ ಹೇಳಿಕೆಯನ್ನು ತೇಲಿಬಿಡಲಾಗುತ್ತಿದೆ.

ಈ ಅವಾಸ್ತವಿಕ ಪ್ರತಿಪಾದನೆಗಳು ಬೇರೆಯವರ ಮೇಲೆ ಗೂಬೆ ಹೊರಿಸುವುದಕ್ಕೆ ಬೇಕಾದ ಭೂಮಿಕೆಯನ್ನು ಒದಗಿಸುತ್ತಾ ತನ್ನ ಹೊಣೆಗಾರಿಕೆಯನ್ನು ಮರೆಮಾಚಿಸುತ್ತದೆ. ಈ ಪರಸ್ಪರ ಮೂದಲಿಕೆಗಳ ಆಟವನ್ನು ಜವಾಬ್ದಾರಿಯೆಂಬ ಹೆಸರಿನಲ್ಲಿ ನಡೆಸಲಾಗುತ್ತಿದೆ ಮಾತ್ರವಲ್ಲದೆ ಇದರಲ್ಲಿ ಸಾಕಷ್ಟು ರಾಜಕೀಯವೂ ಸೇರಿಕೊಂಡಿದೆ. ಆದರೆ ಕೇಳಲೇ ಬೇಕಿರುವ ಪ್ರಶ್ನೆಯೇನೆಂದರೆ: ತಮ್ಮ ಹತ್ತಿರದ ಭೂಮಿಯ ಮೇಲೆ ಹಾಕಲ್ಪಟ್ಟಿರುವ ಈ ರೈಲು ಹಳಿಗಳ ಬಗ್ಗೆ ಅಥವಾ ರೈಲು ಹಳಿಗಳ ಆಸುಪಾಸಿನ ರೈಲ್ವೆ ಭೂಮಿಯ ಬಗ್ಗೆ ಸಾರ್ವಜನಿಕರ ಗ್ರಹಿಕೆ ಏನಿದೆ? ರೈಲು ಹಳಿಯ ಸಮೀಪ ಇರುವ ಭೂಮಿಯನ್ನು ಜನರು ಏಕೆ ಆಗಾಗ ಅಥವಾ ಖಾಯಮ್ಮಾಗಿ ಆಕ್ರಮಿಸಿಕೊಳ್ಳುತ್ತಾರೆ? ರೈಲುಹಳಿಗಳ ಜೊತೆ ಸಾರ್ವಜನಿಕರ ಈ ಮುಖಾಮುಖಿಯ ಪರಿಣಾಮಗಳೇನು?

ರೈಲು ಹಳಿಗಳ ಮತ್ತು ಅದರ ಸಮೀಪದ ನಡುವಿನ ಭೌತಿಕ ಸಂಬಂಧದ ಬಗ್ಗೆ ಸಾಹಿತ್ಯದಲ್ಲಿ ಮತ್ತು ವಸಾಹತೋತ್ತರ ಬರಹಗಳಲ್ಲಿ ಒಂದು ನಿರಂತರವಾದ ಸಂಘರ್ಷಮಯ ಸಂಬಂಧವೇ ಕಂಡುಬರುತ್ತದೆ. ಗಾಂಧೀವಾದದಿಂದ ಪ್ರಭಾವಿತಗೊಂಡಿರುವ ಕೆಲವು ಹೆಸರಾಂತ ಬರಹಗಾರರಂತೂ ಹಳ್ಳಿಗಾಡಿನ ಭೂಮಿಯನ್ನು ಬೇಧಿಸಿಕೊಂಡು ಹೋಗುವ ಈ ರೈಲು ಹಳಿಗಳು ಗ್ರಾಮಸ್ಥರ ಹೃದಯಗಳಲ್ಲೂ ಅಷ್ಟೇ ದೊಡ್ಡದಾದ ಗಾಯಗಳನ್ನು ಮಾಡಿವೆ ಎಂದು ಭಾವಿಸುತ್ತಾರೆ. ಬೆಟ್ಟಗುಡ್ಡಗಳನ್ನು ಕಡಿದು ನಿರ್ಮಿಸಲಾದ ರೈಲು ಹಳಿಗಳಿಗೆ ಸಾಮ್ರಾಜ್ಯಶಾಹಿ ಪ್ರಭುತ್ವವೇ ಹೊಣೆಗಾರನೆಂದು ವಸಾಹತೋತ್ತರ ಬರಹಗಾರರು ಸಹಜವಾಗಿಯೇ ಪ್ರತಿಪಾದಿಸುತ್ತಾರೆ. ಸಾರ್ವಜನಿಕ ಒಳಿತಿಗಾಗಿ ನಿರ್ಮಿಸಲ್ಪಟ್ಟವೆಂದು ನಂಬಲಾಗಿರುವ ರೈಲು ಹಳಿಗಳು ಮತ್ತು ರೈಲುಗಳು ಈ ಹಿಂದೆ ರೈತಾಪಿಗೆ ಸೇರಿದ್ದ ಖಾಸಗಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದವು. ರೈಲು ಹಳಿಗಳ ಬಳಿ ಇರುವ ಜಮೀನು ಮಿಲಿಟರಿ ಜಮೀನಿನಂತಲ್ಲ. ಅವು ಸಾರ್ವಜನಿಕ ಜಮೀನಾಗಿವೆ. ಹೀಗಾಗಿ ಆ ಸಾರ್ವಜನಿಕ ಭೂಮಿಯು ವಸತಿಗೆ ಅಥವಾ ಉತ್ಸವಗಳಿಗೆ ಗ್ರಾಮಸ್ಥರಿಗೆ ದೊರೆಯುತ್ತದೆ. ಕೆಲವು ಸಣ್ಣ ಪಟ್ಟಣಗಳಲ್ಲಿ ಹಾಗೂ ದೊಡ್ಡ ಹಳ್ಳಿಗಳಲ್ಲಿ ಈ ಜಮೀನಿನಲ್ಲಿ ದಸರಾ ಉತ್ಸವಗಳು ಸಾಂಪ್ರದಾಯಿಕವಾಗಿಯೇ ನಡೆದುಕೊಂಡು ಬಂದಿದೆ. ಹೀಗಾಗಿ ಭಾರತದ ಜನ ರೈಲು ಹಳಿಗಳ ಪಕ್ಕದಲ್ಲಿರುವ ಜಮೀನನ್ನು ತಾತ್ಕಾಲಿಕವಾಗಿಯೋ ಖಾಯಮ್ಮಾಗಿಯೋ ಆಕ್ರಮಿಸಿಕೊಳ್ಳುವುದು ತಮ್ಮ ಸಾಂಪ್ರಾದಾಯಿಕ ಹಕ್ಕೆಂದೇ ಪರಿಗಣಿಸಿದ್ದಾರೆ. ಒಂದೋ ಖಾಯಂ ವಸತಿಗಾಗಿ ಅಥವಾ ತಾತ್ಕಾಲಿಕ ಉತ್ಸವಗಳಿಗಾಗಿ. ಈ ಭೂಮಿಯನ್ನು ಆಕ್ರಮಿಸಿಕೊಂಡಿರುವ ಜನರ ಬಗ್ಗೆ ರೈಲು ಆಡಳಿತವು ಉದಾರಿಯಾಗಿಲ್ಲದಿದ್ದರೂ ಮಿಲಿಟರಿಗೆ ಹೋಲಿಸಿದಲ್ಲಿ ಸ್ವಲ್ಪ ಬಿಟ್ಟುಕೊಡುವ ಧೋರಣೆಯನ್ನು ಅನುಸರಿಸುತ್ತದೆ.

ಮುಂಬೈನಲ್ಲಿ ಸಮಯಕ್ಕೆ ಸರಿಯಾಗಿ ಕೆಲಸದ ಜಾಗವನ್ನು ಸೇರಿಕೊಳ್ಳುವ ತವಕದಲ್ಲಿರುವ ಮುಂಬೈ ರೈಲು ಪ್ರಯಾಣಿಕರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಸಮಯಕ್ಕೆ ಸರಿಯಾಗಿ ಸೇರಬೇಕೆಂಬ ಅವರ ಆತಂಕವು ರೈಲು ಟ್ರಾಕನ್ನು ಹಾದುಹೋಗುವ ರೈಲುಗಳ ವೇಗದ ಬಗ್ಗೆ ಗಮನವನ್ನೇ ನೀಡದಂತೆ ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ಈ ಕಾರಣದಿಂದಾಗಿ ಮುಂಬೈನಲ್ಲಿ 20,000 ಜನ ಮರಣಹೊಂದಿರುವುದಲ್ಲದೆ ಅಷ್ಟೇ ಸಂಖ್ಯೆಯ ಜನರಿಗೆ ಮಾರಣಾಂತಿಕ ಗಾಯಗಳಾಗಿವೆಯೆಂದು ಮಾಧ್ಯಮದ ವರದಿಗಳು ಹೇಳುತ್ತವೆ. ಮತ್ತೊಂದು ಕಡೆ ಇದೇ ರೈಲುಗಳು ಮಧ್ಯಮ ವರ್ಗದ ಪ್ರಯಾಣಿಕರನ್ನು ಕರೆದೊಯ್ಯುತ್ತವೆ. ರೈಲು ಹಳಿಗಳ ಪಕ್ಕದ ಭೂಮಿಯಲ್ಲಿ ವಸತಿ ಮಾಡಿಕೊಂಡಿರುವ ಬಡವರ್ಗಗಳ ಬಗ್ಗೆ ಈ ಜನರ ಧೋರಣೆ ನೈತಿಕ ವಾಗಿ ತಲೆತಗ್ಗಿಸುವಂತಿರುತ್ತದೆ. ಈ ಪ್ರಯಾಣಿಕರು ರೈಲು ಪ್ರಯಾಣದ ಕಷ್ಟಗಳನ್ನು ಅನುಭವಿಸುತ್ತಿದ್ದರೂ ರೈಲು ಹಳಿಗಳ ಪಕ್ಕದಲ್ಲಿರುವ ಸ್ಲಮ್ಮುಗಳೇ ತಮ್ಮ ಅನುದಿನದ ಬೇಸರ ಮತ್ತು ಹತಾಷೆಗಳಿಗೆ ಕಾರಣವೆಂದು ಭಾವಿಸುತ್ತಾರೆ.

ಅದೇನೇ ಇದ್ದರೂ, ರೈಲು ಹಳಿಗಳು ಮತ್ತು ಮನುಷ್ಯರ ನಡುವೆ ಏರ್ಪಟ್ಟಿರುವ ಈ ಸಂಘಷರ್ದ ಹಿನ್ನೆಲೆಯಲ್ಲಿ ಜನರು ತಮಗೆ ಅನಾಹುತ ಕಾದಿದ್ದರೂ ಗಡಿ ದಾಟಿ ರೈಲು ಹಳಿಗಳನ್ನು ಏರಿ ಕೂರುವ ತೀರ್ಮಾನಗಳನ್ನು ಬೇಕಾಬಿಟ್ಟಿಯಾಗಿ ತೆಗೆದುಕೊಳ್ಳುವುದಿಲ್ಲ ಎಂದು ವಾದಿಸಬಹುದೇ? ವಾಸ್ತವವಾಗಿ ಅವರು ವಾಸಿಸುವ ಪ್ರದೇಶ ಮತ್ತು ಅವರು ಕೆಲಸ ಮಾಡುವ ಪರಿಸ್ಥಿತಿಗಳು ಹುಟ್ಟುಹಾಕುವ ಆತಂಕಗಳು ರಿಸ್ಕು ತೆಗೆದುಕೊಳ್ಳುವಂತೆ ಮಾಡುತ್ತದೆ. ಅದೇ ರೀತಿ ರೈಲುಗಳು ಕೂಡಾ ತಮ್ಮಂತೇ ತಾವೇ ಹಳಿ ಬಿಟ್ಟು ಮನುಷ್ಯರನ್ನು ಕೊಲ್ಲಲು ಧಾವಿಸುವುದಿಲ್ಲ ಅಥವಾ ವಸತಿ ಪ್ರದೇಶಗಳಿಗೆ ನುಗ್ಗಿ ಬಿಡುವುದಿಲ್ಲ ಅಥವಾ ಹಳಿಗಳ ಮೇಲೆ ಕೂತಿರುವ ಗುಂಪನ್ನೇ ಗುರಿ ಮಾಡಿ ಹೊರಟಿರುವುದಿಲ್ಲ. ರೈಲು ಹಳಿಗಳು ವೈಜ್ಞಾನಿಕ ತರ್ಕದ ಆಧಾರದ ಮೇಲೆ ನಡೆದರೆ ಮನುಷ್ಯರ ತರ್ಕವು ಕೆಲವೊಮ್ಮೆ ಆತಂಕ ಮತ್ತು ಆವೇಶಗಳ ಅಧೀನವಾಗಿರುತ್ತವೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News